ಅಲಿರಾಜ್ಪುರ, ಅ. 12- ಸಿಮೆಂಟ್ ಸಾಗಿಸುವ ಬಲ್ಕರ್ ಟ್ಯಾಂಕರ್ನಲ್ಲಿ ಅಕ್ರಮವಾಗಿ ಬಚ್ಚಿಟ್ಟು ಸಾಗಿಸುತ್ತಿದ್ದ ಸುಮಾರು 1 ಕೋಟಿ ಮೌಲ್ಯದ ಮದ್ಯವನ್ನು ಮಧ್ಯಪ್ರದೇಶದ ಅಲಿರಾಜ್ಪುರ ಜಿಲ್ಲೆಯಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ.ಈ ಸಂಬಂಧ ರಾಜಸ್ಥಾನದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದ್ದು, ಹರಿಯಾಣದಿಂದ ಗುಜರಾತ್ಗೆ ಮದ್ಯ ಸಾಗಿಸುತ್ತಿದ್ದ ಆರೋಪ ಕೇಳಿಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯರಾತ್ರಿ ಖಂಡ್ವಾ-ಬರೋಡಾ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು, ಖಚಿತ ಮಾಹಿತಿ ಆಧರಿಸಿ ರಾಜಸ್ಥಾನ ನೋಂದಣಿಯ ಬಲ್ಕರ್ ಟ್ಯಾಂಕರ್ ಅನ್ನು ತಡೆದು ಪರಿಶೀಲಿಸಿದರು. ಈ ವೇಳೆ ಸಿಮೆಂಟ್ ಸಾಗಿಸುವ ಟ್ಯಾಂಕರ್ನಲ್ಲಿ ಅಕ್ರಮವಾಗಿ ಬಚ್ಚಿಟ್ಟಿದ್ದ 1,426 ಬಾಕ್್ಸಮದ್ಯ ಪತ್ತೆಯಾಗಿದೆ. ವಶಪಡಿಸಿಕೊಂಡ ಮದ್ಯದ ಮೌಲ್ಯ ಸುಮಾರು 1 ಕೋಟಿ ಎಂದು ಅಂದಾಜಿಸಲಾಗಿದೆ.ಬಂಧಿತನನ್ನು ರಾಜಸ್ಥಾನದ ಬಾರ್ಮೇರ್ ಜಿಲ್ಲೆಯ ನಿವಾಸಿ ಹೆಮಾರಾಮ್ ಜಾಟ್ (30) ಎಂದು ಗುರುತಿಸಲಾಗಿದೆ.
ಗುಜರಾತ್ನಲ್ಲಿ ಮದ್ಯ ನಿಷೇಧವಿದೆ. ಇಂತಹ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.ಮದ್ಯದ ಮೂಲ, ಸಾಗಾಟದ ಹಿಂದಿರುವ ಜಾಲ ಹಾಗೂ ಪ್ರಕರಣದಲ್ಲಿ ಇತರರು ಭಾಗಿಯಾಗಿದ್ದಾರೆಯೇ ಎಂಬ ಕುರಿತು ಮಧ್ಯಪ್ರದೇಶ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
