ಬೆಂಗಳೂರು,ನ.23 – ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಜಾರಿ ನಿರ್ದೇಶನಾಲಯ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದೆ.ಕೆಪಿಎಸ್ಸಿಯ 13 ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ನಡೆಸಿದ ಪರಿಶೀಲನೆಯಲ್ಲಿ ಒಎಂಆರ್ ಉತ್ತರಪತ್ರಿಕೆಗಳ ತಿದ್ದುಪಡಿ, ಸಿಸಿಟಿವಿ ದೃಶ್ಯಾವಳಿಗಳ ನಾಪತ್ತೆ, ಆಯ್ಕೆ ಸಮಿತಿ ಸಭೆಗಳಲ್ಲಿ ನಿಯಮ ಉಲ್ಲಂಘನೆ ಹಾಗೂ ಉದ್ಯೋಗ ಕೊಡಿಸುವುದಕ್ಕಾಗಿ ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಇಡಿ ಕರ್ನಾಟಕ ಹೈಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.
ಕೆಪಿಎಸ್ಸಿ ಮಾಜಿ ಅಧ್ಯಕ್ಷ ಸಾಹುಕಾರ್ ಎಸ್.ಶಿವಶಂಕರಪ್ಪ ಹಾಗೂ ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ರವರ ಅಧಿಕಾರಾವಧಿಯಲ್ಲಿ ನಡೆದಿರುವ ನೇಮಕಾತಿ ಅಕ್ರಮಗಳ ಕುರಿತು ವರದಿಯಲ್ಲಿ ವಿವರಿಸಲಾಗಿದೆ. ವಿವಿಧ ನೇಮಕಾತಿ ಪ್ರಕ್ರಿಯೆಗಳಲ್ಲಿ ನಡೆದಿರುವ ಅಕ್ರಮಗಳು ವ್ಯವಸ್ಥಿತವಾಗಿದ್ದವು ಎಂಬುದಕ್ಕೆ ದಾಖಲೆಗಳು ಮತ್ತು ಸಾಕ್ಷ್ಯಗಳು ಲಭ್ಯವಾಗಿವೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ವಿಶೇಷವಾಗಿ 2022-23ನೇ ಸಾಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೇಮಕಾತಿ ಪರೀಕ್ಷೆಯಲ್ಲಿ ಗಂಭೀರ ಲೋಪಗಳು ಕಂಡುಬಂದಿವೆ. 2025ರ ಜ.23ರಂದು ಕೆಪಿಎಸ್ಸಿ ಉಪಸಮಿತಿ ಸಲ್ಲಿಸಿದ್ದ ವರದಿಯಲ್ಲಿ ಹಲವು ಅಭ್ಯರ್ಥಿಗಳ ಒಎಂಆರ್ ಹಾಳೆಗಳನ್ನು ತಿರುಚಿರುವುದು, ಉತ್ತರಪತ್ರಿಕೆಗಳಲ್ಲಿ ದೋಷಗಳಿರುವುದು ಹಾಗೂ ಪರೀಕ್ಷಾ ಕೇಂದ್ರಗಳ ಸಿಸಿಟಿವಿ ದೃಶ್ಯಾವಳಿಗಳು ನಾಪತ್ತೆಯಾಗಿರುವುದು ಅಥವಾ ತಪ್ಪಾದ ದೃಶ್ಯಾವಳಿಗಳನ್ನು ಒದಗಿಸಿರುವುದು ಪತ್ತೆಯಾಗಿದೆ.
ಇದಲ್ಲದೆ 2024ರ ಜ.31ರಂದು ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಅಗತ್ಯ ಕೋರಂ ಇಲ್ಲದಿದ್ದರೂ, ಅಧ್ಯಕ್ಷರು ಗೈರುಹಾಜರಾಗಿದ್ದರೂ ಅಂತಿಮ ಆಯ್ಕೆ ಪಟ್ಟಿಗೆ ಅನುಮೋದನೆ ನೀಡಿರುವುದು ಮತ್ತೊಂದು ಗಂಭೀರ ಅಕ್ರಮವಾಗಿದೆ ಎಂದು ಇಡಿ ವರದಿಯಲ್ಲಿ ತಿಳಿಸಿದೆ. ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಪತ್ತೆಯಾಗಿರುವ ಅಕ್ರಮಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಇ.ಡಿ ಸಲ್ಲಿಸಿರುವ ಮಾಹಿತಿಯನ್ನು ಪರಿಗಣಿಸಿರುವ ಹೈಕೋರ್ಟ್, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಶನಿವಾರ ನಿರ್ದೇಶನ ನೀಡಿದೆ.
ಕೆಪಿಎಸ್ಸಿಯ ಮಾಜಿ ಅಧ್ಯಕ್ಷ ಸಾಹುಕಾರ್ ಎಸ್. ಶಿವಶಂಕರಪ್ಪ ಹಾಗೂ ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಅಧಿಕಾರಾವಧಿಯಲ್ಲಿ ನಡೆದಿರುವ ನೇಮಕಾತಿ ಅಕ್ರಮಗಳ ಕುರಿತು ಇ.ಡಿ ತನ್ನ ವರದಿಯಲ್ಲಿ ವಿವರಿಸಿದೆ.
ವಿಶೇಷವಾಗಿ 2022-23ನೇ ಸಾಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೇಮಕಾತಿ ಪರೀಕ್ಷೆಯಲ್ಲಿ ಗಂಭೀರ ಲೋಪಗಳು ಕಂಡುಬಂದಿವೆ. 2025ರ ಜನವರಿ 23ರಂದು ಕೆಪಿಎಸ್ಸಿ ಉಪಸಮಿತಿ ಸಲ್ಲಿಸಿದ್ದ ವರದಿಯಲ್ಲಿ ಹಲವು ಅಭ್ಯರ್ಥಿಗಳ ಒಎಂಆರ್ ಹಾಳೆಗಳನ್ನು ತಿರುಚಿರುವುದು, ಉತ್ತರಪತ್ರಿಕೆಗಳಲ್ಲಿ ದೋಷಗಳಿರುವುದು ಹಾಗೂ ಪರೀಕ್ಷಾ ಕೇಂದ್ರಗಳ ಸಿಸಿಟಿವಿ ದೃಶ್ಯಾವಳಿಗಳು ನಾಪತ್ತೆಯಾಗಿರುವುದು ಅಥವಾ ತಪ್ಪಾದ ದೃಶ್ಯಾವಳಿಗಳನ್ನು ಒದಗಿಸಿರುವುದು ಪತ್ತೆಯಾಗಿದೆ.
ಇದಲ್ಲದೆ 2024ರ ಜನವರಿ 31ರಂದು ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಅಗತ್ಯ ಕೋರಂ ಇಲ್ಲದಿದ್ದರೂ, ಅಧ್ಯಕ್ಷರು ಗೈರುಹಾಜರಾಗಿದ್ದರೂ ಅಂತಿಮ ಆಯ್ಕೆ ಪಟ್ಟಿಗೆ ಅನುಮೋದನೆ ನೀಡಿರುವುದು ಮತ್ತೊಂದು ಗಂಭೀರ ಅಕ್ರಮವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
10 ಅಭ್ಯರ್ಥಿಗಳ ಒಎಂಆರ್ ಹಾಳೆ ತಿರುಚಿರುವ ಆರೋಪ
ಈ ಪ್ರಕರಣದಲ್ಲಿ 10 ಅಭ್ಯರ್ಥಿಗಳಿಗೆ ಸಂಬಂಧಿಸಿದ ಒಎಂಆರ್ ಉತ್ತರಪತ್ರಿಕೆಗಳನ್ನು ತಿರುಚಿರುವುದನ್ನು ಜ್ಞಾನೇಂದ್ರ ಗಂಗ್ವಾರ್ ಒಪ್ಪಿಕೊಂಡಿದ್ದಾರೆ ಎಂದು ಇಡಿ ವರದಿ ಉಲ್ಲೇಖಿಸಿದೆ. ಮತ್ತೊಂದೆಡೆ, ದಯಾನಂದ್ ಎಂಬ ವ್ಯಕ್ತಿಯೊಬ್ಬರು ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಾನ ಪಡೆಯಲು 30 ಲಕ್ಷ ರೂ.ಬೇಡಿಕೆ ಇಡಲಾಗಿತ್ತು ಎಂದು ಆರೋಪಿಸಿರುವುದನ್ನೂ ತನಿಖಾ ಸಂಸ್ಥೆ ದಾಖಲಿಸಿದೆ.
ಕೆಎಎಸ್ ಪರೀಕ್ಷೆಯಲ್ಲೂ 1.5 ಕೋಟಿ ಸಂಗ್ರಹ:
2023ನೇ ಸಾಲಿನ ಗೆಜೆಟೆಡ್ ಪೊಬೇಷನರ್ಸ್ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆಯೂ ಇಡಿ ಗಂಭೀರ ಆರೋಪಗಳನ್ನು ಮಾಡಿದೆ.ನಿವೃತ್ತ ಸಹಾಯಕ ಕಾರ್ಯದರ್ಶಿ ಪ್ರಕಾಶ್ ಟಿ. ಅವರಿಂದ ವಶಪಡಿಸಿಕೊಳ್ಳಲಾದ ದಾಖಲೆಗಳ ಪ್ರಕಾರ, 2025ರ ಮೇ 2ರಂದು ನಡೆದ ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಹೆಚ್ಚಿನ ಅಂಕಗಳನ್ನು ಕೊಡಿಸುವ ಉದ್ದೇಶದಿಂದ ಸುಮಾರು 1.5 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಪರೀಕ್ಷಾ ನಿಯಂತ್ರಕರ ಆಪ್ತ ಸಹಾಯಕ ಆರ್.ಜೆ. ಮಹೇಶ್ ಕುಮಾರ್ ಅವರಿಗೆ ಒಂದು ಕೋಟಿಗೂ ಹೆಚ್ಚು ನಗದು ಹಾಗೂ 30 ಲಕ್ಷ ರೂ.ಮೌಲ್ಯದ ಚೆಕ್ಗಳನ್ನು ನೀಡಿರುವುದಕ್ಕೆ ಸಂಬಂಧಿಸಿದ ಹೇಳಿಕೆಗಳು ಮತ್ತು ದಾಖಲೆಗಳನ್ನು ಇಡಿ ಉಲ್ಲೇಖಿಸಿದೆ.
ಎಂವಿಐ, ಬಿಬಿಎಂಪಿ ನೇಮಕಾತಿಗಳಲ್ಲೂ ಅಕ್ರಮದ ನಂಟು
2016ರ ಮೋಟಾರು ವಾಹನ ನಿರೀಕ್ಷಕ ಪರೀಕ್ಷೆ ಹಾಗೂ 2024ರಲ್ಲಿ ಬಿಬಿಎಂಪಿ ಮತ್ತು ಜಲಸಂಪನೂಲ ಇಲಾಖೆಯ ಸಹಾಯಕ ಎಂಜಿನಿಯರ್ ನೇಮಕಾತಿಗಳಲ್ಲಿಯೂ ಅಕ್ರಮಗಳು ನಡೆದಿರುವುದನ್ನು ಇಡಿ ಗುರುತಿಸಿದೆ. ಪ್ರಕಾಶ್.ಟಿ ಅವರಿಂದ ವಶಪಡಿಸಿಕೊಳ್ಳಲಾದ ಕೈಬರಹದ ಟಿಪ್ಪಣಿಗಳಲ್ಲಿ ಮೋಟಾರು ವಾಹನ ನಿರೀಕ್ಷಕ ಹುದ್ದೆಗೆ ಆಯ್ಕೆಯಾಗಲು ಪ್ರತಿ ಅಭ್ಯರ್ಥಿಯಿಂದ 5 ಲಕ್ಷದಿಂದ 10 ಲಕ್ಷ ರೂ.ವರೆಗೆ ಅಕ್ರಮ ಹಣ ಪಡೆಯಬೇಕಾಗಿತ್ತು ಎಂಬ ವಿವರಗಳಿವೆ ಎಂದು ಮೂಲಗಳು ತಿಳಿಸಿವೆ. ಈ ಹಣವನ್ನು ಮಹೇಶ್ಕುಮಾರ್ ಮೂಲಕ ಗಂಗ್ವಾರ್ ಸೇರಿದಂತೆ ಇತರರಿಗೆ ತಲುಪಿಸಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಎಸ್ಐಟಿ ತನಿಖೆಗೆ ಮತ್ತಷ್ಟು ಬಲ:
ಕೆಪಿಎಸ್ಸಿ ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದಂತೆ ತಾನು ಸಂಗ್ರಹಿಸಿರುವ ಸಾಕ್ಷ್ಯಗಳು, ದಾಖಲೆಗಳು ಮತ್ತು ತನಿಖೆಯ ಅಂಶಗಳನ್ನು ವಿಶೇಷ ತನಿಖಾ ತಂಡದೊಂದಿಗೆ ಹಂಚಿಕೊಂಡಿರುವುದಾಗಿ ಇಡಿ ಹೈಕೋರ್ಟ್ಗೆ ತಿಳಿಸಿದೆ.ಇಡಿ ಒದಗಿಸಿರುವ ಮಾಹಿತಿಯ ಆಧಾರದ ಮೇಲೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸಿ, ಮುಂದಿನ ತನಿಖೆಗಾಗಿ ಅವುಗಳನ್ನು ಎಸ್ಐಟಿಗೆ ವರ್ಗಾಯಿಸುವಂತೆ ನ್ಯಾಯಾಲಯ ಪೊಲೀಸರಿಗೆ ನಿರ್ದೇಶನ ನೀಡಿದೆ.
