Homeರಾಷ್ಟ್ರೀಯಇಂಡಿ ನಾಯಕರನ್ನು ಭೇಟಿ ಮಾಡಲು ನಿರಾಕರಿಸಿದ ಸಿಜೆಐ ಸೂರ್ಯ ಕಾಂತ್

ಇಂಡಿ ನಾಯಕರನ್ನು ಭೇಟಿ ಮಾಡಲು ನಿರಾಕರಿಸಿದ ಸಿಜೆಐ ಸೂರ್ಯ ಕಾಂತ್

ನವದೆಹಲಿ,ಅ.12- ಸುಪ್ರೀಂ ಕೋರ್ಟ್‌ನ ಬಾಗಿಲು ಪ್ರತಿಯೊಬ್ಬ ನಾಗರಿಕನಿಗೂ ಸದಾ ತೆರೆದಿರುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಇಂದು ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೂರ್ಯಕಾಂತ್‌, ಇಂಡಿಯಾ ಬ್ಲಾಕ್‌ ನಾಯಕರ ಭೇಟಿಯ ಮನವಿ ಪತ್ರ ತಮಗೆ ಹಿಂದಿನ ದಿನವೇ ತಲುಪಿತ್ತು ಎಂದು ತಿಳಿಸಿದರು. ಅದಕ್ಕೆ ತಾವು ಹಿಂದಿನ ರಾತ್ರಿಯೇ ಪ್ರತಿಕ್ರಿಯಿಸಿದ್ದು, ಭೇಟಿಯಾಗಲು ಸಾಧ್ಯವಾಗದಿರುವುದಕ್ಕೆ ಕಾರಣಗಳನ್ನೂ ವಿವರಿಸಿದ್ದಾಗಿ ಹೇಳಿದರು.

ಯಾವುದೇ ಸಾಮಾನ್ಯ ನಾಗರಿಕ ಅಥವಾ ಚುನಾಯಿತ ಜನಪ್ರತಿನಿಧಿಯು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಸ್ವಾಗತವಿದೆ. ಪ್ರತಿಯೊಬ್ಬ ಭಾರತೀಯನಿಗೂ ನ್ಯಾಯಾಂಗದ ಮೊರೆ ಹೋಗುವ ಹಕ್ಕಿದ್ದು, ಅವರ ಕಳವಳಗಳನ್ನು ಆಲಿಸಿ ಕಾನೂನಿನ ಚೌಕಟ್ಟಿನಲ್ಲಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ, ರಾಜಕೀಯ ಮತ್ತು ಪ್ರಜಾಸತ್ತಾತಕ ಪ್ರತಿಭಟನೆಗಳಿಗೆ ಅವಕಾಶವಿದ್ದರೂ, ಸುಪ್ರೀಂಕೋರ್ಟ್‌ ಅನ್ನು ಅದಕ್ಕೆ ಎಳೆದುತರಬಾರದು ಎಂದೂ ಅವರು ಮುಕ್ತ ನ್ಯಾಯಾಲಯದ ಸಭೆಯಲ್ಲಿ ಹೇಳಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಆಗ್ರಹಿಸಿ ಇಂಡಿ ಒಕ್ಕೂಟದ ನಾಯಕರು ನಡೆಸಲು ಉದ್ದೇಶಿಸಿದ್ದ ಸಭೆಯನ್ನು ಸೂರ್ಯಕಾಂತ್‌ ಅವರು ನಿರಾಕರಿಸಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌‍ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿಪಕ್ಷಗಳ ನಿಯೋಗ ಸಂಜೆ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಲು ಸಮಯ ಕೋರಿತ್ತು. ಆದರೆ, ಭೇಟಿಗೆ ನಿರಾಕರಿಸಿರುವ ಸಿಜೆಐ ಸೂರ್ಯಕಾಂತ್‌, ಅದಕ್ಕೆ ಸೂಕ್ತ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ವಿಷಯಗಳು ನ್ಯಾಯಾಂಗದ ಪರಿಶೀಲನೆಯಲ್ಲಿರುವ ಹಿನ್ನೆಲೆಯಲ್ಲಿ, ರಾಜಕೀಯ ನಾಯಕರನ್ನು ಪ್ರತ್ಯೇಕವಾಗಿ ಭೇಟಿ ಮಾಡುವುದರಿಂದ ನ್ಯಾಯಾಂಗದ ನಿಷ್ಪಕ್ಷಪಾತದ ಕುರಿತು ಪ್ರಶ್ನೆಗಳು ಉದ್ಭವಿಸದಂತೆ ನೋಡಿಕೊಳ್ಳುವುದು ಮುಖ್ಯ ಎಂಬ ದೃಷ್ಟಿಕೋನ ಈ ಬೆಳವಣಿಗೆಯಲ್ಲಿ ಗಮನ ಸೆಳೆಯುತ್ತದೆ.

RELATED ARTICLES
spot_img

Latest News