Thursday, May 2, 2024
Homeರಾಜ್ಯಈಶ್ವರಪ್ಪ ಈಗ ಒಂಟಿ, ಕಟ್ಟರ್ ಹಿಂದುತ್ವವಾದಿಯ ರೋಚಕ ಪೊಲಿಟಿಕಲ್ ಜರ್ನಿ

ಈಶ್ವರಪ್ಪ ಈಗ ಒಂಟಿ, ಕಟ್ಟರ್ ಹಿಂದುತ್ವವಾದಿಯ ರೋಚಕ ಪೊಲಿಟಿಕಲ್ ಜರ್ನಿ

ಬೆಂಗಳೂರು,ಏ.5- ಕೆ.ಎಸ್.ಈಶ್ವರಪ್ಪ ! ಕಟ್ಟರ್ ಹಿಂದುತ್ವವಾದಿ. ಸಂಘ ಪರಿವಾರದಿಂದ ಎದ್ದು ಬಂದ ನಾಯಕ. ಬಿಜೆಪಿಯ ನಿಷ್ಠಾವಂತ. ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ಜೊತೆ ಗುರುತಿಸಿಕೊಂಡು ಬೆಳೆದುಬಂದವರು.ಇಂತಹ ಈಶ್ವರಪ್ಪ ಈಗ ಸ್ವಪಕ್ಷದವರ ವಿರುದ್ಧವೇ ಸಿಡಿದೆದ್ದು ತಮಗೆ ರಾಜಕೀಯದಲ್ಲಿ ಗುರುತಿಸಿಕೊಳ್ಳಲು ಎಲ್ಲವನ್ನೂ ನೀಡಿದ ಯಡಿಯೂರಪ್ಪನವರ ಪುತ್ರ ರಾಘವೇಂದ್ರ ವಿರುದ್ಧವೇ ಶಿವಮೊಗ್ಗ ಕಣದಲ್ಲಿ ಅಖಾಡಕ್ಕಿಳಿದಿದ್ದಾರೆ.

ಶಿವಮೊಗ್ಗದಲ್ಲಿ ಗೆಲ್ಲಲು ಯಡಿಯೂರಪ್ಪನವರ ಶಕ್ತಿ ಬೆಳೆಸಿಕೊಂಡಿದ್ದ ಈಶ್ವರಪ್ಪ, ಬಹುತೇಕ ಅನಂತಕುಮಾರ್‍ಗೆ ನಿಷ್ಠೆಯಾಗಿದ್ದರು. ಅವರ ನಿಧನದ ನಂತರ ಬಿ.ಎಲ್.ಸಂತೋಷ್ ಜೊತೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಸದ್ಯ ಅವರು ಕೂಡ ಕೈ ಹಿಡಿಯುವ ಸ್ಥಿತಿಯಲ್ಲಿಲ್ಲ.

ಪಕ್ಷ ನಿಷ್ಠೆ, ಸಂಘ ಪರಿವಾರದ ಹಿನ್ನೆಲೆ, ಹಿಂದುತ್ವ ಹೇಳಿಕೊಂಡೇ ಆರ್‍ಎಸ್‍ಎಸ್‍ನ ಕಟ್ಟಾಳುವಾಗಿದ್ದ ಈಶ್ವರಪ್ಪ ಇಂದು ಅಕ್ಷರಶಃ ಏಕಾಂಗಿ. ಅವರ ಬೆನ್ನಿಗೆ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಪ್ರಬಲ ನಾಯಕರು ಇಲ್ಲ. ಒಂದಿಷ್ಟು ಅಭಿಮಾನಿಗಳು ಸದ್ಯ ಜೈ ಜೈ ಎನ್ನುತ್ತಿದ್ದರಾದರೂ ಅವರ ನಿಷ್ಠೆ ಯಾವುದೇ ಸಂದರ್ಭದಲ್ಲಿ ಬದಲಾದರೂ ಅಚ್ಚರಿ ಇಲ್ಲ.

ಒಂದು ಕಾಲದಲ್ಲಿ 28 ಲೋಕಸಭಾ ಕ್ಷೇತ್ರಗಳು, 224 ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ನೀಡುವ ಹಂತಕ್ಕೆ ಬೆಳೆದಿದ್ದ ಈಶ್ವರಪ್ಪ ಇಂದು ತಮ್ಮ ಸ್ವಂತ ಮಗನಿಗೆ ಟಿಕೆಟ್ ಕೊಡಿಸಲಾಗದಷ್ಟು ಅಸಹಾಯಕತೆಗೆ ಬಂದಿದ್ದಾರೆ. ಹಾವೇರಿಯಿಂದ ಪುತ್ರ ಕಾಂತೇಶನಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಸಿಡಿದೆದ್ದು ಶಿವಮೊಗ್ಗದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸದ್ಯ ಅವರ ಮನವೊಲಿಸುವ ದಾರಿಗಳು ಬಂದ್ ಅಗಿವೆ.

ದೆಹಲಿಗೆ ಬನ್ನಿ ಎಂದು ಹೇಳಿದ್ದ ಕೇಂದ್ರ ಗೃಹಸಚಿವ ಅಮಿತ್ ಷಾ ಅವರು ಭೇಟಿಯಾಗದೆ ವಾಪಸ್ ಕಳುಹಿಸಿದ್ದಾರೆ. ಹೀಗಾಗಿ ಅವರು ಶಸ್ತ್ರಗಳಿಲ್ಲದೆ, ರಣರಂಗದಲ್ಲಿ ಸೈನಿಕರು ಇಲ್ಲದೆ ಅಭಿಮನ್ಯುವಿನ ರೀತಿ ಚಕ್ರವ್ಯೂಹ ಭೇದಿಸುತ್ತೇನೆ ಎಂದು ರಣರಂಗಕ್ಕೆ ನುಗ್ಗಿದ್ದಾರೆ.ಶಿವಮೊಗ್ಗ ಜಿಲ್ಲೆ ರಾಜಕಾರಣದಲ್ಲಿ ಯಡಿಯೂರಪ್ಪ ಜೊತೆಗೆ ಗುರುತಿಸಿಕೊಂಡು ಬಂದ ಅವರು, ಎರಡು ಬಾರಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ಸಂಪುಟದ ಸದಸ್ಯರಾಗಿದ್ದರೂ ಸ್ವ ಇಚ್ಛೆಯಿಂದ ಪದತ್ಯಾಗ ಮಾಡಿ ಪಕ್ಷದ ರಾಜ್ಯಾಧ್ಯಕ್ಷರ ಸ್ಥಾನ ವಹಿಸಿಕೊಂಡಿದ್ದರು.

ಪಕ್ಷ ಸೇವೆ, ಸಂಘ ಪರಿವಾರದ ಮೇಲಿನ ನಿಷ್ಠೆ, ನಾಯಕತ್ವ ಗುಣ, ಹೋರಾಟ ಮನೋಭಾವ, ಬಿರುಸು ನುಡಿ, ವಿವಾದ ಸೃಷ್ಟಿ ಹೀಗೆ ಹಲವಾರು ಕಾರಣಗಳಿದ ಕೆ.ಎಸ್. ಈಶ್ವರಪ್ಪ ರಾಜ್ಯ ರಾಜಕಾರಣದಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳುತ್ತಲೇ ಬಂದವರು.ಜತೆಗಾರರಾಗಿದ್ದ ಯಡಿಯೂರಪ್ಪ ಬಿಜೆಪಿಯಿಂದ ಸಿಡಿದು ಹೊರ ಹೋದಾಗಲೂ ಇವರು ಕಮಲ ಕೈ ಬಿಡಲಿಲ್ಲ. ಬಿಜೆಪಿ ಕಷ್ಟದಲ್ಲಿದ್ದಾಗಲೆಲ್ಲ ಪಕ್ಷದ ನಾಯಕತ್ವವನ್ನು ವಹಿಸಿಕೊಂಡು ಕಾರ್ಯಕರ್ತರನ್ನು ಹುರಿದುಂಬಿಸಿದ್ದರು.

ಮಾತಿನಿಂದಲೇ ಸದಾ ಸುದ್ದಿ:
ಯಡಿಯೂರಪ್ಪ ತಮ್ಮ ರಾಜಕೀಯ ನಡೆಗಳಿಂದಾಗಿ ರಾಜ್ಯದಲ್ಲಿ ಹೆಸರು ಮಾಡುತ್ತಿದ್ದರೆ, ಈಶ್ವರಪ್ಪ ತಮ್ಮ ಹರಿತವಾದ ನಾಲಿಗೆಯನ್ನು ಅಡ್ಡಾದಿಡ್ಡಿಯಾಗಿ ಹರಿಯಬಿಟ್ಟು ಸದಾ ಸುದ್ದಿಯಲ್ಲಿರುತ್ತಿದ್ದರು.ಸಚಿವರಾದಾಗಲೂ ಕೂಡ ತಮ್ಮ ಸ್ಥಾನದ ಘನತೆಯನ್ನು ಮರೆತು ಮಾತನಾಡಿದ್ದು ಹಲವಾರು ಬಾರಿ ವಿವಾದಕ್ಕೆ, ಜನರ ಆಕ್ರೋಶಕ್ಕೆ ಕಾರಣವಾಗಿತ್ತು.

ಕಡಿ, ಬಡಿ, ಹೊಡಿ ಮಾತುಗಳಲ್ಲದೆ, ದ್ವೇಷ ಕಾರುವ ಮಾತುಗಳನ್ನು ಆಡುತ್ತಿದ್ದರಿಂದ ಪಕ್ಷದ ನಾಯಕತ್ವಕ್ಕೂ ಹಲವಾರು ಬಾರಿ ಮುಜುಗರ ಉಂಟುಮಾಡಿದ್ದರು. ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸುತ್ತೇವೆ ಎಂಬಂತಹ ಮಾತುಗಳನ್ನು ಆಡಿಯೂ ಈಶ್ವರಪ್ಪ ಅರಗಿಸಿ ಕೊಳ್ಳಬಲ್ಲವರಾಗಿದ್ದರು.

ರಾಜ್ಯ ಬಿಜೆಪಿಯಲ್ಲಿ ಈಶ್ವರಪ್ಪ ಮೊದಲ ಸಾಲಿನ ಲೀಡರ್ ಎನಿಸಿಕೊಂಡವರು. ಚುನಾವಣಾ ರಾಜಕಾರಣದಲ್ಲಿ ಗೆಲ್ಲಲಿ ಅಥವಾ ಸೋಲಲಿ, ಎಲ್ಲ ಸಂದರ್ಭದಲ್ಲೂ ಈಶ್ವರಪ್ಪ ಅವರಿಗೆ ಪಕ್ಷ ಪ್ರಮುಖ ಸ್ಥಾನಮಾನಗಳನ್ನು ನೀಡಿದೆ. 2013ರಲ್ಲಿ ಸೋತಿದ್ದ ಅವರನ್ನು ಪರಿಷತ್‍ಗೆ ಆಯ್ಕೆ ಮಾಡಲಾಯಿತು.

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲ್ಲಿ:
ಮಂಡ್ಯ ಮೂಲದ ಬಿ.ಎಸ್.ಯಡಿಯೂರಪ್ಪ, ಬಳ್ಳಾರಿ ಮೂಲದ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಸ್ನೇಹಿತರಾಗಿ, ಬಿಜೆಪಿಯಲ್ಲಿ ನಾಯಕರಾಗಿ ಬೆಳೆದಿದ್ದೇ ರೋಚಕ ಕತೆ. ಹೆಚ್ಚು ಕಡಿಮೆ ಇಬ್ಬರ ಕುಟುಂಬದ ಆರ್ಥಿಕ ಸ್ಥಿತಿಯೂ ಒಂದೇ ರೀತಿಯಾಗಿತ್ತು. ಸಂಘ ಪರಿವಾರದ ನಂಟಿನಿಂದಾಗಿ ಇಬ್ಬರಿಗೂ ದಾರಿ ಸ್ಪಷ್ಟವಾಗಿತ್ತು. ಇವರಿಬ್ಬರೂ ಒಂದೇ ಸ್ಕೂಟರ್‍ನಲ್ಲಿ ಸುತ್ತಾಡಿ ಪಕ್ಷ ಸಂಘಟಿಸುತ್ತಿದ್ದರು. ಶಿಕಾರಿಪುರದಲ್ಲಿ ಯಡಿಯೂರಪ್ಪ ರೈತರ ಸಮಸ್ಯೆ, ಶ್ರೀಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ ಬೆಳೆದರೆ, ಇತ್ತ ಶಿವಮೊಗ್ಗದಲ್ಲಿ ಈಶ್ವರಪ್ಪ ಹಿಂದುತ್ವವನ್ನು ಅಸ್ತ್ರವನ್ನಾಗಿ ಬಳಸಿ ರಾಜಕೀಯವಾಗಿ ಬೇರೂರಿದರು.

ಒಂದು ಕಾಲದಲ್ಲಿ ಇಬ್ಬರೂ ಜೊತೆಗೂಡಿ ಶಿವಮೊಗ್ಗದಲ್ಲಿ ವ್ಯಾಪಾರ ನಡೆಸಿದ್ದರು. ರಾಜಕೀಯವಾಗಿ ಮೇಲೇರುತ್ತಿದ್ದಂತೆಯೇ ಇವರಿಬ್ಬರ ನಡುವಿನ ಬಿರುಕು ಅಗಲವಾಗುತ್ತಾ ಬಂದಿತ್ತು. 2008ರ ಲೋಕಸಭಾ ಚುನಾವಣೆಯಲ್ಲಿ ಮಗ ಬಿ.ಎಸ್.ರಾಘವೇಂದ್ರ ಅವರನ್ನು ಕಣಕ್ಕಿಳಿಸಲು ಯಡಿಯೂರಪ್ಪ ಮುಂದಾದಾಗ ಈಶ್ವರಪ್ಪ ಬಹಿರಂಗವಾಗಿಯೇ ವಿರೋಸಿದ್ದರು. ಇವರಿಬ್ಬರ ಸ್ನೇಹ ಹಳಸಿದ್ದು, ಆಗಲೇ ಎಲ್ಲರಿಗೂ ಗೊತ್ತಾಗಿದ್ದು.

ಮುಂದೆ ಹಲವಾರು ಬಾರಿ ಇವರಿಬ್ಬರೂ ಕಚ್ಚಾಡಿಕೊಂಡಿದ್ದಾರೆ. ಮಾತಿನ ಮೂಲಕ ತಿವಿದುಕೊಂಡಿದ್ದಾರೆ. ಯಡಿಯೂರಪ್ಪ ಲಿಂಗಾಯಿತರ ನಾಯಕರಾಗಿ ಗುರುತಿಸಿಕೊಂಡ ಹಾಗೇ ಈಶ್ವರಪ್ಪ ಕುರುಬರ ನಾಯಕರಾಗಿ ಬೆಳೆಯಬೇಕೆಂದು ರಾಯಣ್ಣ ಬ್ರಿಗೇಡ್ ಕಟ್ಟಿದ್ದರು. ಆದರೆ ಪಕ್ಷದ ವಿಷಯಕ್ಕೆ ಬಂದಾಗ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದೂ ಉಂಟು!

ಖಾತೆಗಳ ಸಮರ್ಥ ನಿರ್ವಹಣೆ:
ವಿವಾದಗಳ ಹೊರತಾಗಿಯೂ ಹಲವು ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದವರು ಕೆ.ಎಸ್.ಈಶ್ವರಪ್ಪ. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಮೊದಲ ಬಾರಿಗೆ ಸಚಿವರಾಗಿದ್ದರು. ಜಲಸಂಪನ್ಮೂಲ ಸಚಿವರಾಗಿದ್ದರು. ನೀರಾವರಿ ಸಚಿವರಾಗಿ ಕಳಸಾ-ಬಂಡೂರಿ ಯೋಜನೆ ಸಂಬಂಧ ಈಶ್ವರಪ್ಪ ದಿಟ್ಟ ನಿಲುವು ಕೈಗೊಂಡಿದ್ದರು. ಆನಂತರ 2008-2013ರ ಅವಧಿಯ ಬಿಜೆಪಿ ಸರಕಾರದಲ್ಲಿಇಂಧನ, ಗ್ರಾಮೀಣಾಭಿವೃದ್ಧಿ, ಕಂದಾಯ ಇಲಾಖೆಗಳನ್ನು ನಿರ್ವಹಿಸಿದ್ದರು. ಶೆಟ್ಟರ್ ಸಂಪುಟದಲ್ಲಿ ಈಶ್ವರಪ್ಪ ಡಿಸಿಎಂ ಆಗಿದ್ದರು.

ಶಿವಮೊಗ್ಗದಲ್ಲಿ ನಾನು ಗೆದ್ದೇ ತೀರುತ್ತೇನೆ ಎಂದು ಈಶ್ವರಪ್ಪ ಧುಮುಕಿದ್ದಾರೆ. ಅವರ ಎದುರಿರುವುದು ಸಾಮಾನ್ಯ ಆಸಾಮಿಯಲ್ಲ. ಎಲ್ಲ ರಾಜಕೀಯ ಪಟ್ಟುಗಳನ್ನು ಬಲ್ಲ ಮುತ್ಸದ್ದಿ ಬಿಎಸ್‍ವೈ. ಅಂತಿಮ ನಗು ಯಾರದು ಎಂಬುದನ್ನು ಜು.4ರ ಫಲಿತಾಂಶವೇ ನಿರ್ಧರಿಸಲಿದೆ.

RELATED ARTICLES

Latest News