Homeಅಂತಾರಾಷ್ಟ್ರೀಯಇಂಡೋನೇಷ್ಯಾದ ಕ್ಯಾಂಡಿ ಕಾರ್ಖಾನೆಯಲ್ಲಿ ಅಗ್ನಿ ದುರಂತ : 24 ಕಾರ್ಮಿಕರ ಸಾವು

ಇಂಡೋನೇಷ್ಯಾದ ಕ್ಯಾಂಡಿ ಕಾರ್ಖಾನೆಯಲ್ಲಿ ಅಗ್ನಿ ದುರಂತ : 24 ಕಾರ್ಮಿಕರ ಸಾವು

ಜಕಾರ್ತಾ, ನ. 23- ಇಂಡೋನೇಷ್ಯಾದ ಕ್ಯಾಂಡಿ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 24 ಮಂದಿ ಸಾವನ್ನಪ್ಪಿದ್ದು, 34 ಕಾರ್ಮಿಕರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ರಕ್ಷಣಾ ತಂಡಗಳು 24 ಮೃತದೇಹಗಳ ಅವಶೇಷಗಳನ್ನು ಪತ್ತೆಹಚ್ಚಿ 24 ಬ್ಯಾಗ್‌ಗಳಲ್ಲಿ ಸಂಗ್ರಹಿಸಿವೆ. ಆದರೆ, ಮೃತರ ನಿಖರ ಸಂಖ್ಯೆಯನ್ನು ನಿರ್ಧರಿಸಲು ವಿಧಿವಿಜ್ಞಾನ ಪರೀಕ್ಷೆ ಮತ್ತು ಗುರುತು ಪತ್ತೆ ಕಾರ್ಯ ಪೂರ್ಣಗೊಳ್ಳಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಟೆನ್‌ ಪ್ರಾಂತ್ಯದ ಸೆರೆಂಗ್‌ ಜಿಲ್ಲೆಯಲ್ಲಿರುವ ಪಿಟಿ ಫೋನುಸಾ ಅಗಂಗ್‌ ಮುಲಿಯಾ ಕಾರ್ಖಾನೆಯ ಮೂರು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿ, ಕೆಲವೇ ಕ್ಷಣಗಳಲ್ಲಿ ಇಡೀ ಕಾರ್ಖಾನೆ ಹೊತ್ತಿ ಉರಿದಿತ್ತು. ಹಲವು ಗಂಟೆಗಳ ಪ್ರಯಾಸದ ಬಳಿಕ ಬೆಂಕಿಯನ್ನು ಬಹುತೇಕ ನಿಯಂತ್ರಣಕ್ಕೆ ತರಲಾಗಿದ್ದರೂ, ಕಟ್ಟಡದ ಕೆಲವು ಭಾಗಗಳಿಗೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ.

15 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿತ್ತು. ಜಲಫಿರಂಗಿಗಳ ನೆರವಿನಿಂದ 12 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಲಾಯಿತು. ಪೊಲೀಸರು, ಸೇನೆ, ಇಂಡೋನೇಷ್ಯಾ ರೆಡ್‌ಕ್ರಾಸ್‌ ಹಾಗೂ ಸ್ವಯಂಸೇವಕರನ್ನೊಳಗೊಂಡ ಜಂಟಿ ರಕ್ಷಣಾ ತಂಡ ಶೋಧ ಕಾರ್ಯದಲ್ಲಿ ತೊಡಗಿದೆ.

ಕಾರ್ಖಾನೆಯ ಅವಶೇಷಗಳ ನಡುವೆ ಸುಟ್ಟುಹೋದ ಕಬ್ಬಿಣದ ತುಂಡುಗಳು ಮತ್ತು ವಿರೂಪಗೊಂಡ ಲೋಹದ ಸಾಮಗ್ರಿಗಳು ಕಂಡುಬಂದಿವೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಕಾರ್ಖಾನೆಯ ಮೂರನೇ ಮಹಡಿಯಲ್ಲಿದ್ದ ಕೂಲಿಂಗ್‌ ಘಟಕದಿಂದ ಬೆಂಕಿ ಆರಂಭವಾಗಿರಬಹುದು ಎಂದು ಬದುಕುಳಿದ ಕಾರ್ಮಿಕರು ತಿಳಿಸಿದ್ದಾರೆ.

RELATED ARTICLES

Latest News