ಹಾಸನ, ಅ.12- ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ನಡುವಿನ ವಾಕ್ಸಮರದ ಚರ್ಚೆಯ ಬೆನ್ನಲ್ಲೇ ಜಿಲ್ಲಾಧಿಕಾರಿ ತಮ ವೈಯಕ್ತಿಕ ವಾಟ್ಸಾಪ್ ಸ್ಟೇಟಸ್ನಲ್ಲಿ ಹಂಚಿಕೊಂಡಿರುವ ಸಂದೇಶ ಗಮನ ಸೆಳೆದಿದೆ.ಭಾನುವಾರ ಬೆಳಿಗ್ಗೆ 7.40ಗಂಟೆಗೆ ರಾಷ್ಟ್ರ ಲಾಂಛನ ಹಾಗೂ ಸತ್ಯಮೇವ ಜಯತೇ ಧ್ಯೇಯವಾಕ್ಯದೊಂದಿಗೆ ಇಂಗ್ಲಿಷ್ನ ಎರಡು ಸಾಲುಗಳ ಸಂದೇಶವನ್ನು ಅವರು ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದಾರೆ. ಸುಳ್ಳಿನ ದಾಳಿಯಿಂದ ತಮ್ಮನ್ನು ಕುಗ್ಗಿಸಲು ಸಾಧ್ಯವಿಲ್ಲ, ಸತ್ಯವೇ ರಕ್ಷಿಸುತ್ತದೆ ಎಂಬ ಅರ್ಥವನ್ನು ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕೆಪಿಎಸ್ಸಿ ಅಕ್ರಮಗಳ ವಿಚಾರವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಬೆಳವಣಿಗೆಯ ನಡುವೆಯೇ ಜಿಲ್ಲಾಧಿಕಾರಿ ಹಂಚಿಕೊಂಡಿರುವ ಸಂದೇಶ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.
ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಈ ಹಿಂದೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ವಿರುದ್ಧ ವಾಗ್ದಾಳಿ ನಡೆಸಿದ್ದ ಸಂದರ್ಭದಲ್ಲಿಯೂ ಜಿಲ್ಲಾಧಿಕಾರಿ ಇದೇ ರೀತಿಯಲ್ಲಿ ವಾಟ್್ಸಆ್ಯಪ್ ಸ್ಟೇಟಸ್ ಹಾಕಿಕೊಂಡು ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದೀಗ ಮತ್ತೊಮೆ ರಾಜಕೀಯ ನಾಯಕರ ಟೀಕೆಯ ಬೆನ್ನಲ್ಲೇ ಅವರು ಹಂಚಿಕೊಂಡಿರುವ ಸಂದೇಶ ಚರ್ಚೆಗೆ ಕಾರಣವಾಗಿದೆ.
ಹೀಗಾಗಿ, ಜಿಲ್ಲಾಧಿಕಾರಿಯ ಈ ಸ್ಟೇಟಸ್ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಟೀಕೆಗೆ ನೀಡಿದ ಪರೋಕ್ಷ ತಿರುಗೇಟೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಆದರೆ, ಈ ಸಂದೇಶವನ್ನು ಅವರು ನಿರ್ದಿಷ್ಟವಾಗಿ ಯಾರನ್ನಾದರೂ ಉದ್ದೇಶಿಸಿ ಪ್ರಕಟಿಸಿದ್ದಾರೆಯೇ ಎಂಬುದರ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ. ಒಟ್ಟಿನಲ್ಲಿ, ಕೆಪಿಎಸ್ಸಿ ಅಕ್ರಮಗಳ ಆರೋಪದ ವಿಚಾರವಾಗಿ ನಡೆಯುತ್ತಿರುವ ಬೆಳವಣಿಗೆಗಳ ನಡುವೆ ಜಿಲ್ಲಾಧಿಕಾರಿ ಲತಾಕುಮಾರಿ ಅವರ ವಾಟ್್ಸಆ್ಯಪ್ ಸ್ಟೇಟಸ್ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
