ನವದೆಹಲಿ, ಅ. 11 (ಪಿಟಿಐ): ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಘೋಷಿಸಿರುವ ಹಿನ್ನೆಲೆಯಲ್ಲಿ, ಇಂದೂ ಕೂಡ ದೆಹಲಿಯಾದ್ಯಂತ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮುಂದುವರಿಸಲಾಗಿದೆ.
ಇದಕ್ಕಾಗಿ 30,000ಕ್ಕೂ ಹೆಚ್ಚು ಪೊಲೀಸ್ ಮತ್ತು ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಿಗದಿತ ಸ್ಥಳವಾದ ಜಂತರ್ ಮಂತರ್‌ನಲ್ಲಿ ಸಮಾವೇಶ ನಡೆಸಲು ಅನುಮತಿ ನಿರಾಕರಿಸಲಾಗಿದ್ದರೂ, ಅಲ್ಲಿಗೆ ತಲುಪಲು ಪ್ರಯತ್ನಿಸುತ್ತಿದ್ದ ಪ್ರತಿಭಟನಾಕಾರರನ್ನು ತಡೆಯಲು ದೆಹಲಿ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸಿ, ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದರು.
ಅನಧಿಕೃತ ಸಭೆ-ಸಮಾರಂಭಗಳನ್ನು ತಡೆಯಲು ಹಾಗೂ ಕಾನೂನು-ಸುವ್ಯವಸ್ಥೆಯನ್ನು ಕಾಪಾಡಲು, ರಾಷ್ಟ್ರ ರಾಜಧಾನಿಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಗಡಿಗಳು, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಇತರ ಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಸಿಜೆಪಿ ತನ್ನ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಈ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭದ್ರತಾ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ದೆಹಲಿ ಪೊಲೀಸರಿಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 120ಕ್ಕೂ ಹೆಚ್ಚು ಕಂಪನಿಗಳು ನೆರವಾಗುತ್ತಿವೆ.
ನವದೆಹಲಿ ಜಿಲ್ಲೆಯನ್ನು 20 ವಲಯಗಳಾಗಿ ವಿಂಗಡಿಸಲಾಗಿದ್ದು, ಜಂಟಿ ಆಯುಕ್ತರು, ಉಪ ಆಯುಕ್ತರು ಮತ್ತು ಹೆಚ್ಚುವರಿ ಉಪ ಆಯುಕ್ತರು ಸ್ಥಳದಲ್ಲಿನ ಬೆಳವಣಿಗೆಗಳ ಮೇಲೆ ನಿಗಾ ವಹಿಸಿದ್ದಾರೆ. ವಿವಿಧ ವಿಭಾಗಗಳ ನೇತೃತ್ವ ವಹಿಸಿರುವ ವಿಶೇಷ ಆಯುಕ್ತರು ಕೂಡ ಪರಿಸ್ಥಿತಿಯ ಮೇಲೆ ಹತ್ತಿರದ ನಿಗಾ ಇರಿಸಿದ್ದಾರೆ.
ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಿರುವ ಪೊಲೀಸರು, ವಾಹನ ತಪಾಸಣೆಯನ್ನು ಹೆಚ್ಚಿಸಿದ್ದಾರೆ ಹಾಗೂ ಹೋಟೆಲ್‌ಗಳು, ಅತಿಥಿ ಗೃಹಗಳು, ಲಾಡ್‌್ಜಗಳು ಮತ್ತು ಧರ್ಮಶಾಲೆಗಳಲ್ಲಿ ಪರಿಶೀಲನೆಯನ್ನು ತೀವ್ರಗೊಳಿಸಿದ್ದಾರೆ. ತಿಭಟನಾಕಾರರನ್ನು ಒಗ್ಗೂಡಿಸುವ ಪ್ರಯತ್ನಗಳಿವೆಯೇ ಎಂದು ಪತ್ತೆಹಚ್ಚಲು ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ವಹಿಸಲಾಗುತ್ತಿದೆ.
ಶಾಂತಿಯನ್ನು ಕಾಪಾಡುವಂತೆ ಮತ್ತು ಭದ್ರತಾ ಸಿಬ್ಬಂದಿಗೆ ಸಹಕರಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ಅಧಿಕೃತ ಪ್ರಕಟಣೆಗಳನ್ನು ಪರಿಶೀಲಿಸುವಂತೆ ಸಲಹೆ ನೀಡಲಾಗಿದೆ.
