Homeರಾಷ್ಟ್ರೀಯಡಿ.6ರಂದು ಬಾಂಗ್ಲಾದೇಶಕ್ಕೆ ಮರಳಲು ಶೇಖ್‌ ಹಸೀನಾ ಸಿದ್ಧತೆ

ಡಿ.6ರಂದು ಬಾಂಗ್ಲಾದೇಶಕ್ಕೆ ಮರಳಲು ಶೇಖ್‌ ಹಸೀನಾ ಸಿದ್ಧತೆ

ನವದೆಹಲಿ,ನ.24- ರಾಜಕೀಯ ಹಾಗೂ ಕಾನೂನು ಬಿಕ್ಕಟ್ಟಿನ ನಡುವೆಯೇ ಪದಚ್ಯುತ ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಅವರು ಡಿಸೆಂಬರ್‌ 16ರಂದು ಬಾಂಗ್ಲಾದೇಶಕ್ಕೆ ಮರಳುವ ಯೋಜನೆ ಘೋಷಿಸಿದ್ದಾರೆ. 1971ರಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶ ವಿಮೋಚನೆಗೊಂಡ ದಿನವಾದ ವಿಜಯ ದಿನದಂದೇ ಢಾಕಾಗೆ ಮರಳಲು ಅವರು ಉದ್ದೇಶಿಸಿದ್ದಾರೆ ಎಂದು ಅವರ ವಕ್ತಾರ ಸೈಯದ್‌ ಮೊಜಮೆಲ್‌ ಅಲಿ ತಿಳಿಸಿದ್ದಾರೆ.

2024ರ ಆಗಸ್ಟ್‌ನಲ್ಲಿ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆ ತೀವ್ರಗೊಂಡ ಬಳಿಕ ಹಸೀನಾ ಭಾರತಕ್ಕೆ ಬಂದು ದೆಹಲಿಯಲ್ಲಿ ನೆಲೆಸಿದ್ದಾರೆ. ಇದೀಗ ತಮ ವಾಪಸಾತಿಗೆ ಬಾಂಗ್ಲಾದೇಶ ಸರ್ಕಾರವೇ ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದು, ದೆಹಲಿಯಿಂದ ಬಿಮನ್‌ ಬಾಂಗ್ಲಾದೇಶ ಏರ್‌ಲೈನ್ಸ್ ಮೂಲಕ ಢಾಕಾಗೆ ಪ್ರಯಾಣಿಸಲು ವಿಮಾನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.

ಹಸೀನಾ ಅವರ ಪಾಸ್‌‍ಪೋರ್ಟ್‌ ಮತ್ತು ರಾಷ್ಟ್ರೀಯ ಗುರುತಿನ ಚೀಟಿ ರದ್ದುಪಡಿಸಲಾಗಿರುವ ಹಿನ್ನೆಲೆಯಲ್ಲಿ, ಹೊಸ ಪ್ರಯಾಣ ದಾಖಲೆಗಳನ್ನು ನೀಡುವಂತೆ ಅವರ ಕಾನೂನು ಪ್ರತಿನಿಧಿಗಳು ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್‌ಗೆ ಮನವಿ ಮಾಡಿದ್ದರು. ಆದರೆ ಹಸೀನಾ ಅವರ ವಾಪಸಾತಿ ಹೊಸ ಪ್ರಯಾಣ ದಾಖಲೆಗಳ ಮೂಲಕವಲ್ಲ, ಭಾರತ-ಬಾಂಗ್ಲಾದೇಶ ನಡುವಿನ ಹಸ್ತಾಂತರ ಒಪ್ಪಂದದಡಿ ನಡೆಯಬೇಕು ಎಂದು ಢಾಕಾ ವಾದಿಸಿದೆ.

ಇದರ ನಡುವೆ, ಹಸೀನಾ ವಿರುದ್ಧ ಬಾಂಗ್ಲಾದೇಶದಲ್ಲಿ ಗಂಭೀರ ಕಾನೂನು ಕ್ರಮಗಳು ಜಾರಿಯಲ್ಲಿವೆ. 2025ರ ನವೆಂಬರ್‌ನಲ್ಲಿ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ, 2024ರ ಪ್ರತಿಭಟನೆಗಳ ಮೇಲಿನ ದಮನದಲ್ಲಿ ಮಾನವತೆಯ ವಿರುದ್ಧದ ಅಪರಾಧಗಳಿಗೆ ಅವರನ್ನು ಗೈರುಹಾಜರಿಯಲ್ಲಿ ದೋಷಿ ಎಂದು ತೀರ್ಪು ನೀಡಿ ಮರಣದಂಡನೆ ವಿಧಿಸಿದೆ. ಹಸೀನಾ ಈ ಆರೋಪಗಳನ್ನು ತಳ್ಳಿಹಾಕಿದ್ದು, ವಿಚಾರಣೆಯನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ.

ಹಸೀನಾ ದೇಶಕ್ಕೆ ಮರಳಿದರೆ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಬಾಂಗ್ಲಾದೇಶದ ಸಚಿವರೊಬ್ಬರು ತಿಳಿಸಿದ್ದಾರೆ. ಅಲ್ಲದೆ ದೆಹಲಿಯಿಂದ ಅವರನ್ನು ಕರೆತರಲು ವಿಮಾನ ವ್ಯವಸ್ಥೆ ಮಾಡುವ ಕುರಿತು ಭಾರತದೊಂದಿಗೆ ಯಾವುದೇ ಅಧಿಕೃತ ಚರ್ಚೆ ನಡೆದಿಲ್ಲ ಎಂದೂ ಅವರು ಹೇಳಿದ್ದಾರೆ.

ಹಸೀನಾ ಅವರ ಅವಾಮಿ ಲೀಗ್‌ ಪಕ್ಷದ ಚಟುವಟಿಕೆಗಳ ಮೇಲೂ ನಿಷೇಧವಿದ್ದು, ದೇಶದ ಹಲವು ಭಾಗಗಳಲ್ಲಿ ರಾಜಕೀಯ ಹಿಂಸಾಚಾರ ಮತ್ತು ಪ್ರತಿಭಟನೆಗಳು ಮುಂದುವರಿದಿವೆ. ಅವಾಮಿ ಲೀಗ್‌ ನವೆಂಬರ್‌ 29 ಮತ್ತು 30ರಂದು ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಗಿದೆ.

ಹೀಗಾಗಿ ಡಿಸೆಂಬರ್‌ 16ರಂದು ಹಸೀನಾ ಬಾಂಗ್ಲಾದೇಶಕ್ಕೆ ಮರಳುವ ಘೋಷಣೆ, ಅವರ ವಿರುದ್ಧದ ಮರಣದಂಡನೆ, ಢಾಕಾದ ಹಸ್ತಾಂತರ ಮನವಿ ಹಾಗೂ ಭಾರತ-ಬಾಂಗ್ಲಾದೇಶ ನಡುವಿನ ರಾಜತಾಂತ್ರಿಕ ಸಂಬಂಧಗಳ ಹಿನ್ನೆಲೆಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯಾಗಿದೆ. ಅವರ ದೆಹಲಿಯಿಂದ ಢಾಕಾಗೆ ಮರಳುವ ಬೇಡಿಕೆಗೆ ಬಾಂಗ್ಲಾದೇಶ ಸರ್ಕಾರದಿಂದ ಇದುವರೆಗೆ ಅಧಿಕೃತ ಒಪ್ಪಿಗೆ ದೊರೆತಿಲ್ಲ.

RELATED ARTICLES

Latest News