ಬೆಂಗಳೂರು: ಅವಧಿಪೂರ್ವವಾಗಿ ಜನಿಸಿದ ಹಾಗೂ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್ಐಸಿಯು) ಚಿಕಿತ್ಸೆ ಪಡೆದು ಮನೆಗೆ ಮರಳಿದ ಮಕ್ಕಳ ದೀರ್ಘಕಾಲೀನ ಬೆಳವಣಿಗೆಯ ಮೇಲೆ ನಿಗಾ ವಹಿಸಲು, ಮಾರತಹಳ್ಳಿಯ ರೈನ್ಬೋ ಚಿಲ್ಡ್ರನ್ಸ್ ಆಸ್ಪತ್ರೆಯಲ್ಲಿ ‘ಬ್ಲೂಮ್’ ಎಂಬ ವಿಶೇಷ ಕ್ಲಿನಿಕ್ ಆರಂಭಿಸಲಾಗಿದೆ. ಹಿರಿಯ ನವಜಾತ ಶಿಶು ತಜ್ಞ ಮತ್ತು ಪೀಡಿಯಾಟ್ರಿಕ್ಸ್ ವಿಭಾಗದ ಅಧ್ಯಕ್ಷ ಡಾ. ಅರವಿಂದ್ ಶೆಣೈ ಹಾಗೂ ತಜ್ಞ ವೈದ್ಯರಾದ ಡಾ. ಸಂದೀಪ್ ಆರ್., ಡಾ. ಶ್ರೀಕಾಂತ್ ಕುಲಕರ್ಣಿ ಮತ್ತು ಡಾ. ಸಹನಾ ಎಸ್. ಅವರ ತಂಡ ಈ ಘಟಕವನ್ನು ಮುನ್ನಡೆಸಲಿದೆ.
ಎನ್ಐಸಿಯುಯಿಂದ ಬಿಡುಗಡೆಯಾದ ನಂತರವೂ ಮಕ್ಕಳ ಬೆಳವಣಿಗೆಯನ್ನು ನಿಯಮಿತವಾಗಿ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿರುವ ಆಸ್ಪತ್ರೆಯ ನವಜಾತ ಶಿಶು ಮತ್ತು ಮಕ್ಕಳ ತಜ್ಞ ಡಾ. ಸಂದೀಪ್ ಆರ್. “ಮಗು ಎನ್ಐಸಿಯುಯಿಂದ ಮನೆಗೆ ಬಂದಾಗ ಪೋಷಕರು ನಿರಾಳರಾಗುತ್ತಾರೆ; ಆದರೆ ಮಗುವಿನ ಜೀವನದ ಮೊದಲ ಎರಡು ವರ್ಷಗಳು ಮೆದುಳಿನ ಬೆಳವಣಿಗೆಗೆ ಅತ್ಯಂತ ನಿರ್ಣಾಯಕವಾಗಿರುತ್ತವೆ,” ಎಂದು ತಿಳಿಸಿದರು.
“ಉದಾಹರಣೆಗೆ, 28 ವಾರಗಳಿಗೆ ಜನಿಸಿದ ಮಗು 6ರಿಂದ 8 ವಾರ ಎನ್ಐಸಿಯುನಲ್ಲಿ ಚಿಕಿತ್ಸೆ ಪಡೆದು ಆರೋಗ್ಯವಾಗಿಯೇ ಮನೆಗೆ ಹೋಗಬಹುದು. ಆದರೆ ದೃಷ್ಟಿ, ಶ್ರವಣ, ದೈಹಿಕ ಚಲನೆ ಅಥವಾ ಬೆಳವಣಿಗೆಯ ಮೈಲಿಗಲ್ಲುಗಳಿಗೆ ಸಂಬಂಧಿಸಿದ ಕೆಲವು ಸವಾಲುಗಳು ಹುಟ್ಟಿದ ತಕ್ಷಣ ಕಾಣಿಸುವುದಿಲ್ಲ. ಮಗು ಬೆಳೆದಂತೆ ಇವು ಕಾಣಿಸಿಕೊಳ್ಳುವುದರಿಂದ, ಸರಿಯಾದ ಸಮಯದಲ್ಲಿ ತಜ್ಞರ ತಪಾಸಣೆ ಮಾಡಿಸಿದರೆ ಮಗುವಿನ ಭವಿಷ್ಯ ಮತ್ತು ಜೀವನಮಟ್ಟದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ,” ಎಂದು ಅವರು ವಿವರಿಸಿದರು.
ಸಾಮಾನ್ಯ ಮಕ್ಕಳ ವೈದ್ಯರ ಭೇಟಿಗಳು ಹೆಚ್ಚಾಗಿ ಲಸಿಕೆ ಮತ್ತು ಸಣ್ಣಪುಟ್ಟ ಕಾಯಿಲೆಗಳಿಗೆ ಸೀಮಿತವಾಗಿರುತ್ತವೆ. ಆದರೆ ‘ಬ್ಲೂಮ್’ ಕ್ಲಿನಿಕ್ನಲ್ಲಿ ಮಗುವಿನ ದೈಹಿಕ ಬೆಳವಣಿಗೆ, ವಯಸ್ಸಿಗೆ ತಕ್ಕ ಬೆಳವಣಿಗೆಯ ಹಂತಗಳು, ದೃಷ್ಟಿ ಮತ್ತು ಶ್ರವಣ ಸಾಮರ್ಥ್ಯವನ್ನು ಸಮಗ್ರವಾಗಿ ಪರೀಕ್ಷಿಸಲಾಗುತ್ತದೆ. ಇದಕ್ಕಾಗಿ ನಿಯೋನಾಟಾಲಜಿಸ್ಟ್ಗಳು, ಮಕ್ಕಳ ತಜ್ಞರು, ಡೆವಲಪ್ಮೆಂಟಲ್ ಪೀಡಿಯಾಟ್ರಿಷಿಯನ್ಸ್, ನರರೋಗ ತಜ್ಞರು, ಡೆವಲಪ್ಮೆಂಟಲ್, ಆಕ್ಯುಪೇಷನಲ್ ಮತ್ತು ಸ್ಪೀಚ್ ಥೆರಪಿಸ್ಟ್ಗಳು, ಆಡಿಯಾಲಜಿಸ್ಟ್ಗಳು ಹಾಗೂ ನೇತ್ರತಜ್ಞರು ಒಂದೇ ಸೂರಿನಡಿ ಲಭ್ಯವಿರುತ್ತಾರೆ.
ಈ ಕ್ಲಿನಿಕ್ನಲ್ಲಿ ಮುಂಚಿತವಾಗಿಯೇ ನಿಗದಿಪಡಿಸಿದ ಫಾಲೋ-ಅಪ್ ವೇಳಾಪಟ್ಟಿ ಇರುವುದರಿಂದ, ಮಗುವಿನ ಯಾವ ವಯಸ್ಸಿನಲ್ಲಿ ಯಾವ ತಜ್ಞರನ್ನು ಭೇಟಿಯಾಗಬೇಕು ಎಂಬ ಸ್ಪಷ್ಟ ಮಾರ್ಗದರ್ಶನ ಪೋಷಕರಿಗೆ ಸಿಗುತ್ತದೆ. ಇದರಿಂದ ಬೆಳವಣಿಗೆಯ ಪ್ರಮುಖ ಹಂತಗಳು ತಪ್ಪಿಹೋಗದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಮನೆಯಲ್ಲೇ ಮಗುವಿನ ಬೆಳವಣಿಗೆಗೆ ಪೂರಕವಾಗಿ ಪೋಷಕರು ಮಾಡಬಹುದಾದ ಸರಳ ಚಟುವಟಿಕೆಗಳ ಬಗ್ಗೆಯೂ ಥೆರಪಿಸ್ಟ್ಗಳು ಮಾಹಿತಿ ನೀಡಲಿದ್ದಾರೆ. ಈ ಕ್ಲಿನಿಕ್ ಸೋಮವಾರದಿಂದ ಶನಿವಾರದವರೆಗೆ ಮಾರತಹಳ್ಳಿಯ ರೈನ್ಬೋ ಚಿಲ್ಡ್ರನ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲಿದೆ.
