ನವದೆಹಲಿ,ಅ.13- ದೆಹಲಿ ಪೊಲೀಸರು ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳವೆಂದು ರದ್ದುಗೊಳಿಸಿ, ರಾಮಲೀಲಾ ಮೈದಾನ, ಬುರಾರಿ ಮೈದಾನ ಹಾಗೂ ಸಿಬಿಡಿ ಮೈದಾನಗಳನ್ನು ಹೊಸ ಪ್ರತಿಭಟನಾ ಸ್ಥಳಗಳಾಗಿ ಅಧಿಸೂಚಿಸಿದ್ದಾರೆ.
ಆದಾಗ್ಯೂ, ಪ್ರಮುಖ ಸ್ಥಳವಾದ ರಾಮಲೀಲಾ ಮೈದಾನದಲ್ಲಿ ಈ ವರ್ಷ ಪ್ರತಿಭಟನೆ ನಡೆಸಲು ಕೇವಲ ಮೂರು ದಿನಾಂಕಗಳು ಮಾತ್ರ (ಡಿಸೆಂಬರ್ 29, 30 ಮತ್ತು 31) ಲಭ್ಯವಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.ಸುಮಾರು 50,000 ಜನರಿಗೆ ಅವಕಾಶ ಕಲ್ಪಿಸುವ 12 ಎಕರೆ ವಿಸ್ತೀರ್ಣದ ರಾಮಲೀಲಾ ಮೈದಾನವನ್ನು ದಿನಕ್ಕೆ ಬುಕ್ ಮಾಡಲು 50,000 ಬಾಡಿಗೆ, 55,000 ಮರುಪಾವತಿಸಬಹುದಾದ ಭದ್ರತಾ ಠೇವಣಿ ಮತ್ತು ತೆರಿಗೆಗಳು ಸೇರಿದಂತೆ ಆರಂಭಿಕವಾಗಿ 1.21 ಲಕ್ಷ ಪಾವತಿಸಬೇಕಾಗುತ್ತದೆ.
ಮೈದಾನದ ಒಂದು ಸಣ್ಣ ಭಾಗವನ್ನು ಉಚಿತವಾಗಿ ಪ್ರತಿಭಟನೆಗೆ ನೀಡಲಾಗಿದೆಯಾದರೂ, ಅಲ್ಲಿ ಕೇವಲ 150 ಜನರಿಗೆ ಮಾತ್ರ ಅವಕಾಶವಿದೆ.ದೆಹಲಿ ಮಹಾನಗರ ಪಾಲಿಕೆಯ ತೋಟಗಾರಿಕೆ ಇಲಾಖೆಯ ಮೂಲಕ ಮೈದಾನವನ್ನು ಕಾಯ್ದಿರಿಸಬೇಕಿದ್ದು, ದೆಹಲಿ ಪೊಲೀಸರ ನಿರಾಕ್ಷೇಪಣಾ ಪ್ರಮಾಣಪತ್ರ ಕಡ್ಡಾಯವಾಗಿದೆ.
ವಿರೋಧ ಪಕ್ಷಗಳ ಆಕ್ಷೇಪ:
ದಸರಾ, ದೀಪಾವಳಿ ಹಾಗೂ ವಿವಿಧ ಕಾರ್ಯಕ್ರಮಗಳ ಸಾಲು ಸಾಲು ಬುಕಿಂಗ್‌ಗಳಿಂದಾಗಿ ಮೈದಾನ ಈಗಾಗಲೇ ಭರ್ತಿಯಾಗಿದೆ. ಇಂತಹ ಸಂದರ್ಭದಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲದ ಸ್ಥಳವನ್ನು ನಿಗದಿಪಡಿಸಿ ಸರ್ಕಾರ ನಾಗರಿಕರಿಗೆ ವಂಚಿಸುತ್ತಿದೆ ಎಂದು ಎಎಪಿ ನಾಯಕ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ.
ಮೂರು ಪ್ರಮುಖ ಆಸ್ಪತ್ರೆಗಳು ಮತ್ತು ಒಅಆ ಪ್ರಧಾನ ಕಚೇರಿಯ ಬಳಿ ಇರುವ ಈ ಪ್ರದೇಶದಲ್ಲಿ ದೊಡ್ಡ ಮಟ್ಟದ ಜನಸಂದಣಿಯಿಂದಾಗಿ ಭಾರಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
1930ರವರೆಗೆ ಕೊಳವಾಗಿದ್ದ ಈ ಸ್ಥಳವನ್ನು 1932ರಲ್ಲಿ ರಾಮಲೀಲಾ ಪ್ರದರ್ಶನಕ್ಕಾಗಿ ಸಿದ್ಧಪಡಿಸಲಾಯಿತು. ಸ್ವಾತಂತ್ರ್ಯಾನಂತರ ಶ್ಯಾಮಾಪ್ರಸಾದ್ ಮುಖರ್ಜಿ ಅವರ ಸತ್ಯಾಗ್ರಹ, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ಜಯಪ್ರಕಾಶ್ ನಾರಾಯಣ್, ಅಟಲ್ ಬಿಹಾರಿ ವಾಜಪೇಯಿ ಅವರಂತಹ ಧುರೀಣರ ಐತಿಹಾಸಿಕ ರ್ಯಾಲಿಗಳಿಗೆ ಹಾಗೂ ಅರವಿಂದ್ ಕೇಜ್ರಿವಾಲ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಗಳಿಗೆ ರಾಮಲೀಲಾ ಮೈದಾನ ಸಾಕ್ಷಿಯಾಗಿದೆ.
