Homeರಾಜ್ಯಐಟಿ-ಬಿಟಿ ಸೇರಿ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ಮೀಸಲಾತಿಗೆ ಕರವೇ ಪ್ರತಿಭಟನಾ ಮೆರವಣಿಗೆ

ಐಟಿ-ಬಿಟಿ ಸೇರಿ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ಮೀಸಲಾತಿಗೆ ಕರವೇ ಪ್ರತಿಭಟನಾ ಮೆರವಣಿಗೆ

ಬೆಂಗಳೂರು, ನ.24- ಐಟಿ-ಬಿಟಿ ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶದ ಕಾಯ್ದೆಯನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ ಡಿಸೆಂಬರ್‌ 12ರಂದು ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ ನಿರ್ಧರಿಸಿದೆ.

ನ್ಯಾಷನಲ್‌ ಕಾಲೇಜು ಮೈದಾನದಿಂದ ವಿಧಾನಸೌಧದವರೆಗೆ ಮೆರವಣಿಗೆ ನಡೆಸಿ, ಬಳಿಕ ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ.ಕರವೇಯ ಆಗ್ರಹ ಅಭಿಯಾನದ 22ನೇ ದಿನದಂದು ಅವರು ನಾಗವಾರದ ಮಾನ್ಯತಾ ಟೆಕ್‌ ಪಾರ್ಕ್‌ಗೆ ಭೇಟಿ ನೀಡಿ, ಅಲ್ಲಿನ ಸುಮಾರು 45 ಐಟಿ-ಬಿಟಿ ಹಾಗೂ ಖಾಸಗಿ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದರು.

ಶೀತಲಗೃಹದಲ್ಲಿರುವ ವಿಧೇಯಕ ಜಾರಿಗೆ ಒತ್ತಾಯ:
ಕರ್ನಾಟಕ ರಾಜ್ಯ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ವಿಧೇಯಕ-2024 ಅನ್ನು ಸರ್ಕಾರ ಕೂಡಲೇ ಜಾರಿಗೊಳಿಸಬೇಕು. ಕೆಲವು ಪಟ್ಟಭದ್ರ ಶಕ್ತಿಗಳ ವಿರೋಧದಿಂದಾಗಿ ವಿಧೇಯಕವನ್ನು ತಡೆಹಿಡಿಯಲಾಗಿದ್ದು, ಅದನ್ನು ಮತ್ತೆ ಜಾರಿಗೆ ತರುವ ಮೂಲಕ ಕನ್ನಡಿಗರಿಗೆ ನ್ಯಾಯ ಒದಗಿಸಬೇಕು ಎಂದು ನಾರಾಯಣಗೌಡ ಆಗ್ರಹಿಸಿದರು.

2024ರ ಜುಲೈನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಿಧೇಯಕಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ, ವಿವಿಧ ವಿರೋಧಗಳ ಹಿನ್ನೆಲೆಯಲ್ಲಿ ಸರ್ಕಾರ ಅದನ್ನು ತಾತ್ಕಾಲಿಕವಾಗಿ ತಡೆಹಿಡಿದಿತ್ತು. ಈ ಕಾಯ್ದೆ ಜಾರಿಯಾಗದಿದ್ದರೆ ಹಿಂದೆಂದೂ ನಡೆಯದ ರೀತಿಯ ಬೃಹತ್‌ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ವ್ಯವಸ್ಥಾಪಕ ಹುದ್ದೆಗಳಲ್ಲಿ ಶೇ.50ರಷ್ಟು ಮೀಸಲಾತಿ ಪ್ರಸ್ತಾವನೆ:ಕರಡು ವಿಧೇಯಕದ ಪ್ರಕಾರ ಖಾಸಗಿ ವಲಯದ ವ್ಯವಸ್ಥಾಪಕ ಹುದ್ದೆಗಳಲ್ಲಿ ಶೇ.50ರಷ್ಟು, ವ್ಯವಸ್ಥಾಪಕೇತರ ಹುದ್ದೆಗಳಲ್ಲಿ ಶೇ.70ರಿಂದ 75ರಷ್ಟು ಹಾಗೂ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಶೇ.100ರಷ್ಟು ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸುವ ಪ್ರಸ್ತಾವನೆ ಇತ್ತು. ಈ ವಿಧೇಯಕವನ್ನು ಜಾರಿಗೊಳಿಸುವುದು ಸರ್ಕಾರದ ಬದ್ಧತೆಯ ಪ್ರಶ್ನೆಯಾಗಿದ್ದು, ಬೇಡಿಕೆ ಈಡೇರುವವರೆಗೂ ಕರವೇ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

ಡಿ.12ರಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಕರವೇ ಕಾರ್ಯಕರ್ತರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಸಂಘಟನೆಯ ಶಾಂತಿಯುತ ಪ್ರತಿಭಟನಾ ಮೆರವಣಿಗೆ ಹಾಗೂ ಅಹೋರಾತ್ರಿ ಧರಣಿಗೆ ಸರ್ಕಾರ ಯಾವುದೇ ರೀತಿಯ ಅಡ್ಡಿಪಡಿಸಬಾರದು. ಹಿಂದಿನ ನಾಮಫಲಕ ಚಳವಳಿಯ ಸಂದರ್ಭದಲ್ಲಿ ನಡೆದಂತೆ ಸಂಘರ್ಷದ ವಾತಾವರಣ ನಿರ್ಮಿಸಬಾರದು ಎಂದು ನಾರಾಯಣಗೌಡ ಒತ್ತಾಯಿಸಿದರು.

RELATED ARTICLES

Latest News