Homeರಾಷ್ಟ್ರೀಯರಾಹುಲ್‌ ಸಲ್ಲಿಸಿದ್ದ ಅರ್ಜಿಯಲ್ಲಿ ನಾನಾ ದೋಷ : ಮರು ಅರ್ಜಿ ಸಲ್ಲಿಕೆವರೆಗೂ ವಿಚಾರಣೆ ಅಸಾಧ್ಯ

ರಾಹುಲ್‌ ಸಲ್ಲಿಸಿದ್ದ ಅರ್ಜಿಯಲ್ಲಿ ನಾನಾ ದೋಷ : ಮರು ಅರ್ಜಿ ಸಲ್ಲಿಕೆವರೆಗೂ ವಿಚಾರಣೆ ಅಸಾಧ್ಯ

ನವದೆಹಲಿ, ಅ. 13- ಕಾಂಗ್ರೆಸ್‌‍ ನಾಯಕ ರಾಹುಲ್‌ಗಾಂಧಿ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ನಾನಾ ತೊಡಕುಗಳು ಕಾಣಿಸಿಕೊಂಡಿವೆ.ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ವಿರುದ್ಧ ಹಾಗೂ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನ ಆರೋಪಗಳ ಕುರಿತು ರಾಹುಲ್‌ ಗಾಂಧಿ ನೇತೃತ್ವದ ಇಂಡಿ ಮೈತ್ರಿಕೂಟ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಜಂಟಿ ಅರ್ಜಿಗೆ ಆರಂಭದಲ್ಲೇ ತಾಂತ್ರಿಕ ತೊಡಕು ಎದುರಾಗಿದೆ.

ಅರ್ಜಿಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಯು ಒಟ್ಟು 14 ತಾಂತ್ರಿಕ ದೋಷಗಳನ್ನು ಪಟ್ಟಿ ಮಾಡಿದ್ದು, ಕೋರ್ಟ್‌ ಶುಲ್ಕದಲ್ಲಿ 220ರೂ. ಶುಲ್ಕ ಬಾಕಿ ಇರುವುದು ಒಳಗೊಂಡಂತೆ ಹಲವು ಪ್ರಮುಖ ಲೋಪಗಳನ್ನು ಎತ್ತಿ ತೋರಿಸಿದೆ. ಈ ದೋಷಗಳನ್ನು ಸರಿಪಡಿಸಿ ಮರುಸಲ್ಲಿಸುವವರೆಗೂ ಅರ್ಜಿಯು ನ್ಯಾಯಪೀಠದ ಮುಂದೆ ವಿಚಾರಣೆಗೆ ಪಟ್ಟಿಯಾಗುವುದಿಲ್ಲ ಎಂದು ರಿಜಿಸ್ಟ್ರಿ ಸ್ಪಷ್ಟಪಡಿಸಿದೆ.

ಸಲ್ಲಿಕೆಯಾದ ಅರ್ಜಿಯ ಪುಟಗಳು ಹಾಗೂ ಪ್ರಮಾಣಪತ್ರಗಳಿಗೆ ಅನುಗುಣವಾಗಿ ನ್ಯಾಯಾಲಯದ ಶುಲ್ಕದಲ್ಲಿ 220 ರೂ. ಕಡಿಮೆ ಪಾವತಿಸಲಾಗಿದೆ.ಖರ್ಗೆ ಗುರುತಿನ ಚೀಟಿ ಅಸ್ಪಷ್ಟ: ಕಾಂಗ್ರೆಸ್‌‍ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಗುರುತಿನ ಚೀಟಿಯ ಪ್ರತಿ ಕಪ್ಪು-ಬಿಳುಪಾಗಿದ್ದು, ಅಸ್ಪಷ್ಟವಾಗಿದೆ . ಇದಕ್ಕೆ ಸ್ಪಷ್ಟವಾದ ಬಣ್ಣದ ಪ್ರತಿ ಲಗತ್ತಿಸಬೇಕು ಎಂದು ಸೂಚಿಸಲಾಗಿದೆ.

ಜಂಟಿ ಅರ್ಜಿದಾರರ ಪೈಕಿ 9 ಪ್ರಮುಖ ನಾಯಕರ ಅಧಿಕೃತ ಕಾನೂನು (ವಕೀಲರಿಗೆ ನೀಡುವ ಅಧಿಕಾರ ಪತ್ರ) ಲಗತ್ತಾಗಿಲ್ಲ. ನ್ಯಾಯಾಲಯದ ನಿಯಮಾವಳಿಗೆ ತಕ್ಕಂತೆ ಸೂಕ್ತ ಅಳತೆಯ ಫಾಂಟ್‌ ಬಳಸಿಲ್ಲ, ಕೆಲವು ಪುಟಗಳ ಸಂಖ್ಯೆಗಳು ಕ್ರಮಬದ್ಧವಾಗಿಲ್ಲ ಹಾಗೂ ನಿರ್ದಿಷ್ಟ ದಾಖಲೆಗಳ ಬಣ್ಣದ ಪ್ರತಿಗಳು ಕಾಣೆಯಾಗಿವೆ.ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿರುವ ರಾಹುಲ್‌ ಗಾಂಧಿ ಮತ್ತು ಇತರರು ವಿರುದ್ಧ ಭಾರತೀಯ ಚುನಾವಣಾ ಆಯೋಗ ಅರ್ಜಿಯಲ್ಲಿ ಚುನಾವಣಾ ಆಯೋಗ , ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌, ಚುನಾವಣಾ ಆಯುಕ್ತರಾದ ಸುಖ್‌ಬೀರ್‌ ಸಿಂಗ್‌ ಸಂಧು ಮತ್ತು ವಿವೇಕ್‌ ಜೋಶಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದ್ದು, ಪ್ರಮುಖ 10 ಪರಿಹಾರಗಳನ್ನು ಕೋರಲಾಗಿದೆ.

ಎಸ್‌‍ಐಆರ್‌ ಪ್ರಕ್ರಿಯೆಗೆ ಸಂಬಂಧಿಸಿದ ಸಂಪೂರ್ಣ ಮೂಲ ದಾಖಲೆಗಳನ್ನು ಸುಪ್ರೀಂ ಕೋರ್ಟ್‌ಗೆ ಹಾಜರುಪಡಿಸುವುದು.ಮತದಾರರ ಪಟ್ಟಿ ಪರಿಷ್ಕರಣೆ ಆದೇಶಗಳ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸುವುದು.ನಿಷ್ಪಕ್ಷಪಾತ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸ್ವತಂತ್ರ ಸಮಿತಿಯಿಂದ ಸಂಪೂರ್ಣ ಆಡಿಟ್‌ ನಡೆಸುವುದು.ಮತ ಕಳ್ಳತನ ಹಾಗೂ ಅಕ್ರಮಗಳಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು.ಇವಿಎಂ ಮತ್ತು ಎಲೆಕ್ಟ್ರಾನಿಕ್‌ ಅಂಚೆ ಮತಪತ್ರ ಬದಲಿಗೆ ಪಾರದರ್ಶಕ ಕಾಗದದ ಬ್ಯಾಲೆಟ್‌ಗಳಿಗೆ ಮರಳುವುದು ಇಂಡಿ ನಾಯಕರು ಸಲ್ಲಿಸಿರುವ ಅರ್ಜಿಯಲ್ಲಿರುವ ಪ್ರಮುಖ ಅಂಶಗಳಾಗಿವೆ.

ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್‌ ಯಾದವ್‌, ತೇಜಸ್ವಿ ಯಾದವ್‌, ಸೌಗತ ರಾಯ್‌, ಸುಪ್ರಿಯಾ ಸುಳೆ , ಸಂಜಯ್‌ ರಾವತ್‌ (ಶಿವಸೇನೆ-), ಡಿ. ರಾಜಾ, ಮಹುವಾ ಮಾಝಿ, ಎಂ.ಎ. ಬೇಬಿ ಮತ್ತು ಇ.ಟಿ. ಮೊಹಮ್ಮದ್‌ ಬಷೀರ್‌ ಅವರುಗಳು ಈ ಅರ್ಜಿಗೆ ಸಹಿ ಹಾಕಿದ್ದಾರೆ.

RELATED ARTICLES
spot_img

Latest News