Homeರಾಜ್ಯದಸರಾ ಉದ್ಘಾಟಿಸಿ ಶ್ರೀ ಅಭಿನವ ಗವಿ ಸಿದ್ದೇಶ್ವರ ಮಹಾಸ್ವಾಮಿ ಭಾಷಣ : ಇಲ್ಲಿದೆ ಹೈಲೈಟ್ಸ್

ದಸರಾ ಉದ್ಘಾಟಿಸಿ ಶ್ರೀ ಅಭಿನವ ಗವಿ ಸಿದ್ದೇಶ್ವರ ಮಹಾಸ್ವಾಮಿ ಭಾಷಣ : ಇಲ್ಲಿದೆ ಹೈಲೈಟ್ಸ್

ಮೈಸೂರು, ಅ.11- ಧರ್ಮ ಎಂದರೆ ಮನುಷ್ಯನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುವುದಲ್ಲ, ನಾವಿರುವ ಭೂಮಿಯನ್ನೇ ಸ್ವರ್ಗವನ್ನಾಗಿಸುವುದೇ ಧರ್ಮ ಎಂದು ಕೊಪ್ಪಳದ ಶ್ರೀ ಅಭಿನವ ಗವಿ ಸಿದ್ದೇಶ್ವರ ಮಹಾಸ್ವಾಮಿ ಹೇಳಿದರು.416ನೇ ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇನ್ನೊಬ್ಬರನ್ನು ತುಳಿದು ಬದುಕುವುದು ಧರ್ಮವಲ್ಲ, ತಿಳಿದು ಬದುಕುವುದು ನಿಜವಾದ ಧರ್ಮ ಎಂದರು.

ನಾನು ಮೈಸೂರು ದಸರಾವನ್ನು ಉದ್ಘಾಟಿಸಲು ಬಂದಿಲ್ಲ, ಬದಲಾಗಿ ಈ ಹಿಂದೆ ವಿಜ್ಞಾನಿಗಳು, ಕವಿಗಳು, ಪ್ರಗತಿಪರ ರೈತರು, ಯತಿವರ್ಯರು ಸೇರಿದಂತೆ ಅನೇಕ ಗಣ್ಯರು ದಸರಾ ಉದ್ಘಾಟಿಸಿದ್ದಾರೆ. ಅವರು ವಿವಿಧ ಆಶಯಗಳಿಂದ ಹಚ್ಚಿದ ದೀಪ ಆರದಂತೆ, ಕಾಪಾಡುವಂತೆ ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಲು ಬಂದಿದ್ದೇನೆ ಎಂದರು.

ದೀಪ ಹಚ್ಚಲು ಚಾಚಿದ ಕೈ ನನ್ನದೇ ಆದರೂ, ಆ ಬೆಳಕು ಚಾಮುಂಡಿಯದು. ನಾಡಿನ ಶಕ್ತಿ ದೇವತೆ ಸನ್ನಿಧಿಯಲ್ಲಿ ಪ್ರಾರ್ಥಿಸಲು ನಾನು ಕೊಪ್ಪಳದಿಂದ ಬಂದಿದ್ದೇನೆ. ಹೂವಿನೊಂದಿಗೆ ಸುವಾಸನೆಯನ್ನು ಹೇಗೆ ಬೇರ್ಪಡಿಸಲು ಸಾಧ್ಯವಿಲ್ಲವೋ ಹಾಗೇ ಮೈಸೂರಿನ ಇತಿಹಾಸವನ್ನು ಮಹಾರಾಜರ ಹೊರತಾಗಿ ಹೇಳಲು ಸಾಧ್ಯವಿಲ್ಲ. ಇಡೀ ವಿಶ್ವವೇ ಬೆಳಕನ್ನು ಹುಡುಕುವಾಗ ಮೈಸೂರು ಮಹಾರಾಜರು ಜಲ ವಿದ್ಯುತ್‌ ತಯಾರಿಸಿದ್ದರು. ಕನ್ನಂಬಾಡಿ ಕಟ್ಟೆ ಕಟ್ಟುವ ಮೂಲಕ ನಾಡನ್ನು ಹಸಿರಾಗಿಸಿದರು. ಅವರು ಮಣ್ಣನ್ನು ಆಳಲಿಲ್ಲ, ಜನರ ಮನಸ್ಸನ್ನು ಆಳಿದರು ಎಂದರು.

ನಾಡ ಹಬ್ಬ ದಸರಾ ಕೊಪ್ಪಳದಿಂದ ಆರಂಭವಾಯಿತು. ತುಂಗಾಭದ್ರಾ ತೀರದಿಂದ ಕಾವೇರಿಯವರೆಗೂ ಮಹಾನವಮಿ ದಿಬ್ಬದಿಂದ ಮೈಸೂರಿನವರೆಗೂ ಹಬ್ಬಿದೆ ಎಂದು ವಿವರಿಸಿದರು.ದಸರಾ ದೊರೆಗಳ ಹಬ್ಬವಷ್ಟೇ ಅಲ್ಲ, ಧರೆಯ ಹಬ್ಬ. ಮನುಷ್ಯರನ್ನು ಮನುಷ್ಯರಂತೆ ಕಾಣುವ ಸಂಸ್ಕೃತಿ ನಮದು. ಬಸವಣ್ಣ ಕಾಲದಲ್ಲಿ ದುಡಿಮೆಯೇ ದೇವರು ಎಂಬ ನಿಲುವುಗಳನ್ನು ಪ್ರತಿಪಾದಿಸಲಾಯಿತು ಎಂದು ಹೇಳಿದರು.

ಕರಾವಳಿಯ ಅಬ್ಬಕ್ಕದೇವಿ, ಬೆಳಗಾವಿಯ ಚೆನ್ನಮ ಸೇರಿದಂತೆ ನಾಡಿನ ಇತಿಹಾಸ ಸೃಷ್ಟಿಸಿದವರನ್ನು ಸರಿಸಿಕೊಂಡ ಶ್ರೀ ಗಳು, ಈ ನಾಡನ್ನು ಕಾರ್ಮಿಕರ ಶ್ರಮ, ರೈತರ ಬೆವರು, ಜ್ಞಾನಿಗಳ ಬುದ್ಧಿ, ಕವಿಗಳ ಮಾಧುರ್ಯ, ಹೋರಾಟಗಾರರ ತ್ಯಾಗ, ಉದ್ಯೋಗಿಗಳ ಆತಗೌರವಗಳೊಂದಿಗೆ ಕಟ್ಟಲಾಗಿದೆ. ಬುದ್ಧ ಸಮಾಜಕ್ಕೆ ಬೆಳಕಾಗು ಎಂದು ಸಂದೇಶ ನೀಡಲು ಸಾಮ್ರಾಜ್ಯ ತೊರೆದು, ಕಾಡು-ಮೇಡು ಅಲೆಯಬೇಕಾಯಿತು. ನಮ ಜನಪದದಲ್ಲಿ ಮಗುವಿಗೆ ಅನ್ನ ತಿನಿಸುತ್ತಾ ತಾಯಿ, ನಾಡಿಗೆ ಅರಸಾಗು, ಊರಿಗೆ ಬೆಳಕಾಗು ಎಂಬ ಸಂದೇಶ ನೀಡಿದ್ದಾರೆ. ನಮ ಜಾನಪದದಲ್ಲಿ ಅಷ್ಟು ಶಕ್ತಿ ಇದೆ ಎಂದು ಹೇಳಿದರು.

ಚಿನ್ನ, ಕಬ್ಬಿಣ ಖಾಲಿಯಾದರೆ ವಿದೇಶದಿಂದ ಆಮದು ಮಾಡಿಕೊಳ್ಳಬಹುದು ಆದರೆ ಕಾವೇರಿ, ಕೃಷ್ಣ ಬರಿದಾದರೆ ಎಲ್ಲಿಂದ ತರುವುದು ಎಂದು ಪ್ರಶ್ನಿಸಿದ ಶ್ರೀಗಳು, ಪರಿಸರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಸಂದೇಶ ನೀಡಿದರು.

ಸ್ವಚ್ಚ ನೀರು, ಗಾಳಿ, ಬೆಳಕು, ಮಣ್ಣನ್ನು ಯಾವ ಸರ್ಕಾರಗಳು ನೀಡಿಲ್ಲ, ಅದು ನಿಸರ್ಗದತ್ತವಾದ ಕೊಡುಗೆ. ಅದನ್ನು ನಾವು ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಅವರ ಪತ್ನಿ ಉಷಾ, ಸಚಿವರಾದ ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ, ಪುಟ್ಟರಂಗಶೆಟ್ಟಿ, ಕೆ.ಎಸ್‌‍. ಬಸವಂತಪ್ಪ, ರಿಜ್ವಾನ್‌ ಅರ್ಷದ್‌, ಶಿವರಾಜ ತಂಗಡಗಿ, ಅಜಯ್‌ ಸಿಂಗ್‌, ಸಂಸದ ಸುನೀಲ್‌ ಬೋಸ್‌‍, ಶಾಸಕರಾದ ಎಚ್‌.ಸಿ.ಮಹದೇವಪ್ಪ, ಹರೀಶ್‌ ಗೌಡ, ಅನಿಲ್‌ ಚಿಕ್ಕಮಾದು, ತನ್ವೀರ್‌ ಸೇಠ್‌, ಕೆ. ವೆಂಕಟೇಶ್‌, ಜಿ.ಟಿ.ದೇವೆಗೌಡ, ದರ್ಶನ್‌ ದ್ರುವನಾರಾಯಣ್‌, ಎ.ಆರ್‌. ಕೃಷ್ಣಮೂರ್ತಿ, ಡಿ.ರವಿಶಂಕರ್‌, ವಿಧಾನ ಪರಿಷತ್‌ ಸದಸ್ಯರಾದ ಡಾ. ಕೆ. ಶಿವಕುಮಾರ್‌, ಡಿ. ತಿಮಯ್ಯ, ವಿವೇಕಾನಂದ, ರಘು ಕೌಟಿಲ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
spot_img

Latest News