ಬೆಂಗಳೂರು,ಆ.14- ಸ್ಟಿಂಗ್ ಆಪರೇಷನ್ ಎಂಬುದು ಕೆಟ್ಟ ಚಾಳಿಯಾಗಿದ್ದು, ಯಾರೇ ಮಾಡಿದ್ದರೂ ಒಳ್ಳೆಯದಲ್ಲ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಈ ರೀತಿ ಮಾಡಬಾರದು. ಹಣಕ್ಕಾಗಿಯೋ, ರಾಜಕೀಯ ಲಾಭಕ್ಕಾಗಿಯೋ ನಡೆಯುವಂತಹ ಚಾರಿತ್ರ್ಯವಧೆ ನಿಲ್ಲಬೇಕು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶದಲ್ಲೇ ಅತ್ಯುತ್ತಮ ನಾಯಕ ಎಂಬ ಹೆಸರು ಗಳಿಸಿದ್ದಾರೆ. ಅಂಥವರ ಚಾರಿತ್ರ್ಯ ವಧೆಯಾಗಬಾರದು. ಸ್ಟಿಂಗ್ ಆಪರೇಷನ್ ಎಂಬುದು ನಿರ್ನಾಮವಾಗಬೇಕು ಎಂದರು.
ಕಬ್ಬಿಗೆ ವೈಜ್ಞಾನಿಕವಾದ ಬೆಲೆ ನಿಗದಿಯಾಗಬೇಕು. ಕೇಂದ್ರ ಸರ್ಕಾರ ಅಂಥ ವ್ಯವಸ್ಥೆಯನ್ನು ಮಾಡಬೇಕು. ಕಬ್ಬು ಬೆಳೆಗಾರರು ಪ್ರತಿಭಟನೆ ಮಾಡುತ್ತಿದ್ದು, ಅವರಿಗೆ ಕೇಂದ್ರ ಸರ್ಕಾರ ನ್ಯಾಯವಾದ ಬೆಲೆ ಒದಗಿಸಿಕೊಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು. ಕಬ್ಬು ಬೆಳೆಗಾರರ ವಿಚಾರದಲ್ಲಿ ಪ್ರಧಾನಿಯವರೇ ಮಧ್ಯಪ್ರವೇಶ ಮಾಡಬೇಕು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ರೈತರನ್ನು ಕರೆಸಿ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಅವರು ಹೇಳಿದರು.
ಝೆಕ್ ಗಣರಾಜ್ಯದ ಪ್ರತಿನಿಧಿಗಳು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಭಾರತದೊಂದಿಗಿನ ವ್ಯಾಪಾರ ಕುರಿತಂತೆ ಚರ್ಚೆ ನಡೆಸಿದ್ದಾರೆ. ಏರೋಸ್ಪೇಸ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ನಮಲ್ಲಿ ಇರುವ ವಿವಿಧ ಕಂಪನಿಗಳ ವಿವರವನ್ನು ತಿಳಿಸಿದ್ದು, ಜಾಗತಿಕ ಹೂಡಿಕೆದಾರರ ಸಮೇಳನದ ತಾಂತ್ರಿಕ ಪಾಲುದಾರರಾಗುವಂತೆ ಆಹ್ವಾನ ನೀಡಿದ್ದೇವೆ ಎಂದು ಪಾಟೀಲ್ ತಿಳಿಸಿದರು.
