Homeರಾಷ್ಟ್ರೀಯಬಿಸ್ಲೇರಿ ವಿವಾದದ ಬೆನ್ನಲ್ಲೇ ಪ್ಯಾಕೇಜ್ಡ್‌ ನೀರಿನ ಎಲ್ಲಾ ಬ್ರಾಂಡ್‌ಗಳ ಮೇಲೆ FSSAI ಕಣ್ಣು

ಬಿಸ್ಲೇರಿ ವಿವಾದದ ಬೆನ್ನಲ್ಲೇ ಪ್ಯಾಕೇಜ್ಡ್‌ ನೀರಿನ ಎಲ್ಲಾ ಬ್ರಾಂಡ್‌ಗಳ ಮೇಲೆ FSSAI ಕಣ್ಣು

ನವದೆಹಲಿ, ನ. 23- ಬಿಸ್ಲೇರಿ ಪ್ಯಾಕೇಜ್ಡ್‌ ಕುಡಿಯುವ ನೀರಿನ ಗುಣಮಟ್ಟದ ಕುರಿತು ವಿವಾದ ತೀವ್ರಗೊಂಡಿರುವ ಬೆನ್ನಲ್ಲೇ, ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ತನ್ನ ತನಿಖೆಯನ್ನು ಇಡೀ ಪ್ಯಾಕೇಜ್ಡ್‌ ಕುಡಿಯುವ ನೀರಿನ ಮಾರುಕಟ್ಟೆಗೆ ವಿಸ್ತರಿಸಿದೆ. ಬಿಸ್ಲೇರಿ ಮಾತ್ರವಲ್ಲದೆ, ದೇಶದ ಎಲ್ಲ ಪ್ರಮುಖ ಪ್ಯಾಕೇಜ್ಡ್‌ ನೀರಿನ ಬ್ರಾಂಡ್‌ಗಳ ಮೇಲೂ ಗುಣಮಟ್ಟದ ತಪಾಸಣೆ ಆರಂಭಿಸಿದೆ.

ಎಫ್‌ಎಸ್‌ಎಸ್‌ಎಐ ಅಧಿಕಾರಿಗಳು ವಿವಿಧ ಕಂಪನಿಗಳ ಪ್ಯಾಕೇಜ್ಡ್‌ ಕುಡಿಯುವ ನೀರಿನ ಬಾಟಲಿಗಳಿಂದ ಯಾದೃಚ್ಛಿಕವಾಗಿ ಮಾದರಿಗಳನ್ನು ಸಂಗ್ರಹಿಸಿದ್ದು, ಅವುಗಳನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಕಳುಹಿಸಿದ್ದಾರೆ. ಪರೀಕ್ಷಾ ವರದಿಗಳು ಶೀಘ್ರದಲ್ಲೇ ಲಭ್ಯವಾಗುವ ನಿರೀಕ್ಷೆಯಿದೆ. ಕಳಪೆ ಗುಣಮಟ್ಟದ ನೀರಿನ ಮಾರಾಟವನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಬಿಸ್ಲೇರಿ ನೀರಿನಲ್ಲಿ ಅಸುರಕ್ಷಿತ ಅಂಶ ಪತ್ತೆ ಆರೋಪ

ಬಿಸ್ಲೇರಿ ಕಂಪನಿಯ ಆವರಣದಿಂದ ಸಂಗ್ರಹಿಸಲಾದ ಪ್ಯಾಕೇಜ್ಡ್‌ ಕುಡಿಯುವ ನೀರಿನ ಮಾದರಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಬ್ರೋಮೇಟ್‌ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಕಾನೂನು ಕ್ರಮಕ್ಕೆ ಅನುಮತಿ ನೀಡಿದೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ-2006ರ ಅಡಿಯಲ್ಲಿ ಈ ಮಾದರಿಯನ್ನು ಅಸುರಕ್ಷಿತ ಎಂದು ಘೋಷಿಸಲಾಗಿದೆ.

ಕಂಪನಿಯು ಈ ವರದಿಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು. ಬಳಿಕ ಮಾದರಿಯನ್ನು ಉಲ್ಲೇಖಿತ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಪಾಲಿನ್ಯೂಕ್ಲಿಯರ್‌ ಆರೊಮ್ಯಾಟಿಕ್‌ ಹೈಡ್ರೋಕಾರ್ಬನ್‌ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮಾದರಿಯನ್ನು ಮತ್ತೆ ಅಸುರಕ್ಷಿತ ಎಂದು ಘೋಷಿಸಲಾಗಿದೆ.

ಬಿಸ್ಲೇರಿ ಕಂಪನಿಯಿಂದ ಆರೋಪ ನಿರಾಕರಣೆ

ಆದರೆ, ಎಫ್‌ಎಸ್‌ಎಸ್‌ಎಐನ ವರದಿಯನ್ನು ಬಿಸ್ಲೇರಿ ಕಂಪನಿ ಪ್ರಶ್ನಿಸಿದ್ದು, ತನ್ನ ಉತ್ಪನ್ನಗಳು ಕುಡಿಯಲು ಸುರಕ್ಷಿತವಾಗಿವೆ ಎಂದು ಸಮರ್ಥಿಸಿಕೊಂಡಿದೆ. ನವೆಂಬರ್‌ 23ರಂದು ನೀಡಿದ ಹೇಳಿಕೆಯಲ್ಲಿ, ಈ ವಿವಾದವು 2025ರ ಸೆಪ್ಟೆಂಬರ್‌ನಲ್ಲಿ ಗೋವಾ ಘಟಕದಲ್ಲಿ ತಯಾರಾದ ನಿರ್ದಿಷ್ಟ ಬ್ಯಾಚ್‌ಗೆ ಸಂಬಂಧಿಸಿದೆ ಎಂದು ಸ್ಪಷ್ಟಪಡಿಸಿದೆ.

2025ರ ಸೆಪ್ಟೆಂಬರ್‌ 30ರಂದು ಎಫ್‌ಎಸ್‌ಎಸ್‌ಎಐ ಅಧಿಕಾರಿಗಳು ಘಟಕದಿಂದ ಆರು ಮಾದರಿಗಳನ್ನು ಸಂಗ್ರಹಿಸಿದ್ದರು. ಈ ಪೈಕಿ ಐದು ಮಾದರಿಗಳು ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪೂರೈಸಿದ್ದವು. ಒಂದು ಮಾದರಿಯಲ್ಲಿ ಮಾತ್ರ ಪ್ರತಿ ಲೀಟರ್‌ಗೆ 12 ಮೈಕ್ರೋಗ್ರಾಂ ಬ್ರೋಮೇಟ್‌ ಪತ್ತೆಯಾಗಿತ್ತು. ಆದರೆ, ನಿಗದಿತ ಗರಿಷ್ಠ ಮಿತಿ ಪ್ರತಿ ಲೀಟರ್‌ಗೆ 10 ಮೈಕ್ರೋಗ್ರಾಂ ಆಗಿದೆ ಎಂದು ಕಂಪನಿ ತಿಳಿಸಿದೆ.

ನಂತರ ಉಲ್ಲೇಖಿತ ಪ್ರಯೋಗಾಲಯದ ಪರೀಕ್ಷೆಯಲ್ಲಿ ಬ್ರೋಮೇಟ್‌ ಪ್ರಮಾಣ ನಿಗದಿತ ಮಿತಿಯೊಳಗೆ ಇತ್ತು ಎಂದು ಬಿಸ್ಲೇರಿ ವಾದಿಸಿದೆ. ಎಫ್‌ಎಸ್‌ಎಸ್‌ಎಐ ಅನುಮೋದಿತ ಮತ್ತೊಂದು ಪ್ರಯೋಗಾಲಯದಲ್ಲಿಯೂ ಮಾದರಿಯನ್ನು ಪರೀಕ್ಷಿಸಲಾಗಿದ್ದು, ಬ್ರೋಮೇಟ್‌ ಪ್ರಮಾಣ ಅನುಮತಿಸಲಾದ ಮಿತಿಯಲ್ಲಿದೆ ಎಂದು ವರದಿ ಬಂದಿದೆ ಎಂದು ಕಂಪನಿ ಹೇಳಿದೆ.

ಈ ಪರೀಕ್ಷಾ ವರದಿಯನ್ನು 2026ರ ಫೆಬ್ರವರಿ 2ರಂದು ಎಫ್‌ಎಸ್‌ಎಸ್‌ಎಐನ ಪಶ್ಚಿಮ ಪ್ರಾದೇಶಿಕ ಕಚೇರಿಗೆ ಸಲ್ಲಿಸಿದ್ದರೂ, ಯಾವುದೇ ಹೆಚ್ಚಿನ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಪ್ರಕರಣ ಮುಕ್ತಾಯಗೊಂಡಿದೆ ಎಂದು ಭಾವಿಸಿದ್ದಾಗಿ ಬಿಸ್ಲೇರಿ ತಿಳಿಸಿದೆ.

ನಕಲಿ ಮತ್ತು ಹೋಲಿಕೆಯ ಬ್ರಾಂಡ್‌ಗಳ ಮೇಲೂ ನಿಗಾ

ಇನ್ನು, ಗುಣಮಟ್ಟದ ಪರೀಕ್ಷೆಯ ಜತೆಗೆ ಪ್ರಸಿದ್ಧ ಪ್ಯಾಕೇಜ್ಡ್‌ ನೀರಿನ ಕಂಪನಿಗಳ ಹೆಸರು ಮತ್ತು ಲೇಬಲ್‌ಗಳನ್ನು ಹೋಲುವ ರೀತಿಯಲ್ಲಿ ಬಳಸುತ್ತಿರುವ ಬ್ರಾಂಡ್‌ಗಳ ಮೇಲೂ ಎಫ್‌ಎಸ್‌ಎಸ್‌ಎಐ ನಿಗಾ ಇರಿಸಿದೆ. ಗ್ರಾಹಕರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಪ್ರಸಿದ್ಧ ಕಂಪನಿಗಳ ಹೆಸರನ್ನು ಹೋಲುವ ಹೆಸರು ಹಾಗೂ ಲೇಬಲ್‌ಗಳನ್ನು ಬಳಸುತ್ತಿರುವ ಸಂಸ್ಥೆಗಳ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

RELATED ARTICLES

Latest News