Homeರಾಜ್ಯಬೆಂಗಳೂರಲ್ಲಿ ಅನಧಿಕೃತ ಓಎಫ್‌ಸಿ ಕೇಬಲ್‌ಗೂ ಒಟಿಎಸ್‌‍ ಜಾರಿ

ಬೆಂಗಳೂರಲ್ಲಿ ಅನಧಿಕೃತ ಓಎಫ್‌ಸಿ ಕೇಬಲ್‌ಗೂ ಒಟಿಎಸ್‌‍ ಜಾರಿ

ಬೆಂಗಳೂರು, ನ.25- ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಆಪ್ಟಿಕಲ್‌ ಫೈಬರ್‌ ಕೇಬಲ್‌ಗಳನ್ನು (ಓಎಫ್‌ಸಿ) ನಿಗದಿತ ಗಡುವಿನೊಳಗೆ ಸಕ್ರಮಗೊಳಿಸದಿದ್ದರೆ ಅವುಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದು ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ.

ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ಓಎಫ್‌ಸಿ ಕೇಬಲ್‌ಗಳ ನಿರ್ವಹಣೆ ಮತ್ತು ನಿಯಂತ್ರಣ ಕುರಿತ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಕೇಬಲ್‌ ಅಳವಡಿಕೆ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ, ಎಲ್ಲ ನಗರ ಪಾಲಿಕೆಗಳ ವ್ಯಾಪ್ತಿಯಲ್ಲೂ ಏಕರೂಪದ ನಿಯಮಗಳನ್ನು ಜಾರಿಗೊಳಿಸುವಂತೆ ನಿರ್ದೇಶನ ನೀಡಿದರು.

5 ಲಕ್ಷಕ್ಕೂ ಹೆಚ್ಚು ಅನಧಿಕೃತ ಓವರ್‌ಹೆಡ್‌‍ ಕೇಬಲ್‌ಗಳು:
ನಗರದಲ್ಲಿ 5 ಲಕ್ಷಕ್ಕೂ ಹೆಚ್ಚು ಅನಧಿಕೃತ ಓವರ್‌ಹೆಡ್‌‍ ಕೇಬಲ್‌ಗಳು ಹಾಗೂ ಸುಮಾರು 12 ಸಾವಿರ ಕಿ.ಮೀ. ಉದ್ದದ ಅಕ್ರಮ ಭೂಗತ ಕೇಬಲ್‌ಗಳಿರುವುದು ವರದಿಯಾಗಿದೆ. ಇದರ ಜತೆಗೆ 3,460 ಕಿ.ಮೀ. ಉದ್ದದ ಓವರ್‌ಹೆಡ್‌‍ ಕೇಬಲ್‌ಗಳಿದ್ದು, ಮರಗಳ ಮೇಲೆ 30ಕ್ಕೂ ಹೆಚ್ಚು ನಿರುಪಯುಕ್ತ ಕೇಬಲ್‌ಗಳು ನೇತಾಡುತ್ತಿವೆ.

ಇವು ನಗರ ಸೌಂದರ್ಯಕ್ಕೆ ಧಕ್ಕೆ ತರುವುದರ ಜತೆಗೆ ಸಾರ್ವಜನಿಕರ ಸುರಕ್ಷತೆಗೂ ಅಪಾಯಕಾರಿಯಾಗಿವೆ.ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಟೆಲಿಕಾಂ ಮತ್ತು ಇಂಟರ್‌ನೆಟ್‌‍ ಸೇವಾ ಸಂಸ್ಥೆಗಳಿಗೆ ತಮ್ಮ ಬಳಿ ಇರುವ ಅನಧಿಕೃತ ಕೇಬಲ್‌ಗಳನ್ನು ಘೋಷಿಸಿಕೊಂಡು, ಒಂದು ಬಾರಿಯ ಶುಲ್ಕ ಪಾವತಿಸಿ ಸಕ್ರಮಗೊಳಿಸಿಕೊಳ್ಳಲು ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಈ ಸಂಬಂಧ ಗುತ್ತಿಗೆದಾರರೊಂದಿಗೆ ಚರ್ಚಿಸಿ ನಿಗದಿತ ಕಾಲಾವಕಾಶ ನೀಡಲಾಗುವುದು. ಗಡುವು ಮುಗಿದ ಬಳಿಕವೂ ಸಕ್ರಮಗೊಳಿಸದ ಹಾಗೂ ಅಪಾಯಕಾರಿಯಾಗಿ ನೇತಾಡುವ ಕೇಬಲ್‌ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಆನ್‌ಲೈನ್‌‍ ಪಾವತಿ ಕಡ್ಡಾಯ:
ಓಎಫ್‌ಸಿ ಕೇಬಲ್‌ ಅಳವಡಿಕೆಗೆ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ನಗರ ಪಾಲಿಕೆಗಳ ಸಾಫ್ಟ್ ವೇರ್‌ ಮೂಲಕ ಅರ್ಜಿ ಸಲ್ಲಿಸುವ ಸಂಸ್ಥೆಗಳಿಗೆ ನಿಗದಿತ ಶುಲ್ಕವನ್ನು ಆನ್‌ಲೈನ್‌ನಲ್ಲೇ ಪಾವತಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು. ನಕಲಿ ಅನುಮತಿ ಪತ್ರಗಳ ಹಾವಳಿಗೆ ಕಡಿವಾಣ ಹಾಕಿ, ಅನುಮತಿ ನೀಡುವ ಮತ್ತು ಶುಲ್ಕ ಪಾವತಿಸುವ ಪ್ರಕ್ರಿಯೆಯನ್ನು ವ್ಯವಸ್ಥಿತಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅನಧಿಕೃತವಾಗಿ ಕೇಬಲ್‌ ಅಳವಡಿಸಿರುವ ಸಂಸ್ಥೆಗಳಿಗೆ ನಿಯಮಾನುಸಾರ ಕ್ರಮಬದ್ಧಗೊಳಿಸಿಕೊಳ್ಳಲು ಸೂಕ್ತ ಕಾಲಾವಕಾಶ ನೀಡಬೇಕು. ನಿಗದಿತ ಅವಧಿಯೊಳಗೆ ನಿಯಮ ಪಾಲಿಸದಿದ್ದರೆ ಸಂಬಂಧಪಟ್ಟ ನಗರ ಪಾಲಿಕೆಗಳೇ ಕೇಬಲ್‌ಗಳನ್ನು ತೆರವುಗೊಳಿಸಬೇಕು ಎಂದು ಹೇಳಿದರು.

ಹೊಸ ರಸ್ತೆ ಅಗೆಯಲು ಅನುಮತಿ ಇಲ್ಲ:
ಹೊಸದಾಗಿ ನಿರ್ಮಿಸಿದ ರಸ್ತೆಗಳನ್ನು ಯಾವುದೇ ಕಾರಣಕ್ಕೂ ಅಗೆಯಲು ಅನುಮತಿ ನೀಡಬಾರದು. ವೈಟ್‌ ಟಾಪಿಂಗ್‌ ಹಾಗೂ ಟೆಂಡರ್‌ ಶ್ಯೂರ್‌ ರಸ್ತೆಗಳಲ್ಲಿ ಈಗಾಗಲೇ ನಿರ್ಮಿಸಿರುವ ಡಕ್ಟ್‌ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕೇಬಲ್‌ ಜಂಕ್ಷನ್‌ ಬಾಕ್ಸ್ ಗಳನ್ನು ಆಸ್ತಿಯ ಅಂಚಿನಲ್ಲಿ ಹಾಗೂ ಏಳು ಅಡಿ ಎತ್ತರದಲ್ಲಿ ಅಳವಡಿಸಬೇಕು ಎಂದು ಸೂಚಿಸಿದರು.’ ಅಗತ್ಯವಿದ್ದಲ್ಲಿ ಪ್ರಸ್ತುತ ನಿಯಮಗಳಿಗೆ ತಿದ್ದುಪಡಿ ತಂದು, ಕೇಬಲ್‌ ಅಳವಡಿಕೆ ಮತ್ತು ನಿರ್ವಹಣೆಗೆ ಪ್ರತ್ಯೇಕ ಬೈಲಾ ರೂಪಿಸಿಕೊಳ್ಳುವಂತೆಯೂ ನಿರ್ದೇಶನ ನೀಡಿದರು.

75 ಪ್ರಮುಖ ಜಂಕ್ಷನ್‌ಗಳ ಅಭಿವೃದ್ಧಿ:
ನಗರದ ರಸ್ತೆ ಸುರಕ್ಷತೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಿದ ಸಚಿವರು, 75 ಪ್ರಮುಖ ಜಂಕ್ಷನ್‌ಗಳ ಅಭಿವೃದ್ಧಿಯನ್ನು ವೈಜ್ಞಾನಿಕವಾಗಿ ಕೈಗೊಳ್ಳುವಂತೆ ಸೂಚಿಸಿದರು.

RELATED ARTICLES

Latest News