ಮುಂಬೈ, ನ. 23- ದೇಶೀಯ ಷೇರು ಮಾರುಕಟ್ಟೆಯಲ್ಲಿನ ಮಾರಾಟದ ಒತ್ತಡದ ಪರಿಣಾಮ ಇಂದು ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 23 ಪೈಸೆ ಕುಸಿದು 92.85ಕ್ಕೆ ತಲುಪಿದೆ.
ಕಚ್ಚಾ ತೈಲ ಬೆಲೆ ಇಳಿಕೆಯಿಂದ ಆರಂಭದಲ್ಲಿ ರೂಪಾಯಿಗೆ ಸ್ವಲ್ಪ ಚೇತರಿಕೆ ಕಂಡುಬಂದರೂ, ಅಮೆರಿಕನ್ ಡಾಲರ್ ಬಲವರ್ಧನೆಯಿಂದಾಗಿ ರೂಪಾಯಿ ಮತ್ತೆ ಒತ್ತಡಕ್ಕೆ ಒಳಗಾಯಿತು ಎಂದು ವಿದೇಶಿ ವಿನಿಮಯ ಮಾರುಕಟ್ಟೆಯ ವರ್ತಕರು ತಿಳಿಸಿದ್ದಾರೆ.
ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 93.47ರಲ್ಲಿ ವಹಿವಾಟು ಆರಂಭಿಸಿತು. ಬಳಿಕ 92.43ರವರೆಗೆ ಚೇತರಿಕೆ ಕಂಡರೂ, ಹಿಂದಿನ ದಿನದ ಮುಕ್ತಾಯದ ಮಟ್ಟಕ್ಕಿಂತ 23 ಪೈಸೆ ಇಳಿಕೆಯಾಗಿ 92.85ರಲ್ಲಿ ವಹಿವಾಟು ನಡೆಸಿತು.
ಕಳೆದ ಶುಕ್ರವಾರ ರೂಪಾಯಿ ಸತತ ಐದನೇ ವಹಿವಾಟು ದಿನವೂ ಏರಿಕೆ ದಾಖಲಿಸಿ, ಡಾಲರ್ ಎದುರು 70 ಪೈಸೆ ಹೆಚ್ಚಳದೊಂದಿಗೆ 92.62ರಲ್ಲಿ ವಹಿವಾಟು ಮುಕ್ತಾಯಗೊಳಿಸಿತ್ತು. ಏಪ್ರಿಲ್ 10ರ ಬಳಿಕ ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ 93ರ ಮಟ್ಟಕ್ಕಿಂತ ಕೆಳಕ್ಕೆ ಇಳಿದಿತ್ತು.
ದೇಶೀಯ ಷೇರು ಮಾರುಕಟ್ಟೆಯಲ್ಲಿ ಇಂದು ಆರಂಭಿಕ ವಹಿವಾಟಿನಲ್ಲೇ ಕುಸಿತ ಕಂಡುಬಂದಿತು. ಬಿಎಸ್ಇ ಸೆನ್ಸೆಕ್ಸ್ 408.30 ಅಂಕಗಳಷ್ಟು (ಶೇ. 0.49) ಕುಸಿದು 83,511.41ಕ್ಕೆ ತಲುಪಿದರೆ, ಎನ್ಎಸ್ಇ ನಿಫ್ಟಿ 118.90 ಅಂಕಗಳಷ್ಟು (ಶೇ. 0.46) ಇಳಿಕೆಯಾಗಿ 25,684.30ರಲ್ಲಿ ವಹಿವಾಟು ನಡೆಸಿತು.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶುಕ್ರವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ನವೆಂಬರ್ 13ಕ್ಕೆ ಅಂತ್ಯಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹ 14.205 ಬಿಲಿಯನ್ ಡಾಲರ್ ಇಳಿಕೆಯಾಗಿ 705.342 ಬಿಲಿಯನ್ ಡಾಲರ್ಗೆ ತಲುಪಿದೆ. ಇದಕ್ಕೂ ಹಿಂದಿನ ವಾರದಲ್ಲಿ ಸಂಗ್ರಹ 2.49 ಬಿಲಿಯನ್ ಡಾಲರ್ ಹೆಚ್ಚಳವಾಗಿ 719.547 ಬಿಲಿಯನ್ ಡಾಲರ್ ಆಗಿತ್ತು.
