Homeರಾಜ್ಯಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಆಕಾಂಕ್ಷಿಗಳ ಹಿಂದೇಟು

ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಆಕಾಂಕ್ಷಿಗಳ ಹಿಂದೇಟು

ಬೆಂಗಳೂರು, ನ.24- ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್‌ ಚುನಾವಣೆಗೆ ಕ್ಷೇತ್ರವಾರು ಮೀಸಲಾತಿ ಪ್ರಕಟಗೊಂಡಿದ್ದು, ಮಿನಿ ಮಹಾ ಸಮರಕ್ಕೆ ವೇದಿಕೆ ಸಜ್ಜುಗೊಳ್ಳುತ್ತಿದೆ. ಆದರೆ ಕಾಂಗ್ರೆಸ್‌‍ನಲ್ಲಿ ಚುನಾವಣೆಗೆ ಸ್ಪರ್ಧಿಸಲು ಹುರಿಯಾಳುಗಳೇ ಹಿಂದೇಟು ಹಾಕುತ್ತಿರುವುದು ಕಂಡು ಬರುತ್ತಿದ್ದು, ಭವಿಷ್ಯದ ರಾಜಕೀಯ ಬೆಳವಣಿಗೆ ದೃಷ್ಟಿಯಿಂದ ಕಾಂಗ್ರೆಸ್‌‍ ಪಕ್ಷಕ್ಕೆ ಇದು ನುಂಗಲಾರದ ಬಿಸಿ ತುಪ್ಪವಾಗಿದೆ.

ಆಶಾ ಕಾರ್ಯಕರ್ತರ ಪ್ರತಿಭಟನೆ, ಹಾಲು, ಮೊಸರು ಮತ್ತು ಬಸ್‌‍ ಪ್ರಯಾಣ ದರ ಏರಿಕೆ, ವಿಧಾನಪರಿಷತ್‌ ಚುನಾವಣೆಗಳಲ್ಲಿನ ಹಿನ್ನಡೆ ಸೇರಿದಂತೆ ಹಲವಾರು ವಿದ್ಯಮಾನಗಳು ಕಾಂಗ್ರೆಸ್‌‍ ಮುಖಂಡರಲ್ಲಿನ ಉತ್ಸಾಹವನ್ನು ಕುಗ್ಗಿಸಿದ್ದು, ರಾಜಕೀಯ ಭವಿಷ್ಯದ ಬಗ್ಗೆ ಕಾರ್ಯಕರ್ತರು ಮತ್ತು ಮುಖಂಡರು ಗೊಂದಲಕ್ಕೊಳಗಾಗಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌‍ನ ಸರಣಿ ಸೋಲುಗಳು ಭವಿಷ್ಯದ ಕನಸುಗಳನ್ನೇ ಮರುಗಟ್ಟಿಸಿವೆ. ಕರ್ನಾಟಕ, ತೆಲಂಗಾಣ, ಕೇರಳನಂತಹ ಕೆಲವು ರಾಜ್ಯಗಳಲ್ಲಿ ಪಕ್ಷ ಅಧಿಕಾರದಲ್ಲಿದ್ದರೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ ನೇತೃತ್ವದಲ್ಲಿ ಅಧಿಕಾರ ಹಿಡಿಯುವ ಸಾಧಕ-ಬಾಧಕಗಳ ಬಗ್ಗೆ ಲೆಕ್ಕಾಚಾರಗಳು ನಡೆಯುತ್ತಿವೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದರೆ ಬಹುತೇಕ ಸಚಿವರು ಸೋಲಲ್ಲಿದ್ದಾರೆ. 70ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್‌‍ ಗೆಲ್ಲುವುದಿಲ್ಲ ಎಂಬ ಸಮೀಕ್ಷಾ ವರದಿಯೊಂದು ಪಕ್ಷದ ಕಾರ್ಯಕರ್ತರನ್ನು ನಿರಾಶೆಗೀಡು ಮಾಡಿದೆ. ಸದ್ಯಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌‍ ಅಧಿಕಾರಿದಲ್ಲಿದೆ. ಇದರಿಂದ ಸಿಕ್ಕಿದ್ದೇ ಸೀರುಂಡೆ ಎಂಬ ಭಾವನೆಯಲ್ಲಿ ಒಂದಷ್ಟು ಆಡೊಂಬಲಗಳು ನಡೆಯುತ್ತಿವೆ. ಆದರೆ ಮುಂದೆ ಯಾವ ಪಕ್ಷದಲ್ಲಿ ರಾಜಕೀಯ ಭವಿಷ್ಯ ಇದೆ ಎಂಬ ಕುತೂಹಲದಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ಇಣುಕಲಾರಂಭಿಸಿದ್ದಾರೆ.

ಜಿಲ್ಲಾ ಪಂಚಾಯತ್‌, ತಾಲ್ಲೂಕು ಪಂಚಾಯತ್‌ ಚುನಾವಣೆಗೆ ನಿನ್ನೆ ಕ್ಷೇತ್ರವಾರು ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ. ಕಾಂಗ್ರೆಸ್‌‍ ಅಧಿಕಾರದಲ್ಲಿದೆ. ಚುನಾವಣೆ ಪ್ರಕ್ರಿಯೆಗಳಿಗೆ ಮತ್ತು ಆರ್ಥಿಕವಾಗಿ ಸಹಾಯವಾಗಲಿದೆ ಎಂಬ ಕಾರಣಕ್ಕೆ ಒಂದಷ್ಟು ಜನ ಬಿ ಫಾರಂ ಅರ್ಜಿ ಹಾಕುತ್ತಿದ್ದಾರೆ.

ಅಹಿಂದ ವರ್ಗಗಳು ಹೆಚ್ಚಿರುವ ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಗಳು ದಟ್ಟವಾಗಿರುವ ಕಾರಣಕ್ಕಾಗಿ, ಕಾಂಗ್ರೆಸ್‌‍ಗೆ ಟಿಕೆಟ್‌ ಬೇಡಿಕೆ ಇದೆ. ಉಳಿದಂತೆ ಹಳೇ ಮೈಸೂರು ಭಾಗದ ಕೆಲವು ಕಡೆ, ಉತ್ತರ ಕರ್ನಾಟಕದ ಬಹುತೇಕ ಕಡೆ ಜೆಡಿಎಸ್‌‍-ಬಿಜೆಪಿ ಅಭ್ಯರ್ಥಿಗಳಾಗಲು ಕಾಂಗ್ರೆಸ್‌‍ ಮುಖಂಡರೇ ತುದಿಗಾಲಲ್ಲಿ ನಿಂತಿದ್ದಾರೆ.

ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯತಿಗಳು ಹಾಗೂ ನಗರ ಸಂಸ್ಥೆಗಳ ಚುನಾವಣೆಗಳು ಯಾವುದೇ ಪಕ್ಷಕ್ಕಾದರೂ ಅಸ್ತಿತ್ವದ ಪ್ರಶ್ನೆಯಾಗಿರುತ್ತದೆ. ಸ್ಥಳೀಯ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಅಧಿಕಾರ ಹಿಡಿದರೆ, ಭವಿಷ್ಯದಲ್ಲಿ ಲೋಕಸಭಾ ಮತ್ತು ವಿಧಾನ ಸಭಾ ಚುನಾವಣೆಗಳಿಗೆ ಅನುಕೂಲವಾಗಲಿದೆ. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಬಹುತೇಕ ನಾಯಕರು ಗೊಂದಲದಲ್ಲಿದ್ದಾರೆ.

ಸ್ವ ಸಾಮರ್ಥ್ಯ ಇರುವವರು ಕಾಂಗ್ರೆಸ್‌‍ ಪಕ್ಷವನ್ನು ಬಿಟ್ಟು ಅನ್ಯ ಪಕ್ಷಗಳತ್ತ ಮುಖ ಮಾಡುತ್ತಿರುವುದು ಕಂಡು ಬರುತ್ತಿದೆ. ಕಾಂಗ್ರೆಸ್‌‍ ಪಕ್ಷ ಪದಾಧಿಕಾರಿಗಳ ನೇಮಕಕ್ಕೆ ಇನ್ನೂ ಕಸರತ್ತು ನಡೆಸಲಾಗುತ್ತಿದೆ. ನಿಗಮ ಮಂಡಲಿಗಳ ನೇಮಕಾತಿಯಲ್ಲೂ ಸಾಕಷ್ಟು ವಿಳಂಬವಾಗಿದೆ. ಇದು ಕಾರ್ಯಕರ್ತರ ಅಸಹನೆಗೆ ಕಾರಣವಾಗಿದೆ. ಗ್ಯಾರಂಟಿ ಯೋಜನೆಗಳೇ ಮತ ತಂದುಕೊಡುತ್ತವೆ ಎಂಬ ಭ್ರಮೆಯಲ್ಲಿ ವರಿಷ್ಠ ನಾಯಕರಿದ್ದಾರೆ. ಆದರೆ ಬೆಲೆ ಏರಿಕೆ, ಬರ ನಿರ್ವಹಣೆಯಲ್ಲಿನ ವೈಫಲ್ಯಗಳು ಸರ್ಕಾರದ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಗಿವೆ. ರಾಜ್ಯ ಸರ್ಕಾರದಲ್ಲಿ ಹಣಕಾಸಿನ ಕೊರತೆ ಇಲ್ಲ ಎಂದು ಎಲ್ಲಾ ಸಚಿವರು ಜಂಬ ಕೊಚ್ಚಿಕೊಳ್ಳುತ್ತಾರೆ. ಆದರೆ ಅಭಿವೃದ್ಧಿ ಯೋಜನೆಗಳಿಗೆ ಹಣ ಬೇಕು ಎಂದಾಗ ಸದ್ಯಕ್ಕಿಲ್ಲ ಎಂಬ ಉತ್ತರ ಬರುತ್ತದೆ.

ಸಾವಿರಾರು ಆಶಾ ಕಾರ್ಯಕರ್ತರು 8 ದಿನಗಳಿಂದ ನಡಗುವ ಚಳಿಯನ್ನೂ ಲೆಕ್ಕಿಸದೇ ಗೌರವ ಧನಕ್ಕಾಗಿ ಫ್ರೀಡಂಪಾರ್ಕ್‌ನಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರ, ಅವರಿಗೆ ನ್ಯಾಯ ಒದಗಿಸಿ ಧರಣಿ ಕೈ ಬಿಡುವಂತೆ ಮಾಡಿಲ್ಲ, ಬದಲಾಗಿ ಸಭೆಗಳ ಮೇಲೆ ಸಭೆ ನಡೆಸಿ ಕಾಲಾಹರಣ ಮಾಡಲಾಗುತ್ತದೆ.

ಆಶಾ ಕಾರ್ಯಕರ್ತರಿಗೆ ಕೊಡಲು 350 ಕೋಟಿ ರೂ. ಇಲ್ಲವೇ? ಎಂದು ವಿರೋಧ ಪಕ್ಷದವರು ಲೇವಡಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಈ ಧೋರಣೆ, ಜನ ವಿರೋಧಿ ಅಭಿಪ್ರಾಯಗಳು ಕಾರ್ಯಕರ್ತರನ್ನು ಹತಾಶೆಗೀಡುಮಾಡಿದ್ದು, ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೇಲೆ ಪರಿಣಾಮವಾಗುವಂತಹ ಸಾಧ್ಯತೆ ಇದೆ.

RELATED ARTICLES

Latest News