ಬೆಂಗಳೂರು, ಅ.24- ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನಿನ್ನೆ ನಡೆದ 145ನೇ ಸಿಡಬ್ಲ್ಯುಆರ್ಸಿ ಮತ್ತು 60ನೇ ಸಿಡಬ್ಲ್ಯುಎಂಎ ಸಭೆಯಲ್ಲಿ ಮತ್ತೊಮ್ಮೆ ಕರ್ನಾಟಕದ ವಾದಕ್ಕೆ ಮನ್ನಣೆ ಸಿಕ್ಕಿದೆ. ತಮಿಳುನಾಡು 13.829 ಟಿಎಂಸಿ ಬಾಕಿ ಸೇರಿ ಮುಂದಿನ 15 ದಿನಗಳಿಗೆ 18.402 ಟಿಎಂಸಿ ಅಡಿ, ಅಂದರೆ ದಿನಕ್ಕೆ 14,236 ಕ್ಯೂಸೆಕ್ ನೀರು ಬಿಡಬೇಕು ಎಂದು ಒತ್ತಾಯಿಸಿತ್ತು. ಆದರೆ, ಸಿಡಬ್ಲ್ಯುಆರ್ಸಿ ಕೇವಲ ದಿನಕ್ಕೆ 3,000 ಕ್ಯೂಸೆಕ್ (3.88 ಟಿಎಂಸಿ) ನೀರನ್ನು ಇಂದು ಬೆಳಿಗ್ಗೆ 8 ಗಂಟೆಯಿಂದ ಮುಂದಿನ 15 ದಿನಗಳ ಕಾಲ ಬಿಳಿಗುಂಡ್ಲು ಬಳಿ ಹರಿಸುವಂತೆ ಆದೇಶಿಸಿದೆ. ಸಿಡಬ್ಲ್ಯುಎಂಎ ಈ ಆದೇಶವನ್ನು ಎತ್ತಿಹಿಡಿದಿದೆ.
ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು, ಕಾವೇರಿ ಜಲಾನಯನ ಭಾಗದ ನಮ್ಮ ನಾಲ್ಕು ಜಲಾಶಯಗಳಿಗೆ 30 ವರ್ಷಗಳ ಸರಾಸರಿ 273.865 ಟಿಎಂಸಿ ಒಳಹರಿವು ಬರಬೇಕಿತ್ತು. ಆದರೆ, ಈ ವರ್ಷ ಬಂದಿರುವುದು ಕೇವಲ 122.293 ಟಿಎಂಸಿ. ಅಂದರೆ ಶೇ.55.35ರಷ್ಟು ಕೊರತೆಯಿದೆ.
ಆದೇಶಕ್ಕಿಂತ ಹೆಚ್ಚು ನೀರು ಬಿಟ್ಟಿದ್ದೇವೆ:
ಜುಲೈ 29ರಿಂದ ಅಕ್ಟೋಬರ್ 22ರವರೆಗೆ 45.231 ಟಿಎಂಸಿ ನೀರು ಬಿಡಲು ಸೂಚಿಸಿದ್ದರೆ, ಕರ್ನಾಟಕ 47.092 ಟಿಎಂಸಿ ನೀರು ಬಿಟ್ಟಿದೆ. ಅಂದರೆ, 1.861 ಟಿಎಂಸಿ ಹೆಚ್ಚುವರಿ ನೀರು ಹರಿಸಲಾಗಿದೆ. ಹೀಗಾಗಿ, ಬಾಕಿ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕ ಸ್ಪಷ್ಟಪಡಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಜಲಾಶಯಗಳಲ್ಲಿ ನೀರೇ ಇಲ್ಲ:
ಅಕ್ಟೋಬರ್ 22ರಂದು ನಮ್ಮ ಜಲಾಶಯಗಳಲ್ಲಿ ಕೇವಲ 46.510 ಟಿಎಂಸಿ ನೀರಿತ್ತು. ಒಟ್ಟು ಲಭ್ಯತೆ 55 ಟಿಎಂಸಿ ಇದ್ದರೆ, ಕುಡಿಯುವ ನೀರು, ಆವಿಯಾಗುವಿಕೆ ಮತ್ತು ಪರಿಸರ ಹರಿವಿಗೆ 43 ಟಿಎಂಸಿ ಬೇಕು. ಉಳಿಯುವುದು ಕೇವಲ 12 ಟಿಎಂಸಿ ಮಾತ್ರ.
ರಾಜ್ಯದ 240 ತಾಲ್ಲೂಕುಗಳಲ್ಲಿ 226 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಅದರಲ್ಲಿ ಕಾವೇರಿ ಜಲಾನಯನ ಪ್ರದೇಶದ 56 ತಾಲ್ಲೂಕುಗಳ ಪೈಕಿ 55 ತಾಲ್ಲೂಕುಗಳು ಬರಪೀಡಿತವಾಗಿವೆ. ಒಂದು ಬೆಳೆಯನ್ನೂ ಬೆಳೆಯಲು ಆಗದೆ ಸಣ್ಣ ಮತ್ತು ಅತಿಸಣ್ಣ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಕರ್ನಾಟಕ ವಾದಿಸಿದೆ.
ತಮಿಳುನಾಡಿನಲ್ಲಿ ಮಳೆಯಾಗಿದೆ:
ತಮಿಳುನಾಡಿನ ಮೆಟ್ಟೂರು, ಭವಾನಿ ಮತ್ತು ಅಮರಾವತಿ ಜಲಾಶಯಗಳಲ್ಲಿ 29.377 ಟಿಎಂಸಿ ನೀರಿದೆ. ಅಕ್ಟೋಬರ್ 1ರಿಂದ 21ರವರೆಗೆ ಅಲ್ಲಿನ 13 ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ.112ರಷ್ಟು ಹೆಚ್ಚು ಮಳೆಯಾಗಿದೆ. ಈಶಾನ್ಯ ಮುಂಗಾರು ಕೂಡ ತಮಿಳುನಾಡಿಗೆ ಅನುಕೂಲವಾಗಲಿದೆ ಎಂದು ಕರ್ನಾಟಕ ದಾಖಲೆಗಳನ್ನು ಸಲ್ಲಿಸಿದೆ.
ತಮಿಳುನಾಡಿನ ವಾದ:
ಮೆಟ್ಟೂರು ಜಲಾಶಯದಲ್ಲಿ 20.887 ಟಿಎಂಸಿ ಮಾತ್ರ ನೀರಿದ್ದು, ಡೆಲ್ಟಾ ಭಾಗದ ರೈತರು ಸಂಕಷ್ಟದಲ್ಲಿದ್ದಾರೆ. ಪ್ರೊ-ರಾಟಾ ಲೆಕ್ಕದಲ್ಲಿ 13.829 ಟಿಎಂಸಿ ನೀರು ಬಾಕಿಯಿದ್ದು, ಅದನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ಒತ್ತಾಯಿಸಿತ್ತು. ಎರಡೂ ರಾಜ್ಯಗಳ ವಾದಗಳನ್ನು ಆಲಿಸಿದ ಸಿಡಬ್ಲ್ಯುಆರ್ಸಿ, ಕಳೆದ ಬಾರಿಯಂತೆ ಈ ಬಾರಿಯೂ ಕೇವಲ 3,000 ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿದೆ ಎಂದು ತಿಳಿಸಲಾಗಿದೆ.
