ಬೆಂಗಳೂರು, ಅ.12- ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿಂದು ಎಸ್‌ಐಆರ್ ವಿರುದ್ಧ ಆಯೋಜಿಸಲಾಗಿದ್ದ ದೆಹಲಿ ಚಲೋ ಮೂಲಕ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರಿಗೆ ಅಧಿಕೃತವಾಗಿ ದೂರು ಸಲ್ಲಿಸಲಾಗಿದೆ. ಕಾಂಗ್ರೆಸ್‌ನ ಮುಂಚೂಣಿಯಲ್ಲಿ ಆರ್‌ಜೆಡಿ, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಸೇರಿದಂತೆ ಇಂಡಿಯಾ ಬ್ಲಾಕ್‌ನ ಇತರ ಮುಖಂಡರು ಪ್ರಜಾಪ್ರಭುತ್ವ ರಕ್ಷಣೆಯ ಹೆಸರಿನ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ದೇಶಾದ್ಯಂತ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ತಿನ ಸದಸ್ಯರು, ಆಡಳಿತಾರೂಢ ರಾಜ್ಯಗಳಲ್ಲಿನ ನಿಗಮ ಮಂಡಳಿಗಳ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್, ಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರು ಸೇರಿದಂತೆ ಸಾವಿರಾರು ಜನ ದೆಹಲಿಯ ಕಾನ್ಸಿಟ್ಯೂಷನ್ ಕ್ಲಬ್‌ನಲ್ಲಿಂದು ಜಮಾಯಿಸಿದರು.
ಇದಕ್ಕೂ ಮೊದಲು ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ಈಗಾಗಲೇ ಸಿಜೆಪಿ ನೇತೃತ್ವದಲ್ಲಿ ಜೆನ್-ಜಿಗಳ ಹೋರಾಟ ತೀವ್ರಗೊಂಡಿದ್ದು, ಯುವ ಜನರನ್ನು ಹತ್ತಿಕ್ಕಲು ದೆಹಲಿಯ ಗಡಿ ಸುತ್ತಲೂ ಮುಳ್ಳಿನ ಬೇಲಿ ಅಳವಡಿಸಲಾಗಿದೆ. ಸುಮಾರು 70 ಸಾವಿರಕ್ಕೂ ಹೆಚ್ಚಿನ ಪೊಲೀಸರು, ಅರೆಸೇನಾ ಪಡೆಗಳನ್ನು ನಿಯೋಜಿಸಿ ಬಿಗಿ ಭದ್ರತೆ ಆಯೋಜಿಸಲಾಗಿದೆ. ರೈಲು ಸಂಚಾರ, ಮೆಟ್ರೋ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅದರ ಹೊರತಾಗಿಯೂ ಲಕ್ಷಾಂತರ ಜನ ದೆಹಲಿಗೆ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ.
ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಪ್ರಜಾಪ್ರಭುತ್ವ ಆಂಧೋಲನ ಮತ್ತು ನ್ಯಾಯಕ್ಕಾಗಿ ಜಾಥಾದಲ್ಲಿ ಅಪಾರ ಸಂಖ್ಯೆಯ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಭಾಗವಹಿಸಿದ್ದರು. ಸುಪ್ರೀಂಕೋರ್ಟ್‌ವರೆಗೂ ಇಂದು ಪ್ರತಿಭಟನೆ ನಡೆಸಿ ಸಂಜೆ 4.30ಕ್ಕೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಮನವಿ ನೀಡುವುದು ಇಂಡಿಯಾ ಕೂಟದ ಇರಾದೆಯಾಗಿತ್ತು. ಅದಕ್ಕನುಗಣವಾಗಿ ಸಮಯವೂ ನಿಗದಿಯಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದರು.
ನಿನ್ನೆ ರಾತ್ರಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಸುಪ್ರೀಂಕೋಟ್‌ನ ಮುಖ್ಯನ್ಯಾಯ ಮೂರ್ತಿಯವರು ಇ-ಮೇಲ್ ಮೂಲಕ ಮಾಹಿತಿ ನೀಡಿದ್ದು, ಯಾವುದೇ ಮನವಿಗಳಿದ್ದರೂ ಅದನ್ನು ಸುಪ್ರೀಂಕೋರ್ಟ್‌ನ ವಿಚಾರಣೆಯ ಅನುಸಾರ ಅಧಿಕೃತ ನಮೂನೆಯಲ್ಲಿ ಸಲ್ಲಿಸುವಂತೆ ಸೂಚಿಸಿದ್ದರು. ಅದರಂತೆಯೇ ಇಂದು ಇಂಡಿಯಾ ಬ್ಲಾಕ್‌ನ ಮುಖಂಡರು, ಮುಖ್ಯ ನ್ಯಾಯಮೂರ್ತಿಯವರಿಗೆ ಅಧಿಕೃತ ನಮೂನೆಯಲ್ಲೇ ಮನವಿ ಸಲ್ಲಿಸಲು ಮುಂದಾಗಿದ್ದರು.
ಈ ನಡುವೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನು ಭೇಟಿ ಮಾಡಲು ನಾಗರಿಕರಿಗೆ ಅವಕಾಶವಿದೆ. ಅದಕ್ಕೆ ಸಂಬಂಧಪಟ್ಟ ಶಿಷ್ಠಾಚಾರಗಳ ಬಗ್ಗೆ ತಾವು ವಿರೋಧ ಪಕ್ಷದ ನಾಯಕರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದರು.
ಮಧ್ಯಾಹ್ನದ ವೇಳೆಗೆ ಇಂಡಿಯಾ ಬ್ಲಾಕ್‌ನ ಎಲ್ಲಾ ನಾಯಕರು ದೆಹಲಿಯ ಕಾನ್ಸಿಟ್ಯೂಷನ್ ಕ್ಲಬ್‌ನಲ್ಲಿ ಸಮಾವೇಶಗೊಂಡು ಅಲ್ಲಿಂದ ಸುಪ್ರೀಂಕೋರ್ಟ್‌ವರೆಗೂ ಜಾಥಾ ತೆರಳಿದರು.
ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಪೊಲೀಸರು ಹಾಗೂ ಮುಖಂಡರ ನಡುವೆ ಮಾತಿನ ಚಕಮಕಿಗಳು ನಡೆದವು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ, ಸಂಸದೆ ಪ್ರಿಯಾಂಕ ಗಾಂಧಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
