ಬೆಂಗಳೂರು, ನ.25- ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ವಿಧಾನ ಮಂಡಲ ಅಧಿವೇಶನಕ್ಕೆ 7 ದಿನ ಬಾಕಿ ಇರುವಾಗಲೇ ಪ್ರತ್ಯೇಕ ರಾಜ್ಯದ ಕೂಗು ಎದ್ದಿದೆ. ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯವಾದರೆ ಒಳ್ಳೆಯದು ಎಂದು ಬಿಜೆಪಿಯ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಈ ಹಿಂದೆ ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕ ಉಮೇಶ್ ಕತ್ತಿ ಪದೇ ಪದೇ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಿದ್ದರು. ಅವರ ಅಕಾಲಿಕ ನಿಧನದ ಬಳಿಕ ಪ್ರತ್ಯೇಕ ರಾಜ್ಯದ ಚರ್ಚೆಗಳು ಅಷ್ಟಾಗಿ ಕೇಳಿ ಬರಲಿಲ್ಲ. ಕಳೆದ ವರ್ಷ ಸಂಘಟನೆಯೊಂದು ಪ್ರತ್ಯೇಕ ರಾಜ್ಯದ ಚರ್ಚೆಗೆ ಪ್ರಯತ್ನ ಮಾಡಿತ್ತು. ಅದಕ್ಕೆ ಕಾಂಗ್ರೆಸ್ನ ಶಾಸಕರಾಗಿರುವ ರಾಜುಕಾಗೆ, ಸೇರಿದಂತೆ ಕೆಲವರು ಧ್ವನಿಗೂಡಿಸಿದ್ದರು. ರಾಜುಕಾಗೆ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲರು, ಮುಖ್ಯಮಂತ್ರಿ ಸೇರಿದಂತೆ ಹಲವರಿಗೆ ಪತ್ರ ಬರೆದಿದ್ದರು.
ಉತ್ತರ ಕರ್ನಾಟಕ ಭಾಗದ 15 ಜಿಲ್ಲೆಗಳನ್ನು ಒಳಗೊಂಡು ಪ್ರತ್ಯೇಕ ರಾಜ್ಯ ಮಾಡುವಂತೆ ಅವರು ಬರೆದಿದ್ದ ಪತ್ರಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಧ್ವನಿಗೂಡಿಸಿದ್ದರು. ಪ್ರತ್ಯೇಕ ರಾಜ್ಯದ ಬೇಡಿಕೆ ನಾಡ ದ್ರೋಹದ ಕೆಲಸ ಎಂಬರ್ಥದಲ್ಲಿ ವಾದಗಳು ನಡೆಯುತ್ತಿವೆ. ಆದರೆ, ಅಭಿವೃದ್ಧಿಯಲ್ಲಾಗುತ್ತಿರುವ ಹಿನ್ನಡೆಯನ್ನು ಆಧರಿಸಿ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಬಳ್ಳಾರಿ, ಹಾವೇರಿ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ. ಬಾಗಲಕೋಟೆ, ವಿಜಯಪುರ ಜಿಲ್ಲೆಗಳನ್ನು ಒಳಗೊಂಡು ಪ್ರತ್ಯೇಕ ರಾಜ್ಯ ರಚಿಸಬೇಕೆಂಬ ಕೂಗು ಎದ್ದಿದೆ.
ಹಳೇ ಮೈಸೂರು ಭಾಗ ಮತ್ತು ಮಧ್ಯ ಕರ್ನಾಟಕ ಭಾಗದಷ್ಟೀ ಜನ ಸಂಖ್ಯೆ ಹೊಂದಿರುವ ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಸಮಾನಾಂತರವಾಗಿಲ್ಲ ಎಂಬ ಆರೋಪಗಳು ತೀವ್ರವಾಗಿವೆ. ಡಿಸೆಂಬರ್ 2 ರಿಂದ ವಿಧಾನ ಮಂಡಲ ಅಧಿವೇಶನ ನಡೆಯಲಿದೆ. ಅದಕ್ಕೂ ಮುನ್ನ ಬಾಲಚಂದ್ರ ಜಾರಕಿಹೊಳಿ ಅವರ ಹೇಳಿಕೆ ಕಿಚ್ಚು ಹಚ್ಚಿದೆ. ಅಭಿವೃದ್ಧಿಯಲ್ಲಿ ನಿರಂತರವಾಗಿ ನಮಗೆ ಅನ್ಯಾಯವಾಗುತ್ತಿದೆ. ಬೆಳಗಾವಿಯನ್ನು ರಾಜಧಾನಿಯನ್ನಾಗಿ ಕೇಂದ್ರೀಕರಿಸಿ ಪ್ರತ್ಯೇಕ ರಾಜ್ಯವಾದರೆ ಸಂಪೂರ್ಣ ಅಭಿವೃದ್ಧಿ ಸಾಧ್ಯ ಎಂದು ಬಾಲಚಂದ್ರ ಹೇಳಿದ್ದಾರೆ.
ಉಮೇಶ್ ಕತ್ತಿಯವರು ಬದುಕಿದ್ದಾಗ ವ್ಯಕ್ತಪಡಿಸುತ್ತಿದ್ದ ಅಭಿಪ್ರಾಯಗಳನ್ನು ಪುನರುಚ್ಚರಿಸುವ ಬಾಲಚಂದ್ರ ಜಾರಕಿಹೊಳಿ, ಇಲ್ಲಿ ಸುವರ್ಣಸೌಧ ನಿರ್ಮಿಸಲಾಗಿದೆ. ಆದರೆ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ ಎಂದು ಆಕ್ಷೇಪಿಸಿದ್ದಾರೆ.ಬಿಜೆಪಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ವಿಧಾನ ಮಂಡಲ ಅಧೀವೇಶನದಲ್ಲಿ ಚರ್ಚೆ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.
