ಬೆಂಗಳೂರು,ನ.25- ದೀಪಾವಳಿ ಹಬ್ಬ ನಮ ಕೈ ಹಿಡಿಯಲಿಲ್ಲ. ಕಾರ್ತಿಕಮಾಸದಲ್ಲಿ ಶುಭ ಸಮಾರಂಭಗಳು ಹೆಚ್ಚಾಗಿ ನಡೆಯಲಿದ್ದು, ಈಗಲಾದರೂ ಉತ್ತಮ ಬೆಲೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಹೂ ಬೆಳೆಗಾರರ ಆಸೆಗೆ ತಣ್ಣಿರೆರಚಿದಂತಾಗಿದೆ.
ಹಬ್ಬಗಳ ಸಂದರ್ಭದಲ್ಲಿ ಇವುಗಳ ಬೆಲೆ ಏರುವುದು ಸಾಮಾನ್ಯ. ಆದರೆ ಈ ಬಾರಿ ದೀಪಾವಳಿ ಹಬ್ಬದಲ್ಲಿ ಅಷ್ಟೇನೂ ಹೆಚ್ಚಾಗಿರಲಿಲ್ಲ. ಕಳೆದ ಕೆಲವು ದಿನಗಳಿಂದ ಸೇವಂತಿಗೆ ಬೆಲೆ ಕುಸಿತವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಳೆ ಕೊರತೆ ಹಾಗೂ ವಿದ್ಯುತ್ ಕಣ್ಣಾಮುಚ್ಚಾಲೆ ನಡುವೆ ಕಷ್ಟಪಟ್ಟು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಸೇವಂತಿಗೆ ಕೆಜಿಗೆ ಚಿಲ್ಲರೆಯಾಗಿ 50 ರಿಂದ 60 ರೂ.ಗೆ ಮಾರಾಟವಾಗುತ್ತಿದೆ. ಇನ್ನು ಮಾರುಕಟ್ಟೆಯಲ್ಲಂತೂ ಕೇಳುವ ಹಾಗೆಯೇ ಇಲ್ಲ. ಕಟಾವು ಮಾಡಿ ಮಾರುಕಟ್ಟೆಗೆ ತಂದರೆ ಬೇಕಾಬಿಟ್ಟಿಯಾಗಿ ಕೇಳುತ್ತಾರೆ.
ಕೂಲಿ, ಸಾಗಾಟ ವೆಚ್ಚವೂ ಕೂಡಾ ಸಿಗುತ್ತಿಲ್ಲ. ಇದರಿಂದ ಭಾರೀ ನಷ್ಟವಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಹೆಚ್ಚಾಗಿ ಹೂ ಬೆಳೆಯುತ್ತಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಿಗೆ ಹೂವನ್ನು ಕೊಂಡೊಯ್ಯಲಾಗುತ್ತಿದೆ. ಆದರೆ ಯಾವ ಮಾರುಕಟ್ಟೆಯಲ್ಲೂ ಸಹ ಬೆಲೆ ಸಿಗದೇ ಸಾಲದ ಸುಳಿಗೆ ಸಿಗುವಂತಾಗಿದೆ.
