Friday, November 22, 2024
Homeರಾಜಕೀಯ | Politicsರಾಜ್ಯದಲ್ಲಿ ತಾರಕಕ್ಕೇರಿದ 'ಲೋಕಯುದ್ದ', ರಣಕಣದಲ್ಲಿ ನಾನಾ ಅಸ್ತ್ರಗಳ ಪ್ರಯೋಗ

ರಾಜ್ಯದಲ್ಲಿ ತಾರಕಕ್ಕೇರಿದ ‘ಲೋಕಯುದ್ದ’, ರಣಕಣದಲ್ಲಿ ನಾನಾ ಅಸ್ತ್ರಗಳ ಪ್ರಯೋಗ

ಬೆಂಗಳೂರು,ಏ.5- ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಪೂರ್ಣಗೊಂಡ ಬೆನ್ನಲ್ಲೇ ಲೋಕಸಭಾ ಚುನಾವಣೆಯ ಅಖಾಡ ರಂಗೇರಲಾರಂಭಿಸಿದೆ. ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆಯನ್ನು ಗೆಲ್ಲುವ ಹುಮ್ಮಸ್ಸಿನಲ್ಲಿ ರಣತಂತ್ರ, ಅಬ್ಬರದ ಪ್ರಚಾರ, ವಿರೋಧಿಗಳ ಮೇಲೆ ವಾಗ್ಬಾಣ ಪ್ರಯೋಗ ಸೇರಿದಂತೆ ನಾನಾ ತಂತ್ರಗಾರಿಕೆಗಳಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್ ಪಕ್ಷ ಇಂದು ರಾಷ್ಟ್ರಮಟ್ಟದಲ್ಲಿ 25 ಭರವಸೆಗಳ ಪ್ರಣಾಳಿಕೆಯನ್ನು ಅನಾವರಣಗೊಳಿಸಿದೆ.ಈ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಯ ಕಾರ್ಡ್‍ಗಳನ್ನು ಮನೆಮನೆಗೆ ತಲುಪಿಸಿದಂತೆ ಲೋಕಸಭಾ ಚುನಾವಣೆಯ ಭರವಸೆಗಳ ಗ್ಯಾರಂಟಿ ಕಾರ್ಡ್‍ಗಳನ್ನು ಸುಮಾರು 8 ಕೋಟಿ ಮನೆಗಳಿಗೆ ತಲುಪಿಸುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ.

ರಾಜ್ಯಮಟ್ಟದಲ್ಲಿ ಅನುಸರಿಸಬೇಕಾದ ಚುನಾವಣಾ ತಂತ್ರಗಾರಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಸರಣಿ ಸಭೆಗಳನ್ನು ನಡೆಸಿ ಚರ್ಚೆ ನಡೆಸಿದ್ದಾರೆ. ಎರಡನೇ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳ ಪ್ರಮುಖರ ಜೊತೆಯಲ್ಲೂ ಸಮಾಲೋಚನೆ ನಡೆಸಿದ್ದಾರೆ.

ಇತ್ತ ಬಿಜೆಪಿ ಮತ್ತು ಜೆಡಿಎಸ್‍ನ ಮೈತ್ರಿಕೂಟ ಈಗಾಗಲೇ ಚುನಾವಣಾ ಕಣದಲ್ಲಿ ಅಬ್ಬರಿಸುತ್ತಿದೆ. ನಿನ್ನೆಯವರೆಗೂ ಮೂರು ಪಕ್ಷಗಳ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ವೇಳೆ ರೋಡ್ ಶೋ, ಬಹಿರಂಗ ಸಮಾವೇಶಗಳ ಮೂಲಕ ಶಕ್ತಿ ಪ್ರದರ್ಶನ ನಡೆಸಿದವು.

ಇಂದು ನಾಮಪತ್ರ ಪರಿಶೀಲನೆ ನಡೆಯುತ್ತಿರುವುದರಿಂದಾಗಿ ಕೆಲವು ನಾಯಕರು ಸಾರ್ವಜನಿಕ ಕಾರ್ಯಕ್ರಮದಿಂದ ದೂರ ಉಳಿದು, ತಂತ್ರಗಾರಿಕೆ ರೂಪಿಸುವಲ್ಲಿ ನಿರತರಾಗಿದ್ದಾರೆ.ಜೆಡಿಎಸ್ ಮತ್ತು ಬಿಜೆಪಿ ರಾಜಕೀಯ ಪಕ್ಷಗಳ ಮುಖಂಡರು ಕ್ಷೇತ್ರವಾರು ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಸಮನ್ವಯ ಮೂಡಿಸಲು ಸಮಾಲೋಚನಾ ಸಭೆಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ರಾಜ್ಯಮಟ್ಟದ ಸಮಾಲೋಚನಾ ಸಭೆಯಲ್ಲಿ ಚರ್ಚಿಸಲಾದ ಮಾಹಿತಿಯ ಆಧಾರದ ಮೇಲೆ ಕ್ಷೇತ್ರ ಮಟ್ಟದಲ್ಲೂ ಹೊಂದಾಣಿಕೆಯ ಯಶಸ್ಸಿಗೆ ಕಾರ್ಯಯೋಜನೆ ರೂಪಿಸಲಾಗಿದೆ.

ಉಭಯ ಪಕ್ಷಗಳ ನಾಯಕರು ಬಹುತೇಕ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಪ್ರಮುಖರು ಹಾಜರಿರುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸುತ್ತಾರೆ. ಬಿಜೆಪಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಕಳೆದ 10 ವರ್ಷಗಳಲ್ಲಿ ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳು ಹಾಗೂ ರಾಜ್ಯಸರ್ಕಾರದ ಕಳೆದ 11 ತಿಂಗಳ ಆಡಳಿತ ವೈಫಲ್ಯಗಳ ಆಧಾರದ ಮೇಲೆ ಪ್ರಚಾರ ನಡೆಸುತ್ತಿದೆ.

ಕಳೆದೆರಡು ದಿನಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಾಲದ ಪ್ರಮಾಣ ಕುರಿತು ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ.ಚುನಾವಣಾ ಕಣದಲ್ಲಿ ಗ್ಯಾರಂಟಿ ಯೋಜನೆಗಳ ಸದ್ದು ಜೋರಾಗುತ್ತಿದೆ. ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವರೇ ಗ್ಯಾರಂಟಿ ಎಂದು ಬಿಂಬಿಸಿದರೆ, ಕಾಂಗ್ರೆಸ್ ಪಕ್ಷ ನ್ಯಾಯಪತ್ರ ಎಂಬ ಹೆಸರಿನಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಪ್ರಮುಖ ಭರವಸೆಗಳನ್ನು ಜನರ ಮುಂದಿಟ್ಟಿದೆ.

ಬಿಜೆಪಿಯಲ್ಲಿ ಪ್ರಣಾಳಿಕೆ ತಯಾರಿಕೆಯ ಪ್ರಕ್ರಿಯೆಗಳು ಚಾಲನೆಯಲ್ಲಿವೆ. ಎರಡನೇ ಹಂತದಲ್ಲಿ ದೇಶದ 12 ರಾಜ್ಯಗಳ 89 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಅದರಲ್ಲಿ ಪ್ರಮುಖವಾಗಿ ಕರ್ನಾಟಕದಲ್ಲಿ 14, ಕೇರಳದಲ್ಲಿ 20, ರಾಜಸ್ಥಾನದ 19, ಉತ್ತರಪ್ರದೇಶದ 8 ಕ್ಷೇತ್ರಗಳು ಒಳಗೊಂಡಿವೆ. ರಾಜ್ಯದಲ್ಲಿ 14 ಕ್ಷೇತ್ರಗಳಿಗೆ 358 ಅಭ್ಯರ್ಥಿಗಳು 492 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಪರಿಶೀಲನೆಯ ನಂತರ ಮತ್ತು ನಾಮಪತ್ರ ಹಿಂಪಡೆಯುವ ಗಡುವು ಮುಗಿದ ಏ.8 ರ ಬಳಿಕ ಅಂತಿಮವಾಗಿ ಎಷ್ಟು ಮಂದಿ ಕಣದಲ್ಲಿರಲಿದ್ದಾರೆ ಎಂಬುದು ಕಾದುನೋಡಬೇಕಿದೆ.

RELATED ARTICLES

Latest News