ಬೆಂಗಳೂರು: ವೈದ್ಯಕೀಯ ತಂತ್ರಜ್ಞಾನ ಮತ್ತು ಡಿಜಿಟಲ್ ಆರೋಗ್ಯ ಪರಿಹಾರಗಳ ಮುಂಚೂಣಿ ಸಂಸ್ಥೆಯಾದ ‘ವಿಪ್ರೋ ಜಿಇ ಹೆಲ್ತ್ಕೇರ್’ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ಜಿಇ ಹೆಲ್ತ್ಕೇರ್ ದಕ್ಷಿಣ ಏಷ್ಯಾ ವಿಭಾಗದ ಅಧ್ಯಕ್ಷ ಮತ್ತು ಸಿಇಒ ಆಗಿ ವಿ.ಎಸ್. ರಾಘವೇಂದ್ರ ರಾವ್ ನೇಮಕಗೊಂಡಿದ್ದಾರೆ. 2027ರ ಜನವರಿ 4ರಿಂದ ಈ ನೇಮಕಾತಿ ಜಾರಿಗೆ ಬರಲಿದೆ. 16 ವರ್ಷಗಳ ಸೇವೆಯ ಬಳಿಕ ಬೇರೆ ಅವಕಾಶಗಳತ್ತ ಮುಖ ಮಾಡಿರುವ ಚೈತನ್ಯ ಸರವಟೆ ಅವರ ಸ್ಥಾನವನ್ನು ರಾಘವೇಂದ್ರ ರಾವ್ ತುಂಬಲಿದ್ದಾರೆ. ನೂತನ ಹುದ್ದೆಯಲ್ಲಿ ಅವರು ವಿಪ್ರೋ ಜಿಇ ಹೆಲ್ತ್ಕೇರ್ ಅಧ್ಯಕ್ಷ ರಿಷದ್ ಪ್ರೇಮ್ಜಿ ಮತ್ತು ಜಿಇ ಹೆಲ್ತ್ಕೇರ್ ಮುಖ್ಯ ವಾಣಿಜ್ಯ ಹಾಗೂ ಬೆಳವಣಿಗೆ ಅಧಿಕಾರಿ ಕ್ಯಾಥರೀನ್ ಎಸ್ಟ್ರಾಂಪೆಸ್ ಅವರಿಗೆ ವರದಿ ಮಾಡಲಿದ್ದಾರೆ.
2002ರಲ್ಲಿ ವಿಪ್ರೋ ಜಿಇ ಹೆಲ್ತ್ಕೇರ್ ಸೇರಿದ ರಾಘವೇಂದ್ರ ರಾವ್, ಕಳೆದ ಎರಡು ದಶಕಗಳಿಂದ ಸಂಸ್ಥೆಯಲ್ಲಿ ಹಲವು ಪ್ರಮುಖ ನಾಯಕತ್ವ ಹುದ್ದೆಗಳನ್ನು ನಿಭಾಯಿಸಿದ್ದು, ಆರೋಗ್ಯ ಕ್ಷೇತ್ರ ಮತ್ತು ಗ್ರಾಹಕರ ಅಗತ್ಯಗಳ ಬಗ್ಗೆ ಆಳವಾದ ಅನುಭವ ಹೊಂದಿದ್ದಾರೆ. ಸಂಸ್ಥೆಯೊಳಗಿನ ನಾಯಕತ್ವದ ಶಕ್ತಿ ಮತ್ತು ನಿರಂತರತೆಯನ್ನು ಈ ನೇಮಕಾತಿ ಪ್ರತಿಬಿಂಬಿಸುತ್ತದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತವು ಜಾಗತಿಕ ನಾವೀನ್ಯತೆ ಮತ್ತು ಉತ್ಪಾದನಾ ಕೇಂದ್ರವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ, ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ ಸ್ಥಳೀಯ ಉತ್ಪಾದನೆ ಹೆಚ್ಚಿಸುವುದು, ನಾವೀನ್ಯತೆಗೆ ವೇಗ ನೀಡುವುದು ಹಾಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ಎಲ್ಲರಿಗೂ ತಲುಪಿಸುವುದು ರಾಘವೇಂದ್ರ ರಾವ್ ಅವರ ಪ್ರಮುಖ ಗುರಿಯಾಗಿದೆ.
ನಿರ್ಗಮಿತ ಮುಖ್ಯಸ್ಥ ಚೈತನ್ಯ ಸರವಟೆ ಅವರು ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಕಂಪನಿಯ ಮಾರುಕಟ್ಟೆ ನಾಯಕತ್ವವನ್ನು ಬಲಪಡಿಸಿ, ‘ಭಾರತದಲ್ಲಿ, ಭಾರತಕ್ಕಾಗಿ ಮತ್ತು ಜಗತ್ತಿಗಾಗಿ’ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ರಾಘವೇಂದ್ರ ರಾವ್ ನೇಮಕದ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾಥರೀನ್ ಎಸ್ಟ್ರಾಂಪೆಸ್, “ಭಾರತ ಮತ್ತು ದಕ್ಷಿಣ ಏಷ್ಯಾ ಜಿಇ ಹೆಲ್ತ್ಕೇರ್ಗೆ ಪ್ರಮುಖ ಮಾರುಕಟ್ಟೆಯಷ್ಟೇ ಅಲ್ಲ, ಜಾಗತಿಕ ಆವಿಷ್ಕಾರ ಮತ್ತು ಉತ್ಪಾದನಾ ಕೇಂದ್ರವೂ ಹೌದು. ಮಾರುಕಟ್ಟೆಯ ಆಳವಾದ ತಿಳುವಳಿಕೆ ಮತ್ತು ಕಾರ್ಯತಂತ್ರವನ್ನು ಫಲಿತಾಂಶವಾಗಿ ಪರಿವರ್ತಿಸುವ ಸಾಮರ್ಥ್ಯ ರಾಘವೇಂದ್ರ ರಾವ್ ಅವರಿಗಿದೆ” ಎಂದರು.
ಅಧ್ಯಕ್ಷ ರಿಷದ್ ಪ್ರೇಮ್ಜಿ ಅವರು, ರಾಘವೇಂದ್ರ ರಾವ್ ಅವರ ನಾಯಕತ್ವದಲ್ಲಿ ಸ್ಥಳೀಯ ಉತ್ಪಾದನೆ, ನಾವೀನ್ಯತೆ ಮತ್ತು ಗುಣಮಟ್ಟದ ಆರೋಗ್ಯ ಸೇವೆಯ ವ್ಯಾಪ್ತಿ ಮತ್ತಷ್ಟು ವಿಸ್ತರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದು, ಚೈತನ್ಯ ಅವರ ಸೇವೆಗೆ ಕೃತಜ್ಞತೆ ಸಲ್ಲಿಸಿದರು.
ಅಮೆರಿಕದ ಜಿಇ ಹೆಲ್ತ್ಕೇರ್ ಟ್ರಾನ್ಸ್ನ್ಯಾಷನಲ್ ಹೋಲ್ಡಿಂಗ್ಸ್ ಮತ್ತು ಭಾರತದ ವಿಪ್ರೋ ಎಂಟರ್ಪ್ರೈಸಸ್ ಜಂಟಿ ಸಹಭಾಗಿತ್ವದಲ್ಲಿ 1990ರಲ್ಲಿ ಸ್ಥಾಪನೆಯಾದ ವಿಪ್ರೋ ಜಿಇ ಹೆಲ್ತ್ಕೇರ್, ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್ ಮತ್ತು ಭೂತಾನ್ನಲ್ಲಿ ಕಾರ್ಯನಿರ್ವಹಿಸುತ್ತಿದೆ. ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸುವುದು, ಕ್ಯಾನ್ಸರ್ನ ಆರಂಭಿಕ ಪತ್ತೆ, ಹೃದ್ರೋಗಗಳಿಗೆ ನಿಖರ ಚಿಕಿತ್ಸೆ ಹಾಗೂ ಟ್ರಾಮಾ ರೋಗಿಗಳ ಆರೈಕೆಗೆ ಸಂಸ್ಥೆ ಆದ್ಯತೆ ನೀಡಿದೆ. 130 ವರ್ಷಗಳ ಇತಿಹಾಸ ಹೊಂದಿರುವ ಮತ್ತು 2026ರ ‘ಫಾರ್ಚೂನ್ ವರ್ಲ್ಡ್ಸ್ ಮೋಸ್ಟ್ ಅಡ್ಮೈರ್ಡ್ ಕಂಪನೀಸ್’ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಜಿಇ ಹೆಲ್ತ್ಕೇರ್, 20.6 ಬಿಲಿಯನ್ ಡಾಲರ್ ವಹಿವಾಟು ಹಾಗೂ ಸುಮಾರು 54,000 ಉದ್ಯೋಗಿಗಳೊಂದಿಗೆ ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಎಐ, ಇಮೇಜಿಂಗ್ ಮತ್ತು ವೈದ್ಯಕೀಯ ತಂತ್ರಜ್ಞಾನ ಸೇವೆಗಳನ್ನು ಒದಗಿಸುತ್ತಿದೆ.
