Homeಅಂತಾರಾಷ್ಟ್ರೀಯಕಾಂಗೋದಲ್ಲಿ ಸಾವಿನ ಕೇಕೆ : ಎಬೋಲ ಸೋಂಕಿಗೆ 4,300ಕ್ಕೂ ಹೆಚ್ಚು ಮಂದಿ ಬಲಿ

ಕಾಂಗೋದಲ್ಲಿ ಸಾವಿನ ಕೇಕೆ : ಎಬೋಲ ಸೋಂಕಿಗೆ 4,300ಕ್ಕೂ ಹೆಚ್ಚು ಮಂದಿ ಬಲಿ

ಬುನಿಯಾ, ಅ.14 (ಎಪಿ)- ಕಾಂಗೋದಲ್ಲಿ ಎಬೋಲಾ ಸೋಂಕಿನ ಪ್ರಕರಣಗಳ ಸಂಖ್ಯೆ 9,000 ದಾಟಿದ್ದು, 4,300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಏಳು ಪ್ರಾಂತ್ಯಗಳಲ್ಲಿ ಸೋಂಕು ಹರಡುತ್ತಿದ್ದು, ಅದನ್ನು ನಿಯಂತ್ರಿಸಲು ಆರೋಗ್ಯ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.

ಆರೋಗ್ಯ ಸಚಿವಾಲಯವು 9,066 ದೃಢಪಟ್ಟ ಪ್ರಕರಣಗಳು ಮತ್ತು 4,381 ಸಾವುಗಳನ್ನು ವರದಿ ಮಾಡಿದೆ. ಸಾವಿನ ಸಂಖ್ಯೆ ದೃಢಪಟ್ಟ ಪ್ರಕರಣಗಳ ಅರ್ಧದಷ್ಟಿದ್ದು, ಹೆಚ್ಚುತ್ತಿರುವ ಸಾವಿನ ಪ್ರಮಾಣ ಆರೋಗ್ಯ ಕಾರ್ಯಕರ್ತರು ಮತ್ತು ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ. ದಾಖಲಾದ ಹೆಚ್ಚಿನ ಸಾವುಗಳು ಚಿಕಿತ್ಸಾ ಕೇಂದ್ರಗಳ ಹೊರಗೆ ಸಂಭವಿಸಿರುವುದು ಕಳವಳಕ್ಕೆ ಕಾರಣವಾಗಿದೆ.

ಇತ್ತೀಚಿನ ವರದಿಯಲ್ಲಿ 88 ಹೊಸ ಪ್ರಕರಣಗಳು ದಾಖಲಾಗಿವೆ. ಸಮುದಾಯದೊಳಗೆ ಸೋಂಕು ಹರಡುವಿಕೆ ಮುಂದುವರಿದಿರುವುದು ಇನ್ನೂ ಗಂಭೀರ ಕಳವಳದ ವಿಷಯವಾಗಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಸೋಂಕು ಮತ್ತಷ್ಟು ಸಮುದಾಯಗಳಿಗೆ ಹರಡುತ್ತಿರುವುದರಿಂದ ಹೊಸ ಸೋಂಕು ಕೇಂದ್ರಗಳು ಕಾಣಿಸಿಕೊಳ್ಳುತ್ತಿವೆ. ಪ್ರಸ್ತುತ ಏಳು ಪ್ರಾಂತ್ಯಗಳ 65 ಆರೋಗ್ಯ ವಲಯಗಳು ಸೋಂಕಿನಿಂದ ಬಾಧಿತವಾಗಿವೆ. ದೃಢಪಟ್ಟ ಪ್ರಕರಣಗಳು ಒಟ್ಟು ಪ್ರಕರಣಗಳ ಮೂರನೇ ಒಂದು ಭಾಗದಷ್ಟು ಮಾತ್ರವಾಗಿದ್ದು, ಹಲವು ಪ್ರಕರಣಗಳು ಪತ್ತೆಯಾಗದೆ ಉಳಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸೋಂಕಿಗೆ ಅಪರೂಪದ ಬುಂಡಿಬುಗ್ಯೊ ವೈರಸ್ ಕಾರಣವಾಗಿದೆ. ಇದಕ್ಕೆ ನಿರ್ದಿಷ್ಟವಾಗಿ ಅನುಮೋದಿತ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವೈರಸ್ ನಿಯಂತ್ರಣದ ಪ್ರಯತ್ನಗಳಿಗೆ ಹಲವು ಅಂಶಗಳು ಅಡ್ಡಿಯಾಗಿವೆ. ಸರ್ಕಾರಿ ಪಡೆಗಳು ಮತ್ತು ಬಂಡಾಯ ಗುಂಪುಗಳ ನಡುವಿನ ಸಂಘರ್ಷ, ಆರೋಗ್ಯ ಮುನ್ನೆಚ್ಚರಿಕೆಗಳ ಬಗ್ಗೆ ಜನರ ನಿರ್ಲಕ್ಷ್ಯ, ಜನರ ನಿರಂತರ ಓಡಾಟ ಹಾಗೂ ವೈದ್ಯಕೀಯ ಸಾಮಗ್ರಿಗಳು ಮತ್ತು ಚಿಕಿತ್ಸಾ ಕೇಂದ್ರಗಳ ಕೊರತೆ ಪ್ರಮುಖ ಸವಾಲುಗಳಾಗಿವೆ. ಈ ಸಂಘರ್ಷವು ವಿಶ್ವದ ಅತ್ಯಂತ ಗಂಭೀರ ಮಾನವೀಯ ಬಿಕ್ಕಟ್ಟುಗಳಲ್ಲಿ ಒಂದಕ್ಕೆ ಕಾರಣವಾಗಿದೆ.

ಕಾಂಗೋದಲ್ಲಿ ಈ ಹಿಂದೆ ಸಂಭವಿಸಿದ 16 ಎಬೋಲಾ ಸೋಂಕಿನ ಏಕಾಏಕಿ ಹರಡುವಿಕೆಗಳಿಗಿಂತಲೂ ಪ್ರಸ್ತುತ ಪರಿಸ್ಥಿತಿ ಗಂಭೀರವಾಗಿದೆ. ಅಲ್ಲದೆ, 2014ರಿಂದ 2016ರವರೆಗೆ ಪಶ್ಚಿಮ ಆಫ್ರಿಕಾದಲ್ಲಿ 11,000ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಎಬೋಲಾ ಸಾಂಕ್ರಾಮಿಕದ ಮಟ್ಟವನ್ನು ತಲುಪುವ ಆತಂಕವೂ ವ್ಯಕ್ತವಾಗಿದೆ.

“ಸರ್ಕಾರವು ಪ್ರಸ್ತುತ ಪರಿಸ್ಥಿತಿಯಿಂದ ತೀವ್ರ ಒತ್ತಡಕ್ಕೆ ಸಿಲುಕಿದೆ ಎಂದು ನನಗನಿಸುತ್ತದೆ. ಎಬೋಲಾ ವಿರುದ್ಧದ ಹೋರಾಟ ಪರಿಣಾಮಕಾರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ತನ್ನ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ನಿರ್ವಹಿಸಬೇಕು” ಎಂದು ಸೋಂಕು ತೀವ್ರವಾಗಿ ಬಾಧಿಸಿರುವ ಇಟುರಿ ಪ್ರಾಂತ್ಯದ ರಾಜಧಾನಿ ಬುನಿಯಾದ ನಿವಾಸಿ ಸ್ಯಾಮ್ಯುಯೆಲ್ ಬುಜು ಹೇಳಿದರು.

ಕಳೆದ ವಾರ ಕಾಂಗೋದಿಂದ ಬಂದ ಎಬೋಲಾ ಪ್ರಕರಣವನ್ನು ವರದಿ ಮಾಡಿದ ಉಗಾಂಡಾದ ಬಳಿಕ, ಕೀನ್ಯಾ ಕೂಡ ಇಂತಹ ಪ್ರಕರಣವನ್ನು ವರದಿ ಮಾಡಿದ ಎರಡನೇ ದೇಶವಾಗಿದೆ. ಇದರಿಂದ ಗಡಿಯಾಚೆಗೂ ವೈರಸ್ ಹರಡುವ ಆತಂಕ ಹೆಚ್ಚಾಗಿದೆ.

RELATED ARTICLES
spot_img

Latest News