Homeರಾಜ್ಯರವಿ ಹಂಜ್‌ ಮತ್ತು ಅಡ್ಡಾಂಡ ಕಾರ್ಯಪ್ಪ ಗಡಿಪಾರಿಗೆ ಕಾಂಗ್ರೆಸ್‌‍ ಪ್ರತಿಭಟನೆ

ರವಿ ಹಂಜ್‌ ಮತ್ತು ಅಡ್ಡಾಂಡ ಕಾರ್ಯಪ್ಪ ಗಡಿಪಾರಿಗೆ ಕಾಂಗ್ರೆಸ್‌‍ ಪ್ರತಿಭಟನೆ

ಬೆಂಗಳೂರು, ನ. 23-ವಿಶ್ವಗುರು ಬಸವಣ್ಣ ಹಾಗೂ ರಾಷ್ಟ್ರಪಿತ ಮಹಾತ ಗಾಂಧೀಜಿ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ರಾಷ್ಟ್ರೀಯ ಮೌಲ್ಯಗಳಿಗೆ ಧಕ್ಕೆ ತರುತ್ತಿರುವ ರವಿ ಹಂಜ್‌ ಮತ್ತು ಅಡ್ಡಾಂಡ ಕಾರ್ಯಪ್ಪ ಅವರನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್‌‍. ಮನೋಹರ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ರೇಸ್‌‍ ಕೋರ್ಸ್‌ ರಸ್ತೆಯಲ್ಲಿರುವ ಕಾಂಗ್ರೆಸ್‌‍ ಭವನದ ಮುಂಭಾಗ ಪ್ರತಿಭಟನೆ ನಡೆಸಿದ ಮುಖಂಡರು, ಕಾರ್ಯಕರ್ತರು ಸಮಾನತೆ, ಮಾನವೀಯತೆ, ಕಾಯಕ ಮತ್ತು ದಾಸೋಹದ ತತ್ವಗಳನ್ನು ಇಡೀ ವಿಶ್ವಕ್ಕೆ ಸಾರಿದ ವಿಶ್ವಗುರು ಬಸವಣ್ಣನವರು ಹಾಗೂ ಸತ್ಯ, ಅಹಿಂಸೆ ಮತ್ತು ಶಾಂತಿಯ ಮಾರ್ಗದ ಮೂಲಕ ಜಗತ್ತಿಗೆ ಮಾದರಿಯಾದ ರಾಷ್ಟ್ರಪಿತ ಮಹಾತ ಗಾಂಧೀಜಿಯವರನ್ನು ಅವಮಾನಿಸುವ ಪ್ರಯತ್ನಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಕೃತ್ಯಗಳು ಸಮಾಜದಲ್ಲಿ ಅಶಾಂತಿ ಮತ್ತು ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವ ಆತಂಕವಿದೆ. ಆದ್ದರಿಂದ ಸಂಬಂಧಪಟ್ಟ ಸರ್ಕಾರ ಹಾಗೂ ಪೊಲೀಸ್‌‍ ಇಲಾಖೆ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕಾನೂನಿನ ಚೌಕಟ್ಟಿನಲ್ಲಿ ಗಡಿಪಾರು ಕ್ರಮ ಜರುಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಆನಂದ್‌, ಕುಶಾಲ್‌ ಹರವೇಗೌಡ, ಸಾಯಿ ನವೀನ್‌, ಪುಟ್ಟರಾಜು, ಆನಂದ್‌ ಕುಮಾರ್‌, ಹೋಬಳೇಶ್‌, ನಿರಂಜನ್‌, ಬಾಲಾಜಿ , ಪವನ್‌, ರಾಮಾಂಜನೇಯ, ಸುರೇಶ್‌ ಹಾಗೂ ಮಂಜು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಬಸವಣ್ಣ ಮತ್ತು ಗಾಂಧೀಜಿಯವರ ಅಭಿಮಾನಿಗಳು ಭಾಗವಹಿಸಿದ್ದರು.

ಪ್ರತಿಭಟನೆಯ ವೇಳೆ ರವಿ ಹಂಜ್‌ ಮತ್ತು ಅಡ್ಡಾಂಡ ಕಾರ್ಯಪ್ಪ ಅವರ ಪ್ರತಿಕೃತಿಗಳನ್ನು ದಹಿಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿ, ನಾಡಿನ ಮಹಾನ್‌ ಚೇತನಗಳ ಗೌರವ ಮತ್ತು ಘನತೆಯನ್ನು ಕಾಪಾಡಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.

RELATED ARTICLES

Latest News