Homeರಾಜಕೀಯಅತ್ಯಾಪ್ತರಿಂದಲೇ ಸಿದ್ದರಾಮಯ್ಯ ಬೆನ್ನಿಗೆ ಚೂರಿ : ಎಚ್‌ಡಿಕೆ ಶಂಕೆ

ಅತ್ಯಾಪ್ತರಿಂದಲೇ ಸಿದ್ದರಾಮಯ್ಯ ಬೆನ್ನಿಗೆ ಚೂರಿ : ಎಚ್‌ಡಿಕೆ ಶಂಕೆ

ಬೆಂಗಳೂರು,ಅ.16- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವ್ಯವಸ್ಥಿತ ಸಂಚು ನಡೆದಿರುವ ಗುಮಾನಿ ಇದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರುಗಳ ಮಾತಿನ ನಡವಳಿಕೆ ನೋಡಿದರೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ವ್ಯವಸ್ಥಿತ ಸಂಚು ನಡೆದಿರುವ ಅನುಮಾನ ಬರುತ್ತದೆ. ಸಿದ್ದರಾಮಯ್ಯ ಅವರ ಜೊತೆಯಲ್ಲೇ ಇದ್ದು ಬೆನ್ನಿಗೆ ಚೂರಿ ಹಾಕಿದ್ದಾರೋ ಅಥವಾ ಮುಂದಿನಿಂದ ಹಾಕಿದ್ದಾರೋ ಎಂಬುದನ್ನು ನೋಡೋಣ ಎಂದರು.

ಸ್ಟಿಂಗ್‌ ಆಪರೇಷನ್‌ ವಿಚಾರ ಪ್ರಸ್ತಾಪವಾಗಿ ಹತ್ತು ಹದಿನೈದು ದಿನ ಕಳೆದ ನಂತರ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಭೇಟಿಯಾಗಿ ಅವರ ಕ್ಷಮೆ ಕೋರಿದ್ದಾರೋ, ಇಲ್ಲವೋ? ಭೇಟಿ ಫಲಪ್ರದವಾಯಿತೋ? ವಿಫಲವಾಯಿತೋ? ಎಂಬುದು ಗೊತ್ತಾಗಲಿಲ್ಲ ಎಂದು ಟೀಕಿಸಿದರು.

ಸಚಿವ ಜಮೀರ್‌ ಅಹಮದ್‌ ಖಾನ್‌ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು. ಸೇರ್ಪಡೆ ಮಾಡಿಕೊಂಡ ನಂತರ ಸಂಪುಟದಿಂದ ಕೈಬಿಡಬೇಕು ಎಂದು ಸಿದ್ದರಾಮಯ್ಯ ಏಕೆ ಒತ್ತಾಯಿಸಿದ್ದರು? ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋವನ್ನು ಜಮೀರ್‌ ಅವರೇ ಏಕೆ ಬಿಟ್ಟಿರಬಾರದು ಎಂಬ ಚರ್ಚೆಯೂ ಆಗುತ್ತಿದೆ ಎಂದು ಆರೋಪ ಮಾಡಿದರು.

ಜಮೀರ್‌ ಅವರು ಸ್ಟಿಂಗ್‌ ಆಪರೇಷನ್‌ ವಿಚಾರದಲ್ಲಿ ನನ್ನ ಮೇಲೆ ಆರೋಪ ಮಾಡುವುದಿರಲಿ, ಅವರ ಬಗ್ಗೆಯೇ ಚರ್ಚೆಯಾಗುತ್ತಿದೆ ಎಂದರು.ಗೃಹಸಚಿವ ಪ್ರಿಯಾಂಕ್‌ ಖರ್ಗೆ ಅವರ ವಿರುದ್ಧ ತೀವ್ರ ವಾಗ್ದಾಳಿಯನ್ನು ಇಂದು ಮುಂದುವರೆಸಿದ ಕುಮಾರಸ್ವಾಮಿಯವರು ನಗರ ಪೊಲೀಸ್‌‍ ಆಯುಕ್ತರ ಕಚೇರಿಗೆ ಹೋಗಿ ನಾನು ಧಮ್ಕಿ ಹಾಕಿಲ್ಲ. ಅಧಿಕಾರಿಗಳನ್ನು ಕೇಳಿ.

ಸಂಶಯ ಬಂದರೆ ಕುಮಾರಸ್ವಾಮಿಯವರನ್ನು ಬಂಧಿಸುತ್ತೇನೆ ಎಂದು ಗೃಹಸಚಿವರು ಹೇಳಿದ್ದರು. ಅದಕ್ಕಾಗಿ ನನ್ನಿಂದಲೇ ತನಿಖೆ ಮಾಡಿ ಎಂದು ಹೋಗಿದ್ದೆ. ಆಯುಕ್ತರು ಪ್ರಾಮಾಣಿಕ ತನಿಖೆ ನಡೆಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ಕೈಬಿಡಲಾಯಿತು ಎಂದು ಸ್ಪಷ್ಟನೆ ನೀಡಿದರು.

ಧಮ್ಕಿ ಹಾಕುತ್ತಿರುವುದು ಪ್ರಿಯಾಂಕ್‌ ಖರ್ಗೆಯವರು. ಕಾಕ್ರೋಜ್‌ ಪಾರ್ಟಿ ಮತ್ತು ಕಾಂಗ್ರೆಸ್‌‍ ಒಂದೇ ಎಂದು ಹೇಳಿ ನೀವು ಮಾಡುವ ಪ್ರತಿಭಟನೆ ಕಾನೂನು ಕೈಗೆತ್ತಿಕೊಳ್ಳುವವರಿಗೆ ಯಾವುದೇ ಕ್ರಮ ಇಲ್ಲ ಎಂದು ಗೃಹಸಚಿವರು ಹೇಳಿದ್ದಾರೆ. ದೆಹಲಿಯಲ್ಲಿ ದೇಶದಲ್ಲಿ ಅಭದ್ರತೆ ಸೃಷ್ಟಿಸಲು ನಡೆಯುತ್ತಿರುವ ಪ್ರತಿಭಟನೆಗೆ ರಾಜ್ಯದಲ್ಲಿ ಲೂಟಿ ಮಾಡಿದ ಹಣವನ್ನು ರವಾನಿಸಲಾಗುತ್ತಿದೆ ಎಂದು ಆರೋಪಿಸಿದರು.

2 ದಿನ ಗಡುವು :
ಸ್ಟಿಂಗ್‌ ಆಪರೇಷನ್‌ ರೂವಾರಿ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕು. ನ್ಯಾಯಯುತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದೇನೆ. ಎರಡು ದಿನ ಗಡುವನ್ನೂ ಕೂಡಾ ನೀಡಿದ್ದೇನೆ. ಏನು ಮಾಡುತ್ತಾರೋ ಕಾದು ನೋಡಬೇಕು ಎಂದರು.
ಪ್ರಿಯಾಂಕ್‌ ಖರ್ಗೆಯವರಿಂದ ನೈತಿಕತೆಯ ಪಾಠ ಕಲಿಯಬೇಕಿಲ್ಲ. ಗುರುಮಿಠ್ಕಲ್‌ ಮೀಸಲು ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆಯವರು 8 ಬಾರಿ ಗೆದ್ದಿದ್ದವರು. ಆ ಕ್ಷೇತ್ರ ಸಾಮಾನ್ಯ ಕ್ಷೇತ್ರವಾದ ಮೇಲೆ ಅಲ್ಲಿ ನಿಲ್ಲಲು ರಾಜಕೀಯ ಹಾಗೂ ಆರ್ಥಿಕ ಶಕ್ತಿ ಇರಲಿಲ್ಲವೇ? ಚಿತ್ತಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಬೇರೆ ದಲಿತರಿಗೆ ಸಿಗಬೇಕಾಗಿದ್ದ ಮೀಸಲಾತಿ ಕೈತಪ್ಪಲಿಲ್ಲವೇ? ಎಂದು ಪ್ರಶ್ನಿಸಿದರು.

ಗೃಹಸಚಿವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನೇಮಕಾತಿಯಲ್ಲಿ ಅಕ್ರಮವಾಗಿದೆ ಎಂಬ ವರದಿ ಇದ್ದರೂ ಪ್ರಾಮಾಣಿಕ ತನಿಖೆಯಾಗಲಿಲ್ಲ. ಪಶು ವೈದ್ಯರ ನೇಮಕಾತಿ ವಿಚಾರದಲ್ಲಿ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದಾರೆ. ನೀವು ಪಾರದರ್ಶಕವಾಗಿದ್ದರೆ ನ್ಯಾಯಯುತ ತನಿಖೆ ನಡೆಸಬೇಕಿತ್ತು. ತಪ್ಪು ಮಾಡದಿದ್ದರೆ ಯಾವ ಅಧಿಕಾರಿ ತನಿಖೆ ನಡೆಸಿದರೆ ಏನು? ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂದು ತಿರುಗೇಟು ನೀಡಿದರು.

ತನಿಖಾಧಿಕಾರಿಗಳು ಸಚಿವರ ಮಾತು ಕೇಳಿ ಅನಾವಶ್ಯಕವಾಗಿ ಕಾರ್ಯಕರ್ತರಿಗೆ ಸಮಸ್ಯೆ ಉಂಟುಮಾಡಿದರೆ ಮುಂದೆ ತೊಂದರೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸ್ಟಿಂಗ್‌ ಆಪರೇಷನ್‌ ಹೆಸರಿನಲ್ಲಿ ಹಣ ಮಾಡುವವರನ್ನು ಮುಖ್ಯಮಂತ್ರಿಗಳು ಏಕೆ ಇಟ್ಟುಕೊಂಡಿದ್ದಾರೆ. ಇನ್ನು ಮುಂದೆಯಾದರೂ ಅಂಥವರಿಂದ ದೂರವಿದ್ದು, ಒಳ್ಳೆಯ ಕೆಲಸ ಮಾಡಲಿ. ಬಿಎಂಐಸಿ ಯೋಜನೆ, ಬಿಡದಿ ಟೌನ್‌ಶಿಪ್‌ ಯೋಜನೆಯಲ್ಲಿ ಹಣ ಲೂಟಿ ಮಾಡಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

RELATED ARTICLES
spot_img

Latest News