ಬೆಂಗಳೂರು,ಅ.12- ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯ ಪರಿಣಾಮ ಅ.14ರಿಂದ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಮಳೆಯಾಗುವ ಮುನ್ಸೂಚನೆಗಳಿವೆ.ಅ.14ರಿಂದ 18ರವರೆಗೆ ರಾಜ್ಯದಲ್ಲಿ ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುತ್ತಿದ್ದು, ಅದರ ಪರಿಣಾಮ ರಾಜ್ಯದಲ್ಲೂ ಮಳೆಯಾಗುವ ನಿರೀಕ್ಷೆಗಳಿವೆ.
ಅಕ್ಟೋಬರ್ ತಿಂಗಳ ಮೊದಲರೆಡು ವಾರದಲ್ಲೂ ಉತ್ತಮ ಮಳೆಯಾಗಿಲ್ಲ. ಬಹುತೇಕ ಕಡೆಗಳಲ್ಲಿ ಮಳೆ ಕೊರತೆ ಮುಂದುವರೆದಿದ್ದು, ಬರದ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ. ಮುಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ತೇವಾಂಶದ ಕೊರತೆ ಉಂಟಾಗಿದ್ದು, ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ.
ಅ.14ರಂದು ಕೋಲಾರ, ಬೆಂಗಳೂರು ದಕ್ಷಿಣ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅ.15ರಂದು ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳನ್ನು ಹೊರತುಪಡಿಸಿ ದಕ್ಷಿಣ ಒಳನಾಡು ಹಾಗೂ ಉತ್ತರ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುವ ಮುನ್ಸೂಚನೆಗಳಿವೆ. ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರಲಿದೆ. ಅ.16ರಂದು ರಾಜ್ಯಾದ್ಯಂತ ಮಳೆ ವ್ಯಾಪಿಸಲಿದ್ದು, ಭಾಗಶಃ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ.
ಈ ತಿಂಗಳ 18ರವರೆಗೂ ಮಳೆ ಮುಂದುವರೆಯುವ ನಿರೀಕ್ಷೆಗಳಿವೆ. ನಿರೀಕ್ಷೆಯಂತೆ ಮತ್ತೊಂದು ಸುತ್ತಿನ ಮಳೆಯಾದರೆ ಮುಂಗಾರು ಹಂಗಾಮಿನ ಬೆಳೆಗಳಿಗೆ ಅನುಕೂಲವಾಗಲಿದೆ. ಒಂದು ವೇಳೆ ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ಉಳಿದಿರುವ ಅಲ್ಪಸ್ವಲ್ಪ ಬೆಳೆಯೂ ರೈತರ ಕೈ ತಪ್ಪುವುದು ನಿಚ್ಚಳವಾಗಿದೆ.
