ಇಂದೋರ್, ನ. 23- ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಅಂತರರಾಷ್ಟ್ರೀಯ ಬಿಕ್ಕಟ್ಟುಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳು ಭಾರತೀಯ ಗ್ರಾಹಕರನ್ನು ಇಂಧನ ಬೆಲೆ ಏರಿಕೆಯ ಹೊಡೆತದಿಂದ ರಕ್ಷಿಸಿವೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಇಂದೋರ್ನ ಪೆಟ್ರೋಲ್ ಬಂಕ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.
ನವೆಂಬರ್ 2021, ಮೇ 2022 ಮತ್ತು ಮಾರ್ಚ್ 10, 2026ರಂದು ಕೇಂದ್ರ ಸರ್ಕಾರ ಮೂರು ಬಾರಿ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಇದರಿಂದ ಜಾಗತಿಕವಾಗಿ ಇಂಧನ ಬೆಲೆಗಳು ಶೇ. 50ರಿಂದ 70ರಷ್ಟು ಏರಿಕೆಯಾಗಿದ್ದರೂ, ಭಾರತದಲ್ಲಿ ಬೆಲೆ ಏರಿಕೆ ಸುಮಾರು ಶೇ. 7ಕ್ಕೆ ಸೀಮಿತವಾಗಿದೆ ಎಂದು ಅವರು ತಿಳಿಸಿದರು.
ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 60-65 ಡಾಲರ್ನಿಂದ 120 ಡಾಲರ್ಗೆ ಏರಿಕೆಯಾದ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್ಪಿಸಿಎಲ್) ಭಾರಿ ನಷ್ಟವನ್ನು ತಾವೇ ಭರಿಸುವ ಮೂಲಕ ಗ್ರಾಹಕರಿಗೆ ನೆರವಾಗಿವೆ ಎಂದು ಸಚಿವರು ಶ್ಲಾಘಿಸಿದರು.
ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಕೊರತೆ ಉಂಟಾಗಿದೆ ಎಂಬ ಪ್ರತಿಪಕ್ಷಗಳ ಆರೋಪಗಳನ್ನು ಅವರು ತಳ್ಳಿಹಾಕಿದರು. ಇವು ಆಧಾರರಹಿತ ವದಂತಿಗಳಾಗಿದ್ದು, ದೇಶದಾದ್ಯಂತ ಇಂಧನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ದೇಶದ 1,07,000 ಇಂಧನ ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಒಂದರಲ್ಲೂ ಪೆಟ್ರೋಲ್ ಅಥವಾ ಡೀಸೆಲ್ ಖಾಲಿಯಾಗಿಲ್ಲ. ಕಳೆದ ಸಂಸತ್ ಅಧಿವೇಶನದಲ್ಲಿ ನಮ್ಮ ರಾಜಕೀಯ ವಿರೋಧಿಗಳು ಗ್ಯಾಸ್ ಸಿಲಿಂಡರ್ಗಳ ಪ್ರತಿಕೃತಿಗಳನ್ನು ಪ್ರದರ್ಶಿಸಿ, ಅಡುಗೆ ಅನಿಲದ ತೀವ್ರ ಕೊರತೆ ಎದುರಾಗಲಿದೆ ಎಂದು ಆರೋಪಿಸಿದ್ದರು. ಆದರೆ, ನಾವು ದೇಶೀಯ ಎಲ್ಪಿಜಿ ಉತ್ಪಾದನೆಯನ್ನು ಹೆಚ್ಚಿಸಿದ್ದರಿಂದ ಎಲ್ಲಿಯೂ ಕೊರತೆ ಉಂಟಾಗಲಿಲ್ಲ ಎಂದು ಅವರು ಹೇಳಿದರು.
