Homeರಾಜಕೀಯಹಿರಿಯೂರು ಉಪಚುನಾವಣೆ : ಸಮರ್ಥ ಎನ್‌ಡಿಎ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬುದೇ ನನ್ನ ಆದ್ಯತೆ ಎಂದ ಹೆಚ್ಡಿಕೆ

ಹಿರಿಯೂರು ಉಪಚುನಾವಣೆ : ಸಮರ್ಥ ಎನ್‌ಡಿಎ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬುದೇ ನನ್ನ ಆದ್ಯತೆ ಎಂದ ಹೆಚ್ಡಿಕೆ

ಬೆಂಗಳೂರು,ನ.23- ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಗ್ಗೆ ಆತುರವೇನು ಇಲ್ಲ. ಆದರೆ ಎನ್‌ಡಿಎ ಮೈತ್ರಿಕೂಟದಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುದಷ್ಟೇ ನನ್ನ ಆದ್ಯತೆ ಎಂದು ಕೇಂದ್ರದ ಬೃಹತ್‌ ಕೈಗಾರಿಕಾ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕನಕಪುರದಲ್ಲಿ ಅಭಿವೃದ್ಧಿ ಮಾಡಿದಂತೆ ಹಿರಿಯೂರನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುತ್ತಾರಂತೆ ಎಂದು ವ್ಯಂಗ್ಯವಾಡಿದರು. ಉಪಚುನಾವಣೆ ನಡೆಯುತ್ತೋ ಇಲ್ಲವೋ ಗೊತ್ತಿಲ್ಲ. ಬಿಜೆಪಿ, ಜೆಡಿಎಸ್‌‍ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ಈ ವಿಚಾರದಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹೃದಯ ಮಿಡಿಯಬೇಕಿತ್ತಲ್ಲವೇ? ಡಿ.ಕೆ. ಶಿವಕುಮಾರ್‌ ಅವರದು ಹೃದಯ ಹೂವಿನಂತ ಹೃದಯ ಅಲ್ಲವೇ? ಇಷ್ಟು ಹೊತ್ತಿಗೆ ಆಶಾ ಕಾರ್ಯಕರ್ತೆಯರ ಕಷ್ಟಕ್ಕೆ ಮಿಡಿಯಬೇಕಿತ್ತು. ಬಹುಶಃ ಜಪಾನ್‌ನ ಮೂರು ದಿನಗಳ ಪ್ರವಾಸ ಮುಗಿಸಿ ವಾಪಸ್‌‍ ಬಂದ ಬಳಿಕ ಅವರ ಕಷ್ಟಕ್ಕೆ ಮಿಡಿಯಬಹುದು ಎಂದು ಟೀಕಿಸಿದರು.

ಒಂದು ವಾರದಿಂದ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡುತ್ತಿದ್ದಾರೆ. ಬಾಯಿ ಮಾತಿನಲ್ಲಿ ಅನುಕಂಪ ನೀಡಿದರೆ ಸಾಲದು ಬಡಮಕ್ಕಳ ಹಾಗೂ ಮಹಿಳೆಯರ ಆರೋಗ್ಯ ಕಾಪಾಡುವ ಜವಾಬ್ದಾರಿ ಅವರ ಮೇಲಿದೆ. ಭರವಸೆ ನೀಡಿದಂತೆ ರಾಜ್ಯ ಸರ್ಕಾರ ಗೌರವ ಧನವನ್ನು 15 ಸಾವಿರಕ್ಕೆ ಹೆಚ್ಚಿಸಬೇಕು. ನುಡಿದಂತೆ ನಡೆಯುವ ಸರ್ಕಾರವೇ ಅಲ್ಲವೇ ಎಂದು ವ್ಯಂಗ್ಯವಾಡಿದರು.

ಲಂಡನ್‌ ಕೋರ್ಟ್‌ಗೆ ಹೋಗುತ್ತಾರಾ?:
ಕೇಂದ್ರ ಸರ್ಕಾರ ಬರ ಪರಿಹಾರ ನೀಡಿಲ್ಲ ಎಂಬ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಹೋಗುತ್ತದೆಯೋ ಅಥವಾ ಲಂಡನ್‌ ಕೋರ್ಟ್‌ಗೆ ಹೋಗುತ್ತದೆಯೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ನೈಸ್‌‍ ಯೋಜನೆಯ ವ್ಯಾಜ್ಯ ಬಂದಾಗ ಲಂಡನ್‌ ಕೋರ್ಟ್‌ಗೆ ಹೋಗಬೇಕು ಎಂದು ತೀರ್ಮಾನಿಸಿದ್ದು ಯಾರು? ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನಲ್ಲಿ ಆಗದಿದ್ದರೆ ಲಂಡನ್‌ ಕೋರ್ಟ್‌ಗೆ ಹೋಗಬೇಕು ಎಂಬ ನಿರ್ಧಾರವನ್ನು ಕಾಂಗ್ರೆಸ್‌‍ನವರೇ ಸರ್ಕಾರದಲ್ಲಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.ಈಗ ಬರ ಪರಿಹಾರದ ವಿಚಾರದಲ್ಲಿ ಕೇಂದ್ರ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳದಿದ್ದರೆ ರಾಜ್ಯ ಸರ್ಕಾರ ಲಂಡನ್‌ ಕೋರ್ಟ್‌ಗೆ ಹೋಗಬಹುದೇ ಎಂದು ಪ್ರಶ್ನಿಸಿದರು.

ಜೆಡಿಎಸ್‌‍ ಶಾಸಕಾಂಗ ಸಭೆ:
ಮುಂಬರುವ ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಜೆಡಿಎಸ್‌‍ ಶಾಸಕಾಂಗ ಸಭೆ ನಡೆಸಲಾಗುವುದು. ಅಗತ್ಯವಿದ್ದರೆ ಬಿಜೆಪಿ ನಾಯಕರೊಂದಿಗೂ ಸಭೆ ನಡೆಸುತ್ತೇವೆ ಎಂದು ತಿಳಿಸಿದರು.ಮತಾಂತರ ನಿಷೇಧ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‌‍ ಪಡೆಯುವ ವಿಚಾರವಾಗಿ ಶ್ರೀರಾಮನ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಭೇಟಿ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ, ಅವರೊಂದಿಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

RELATED ARTICLES

Latest News