ಭೋಪಾಲ್, ಅ. 28: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಗುಂಡೇಟಿನಿಂದ 19 ತಿಂಗಳ ಗಂಡು ಚೀತಾ ಸಾವನ್ನಪ್ಪಿದ ಘಟನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.ದೇಶದ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಚೀತಾ ಯೋಜನೆಗೆ ಈ ಘಟನೆ ಭಾರಿ ಆಘಾತ ತಂದಿದ್ದು, ಘಟನೆಯ ಸಮಗ್ರ ತನಿಖೆಗಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಉನ್ನತ ಮಟ್ಟದ ಜಂಟಿ ತನಿಖಾ ತಂಡವನ್ನು ನಿಯೋಜಿಸಿದೆ. ಈ ಕೇಂದ್ರ ತಂಡದಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅರಣ್ಯ ಮಹಾನಿರ್ದೇಶಕರು, ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋದ ಹೆಚ್ಚುವರಿ ನಿರ್ದೇಶಕರು ಮತ್ತು ಪ್ರಾದೇಶಿಕ ಉಪ ನಿರ್ದೇಶಕರು ಇರಲಿದ್ದಾರೆ.
19 ತಿಂಗಳ ಗಂಡು ಚೀತಾ, ಅಕ್ಟೋಬರ್ 25 ರಂದು ಕುನೋ ಅಭಯಾರಣ್ಯದ ಸಂರಕ್ಷಿತ ಗಡಿಯಿಂದ ಹೊರಗೆ ಮೊರೇನಾದ ಪ್ರಾದೇಶಿಕ ಅರಣ್ಯ ವ್ಯಾಪ್ತಿಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಶಿಯೋಪುರ್ ಅರಣ್ಯ ವಿಭಾಗದ ಅಧಿಕಾರಿಗಳು ಚೀತಾವನ್ನು ತಕ್ಷಣ ರಕ್ಷಿಸಿ ಜಬಲ್ಪುರದ ನಾನಾಜಿ ದೇಶ್ಮುಖ್ ಪಶುವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ರವಾನಿಸಿದ್ದರು.
ಅಲ್ಲಿ ನಡೆಸಲಾದ ತುರ್ತು ಶಸ್ತ್ರಚಿಕಿತ್ಸೆಯ ವೇಳೆ ಚೀತಾದ ದೇಹದಿಂದ ಬರೋಬ್ಬರಿ 5 ಗುಂಡುಗಳನ್ನು ಹೊರತೆಗೆಯಲಾಯಿತು. ಗುಂಡೇಟಿನಿಂದಾಗಿ ಚೀತಾದ ಆಂತರಿಕ ಅಂಗಾಂಗಗಳಿಗೆ ತೀವ್ರ ಹಾನಿಯಾಗಿದ್ದರಿಂದ, ತೀವ್ರ ನಿಗಾ ಘಟಕದಲ್ಲಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 27 ರಂದು ಕೊನೆಯುಸಿರೆಳೆಯಿತು.
ಇದು ವನ್ಯಜೀವಿ ಬೇಟೆಗಾರರ ಕೃತ್ಯವೇ ಅಥವಾ ಸ್ಥಳೀಯ ಗ್ರಾಮಸ್ಥರ ಬೆಳೆ ಕಾಯುವ ಕೃತ್ಯವೇ ಎಂಬ ಬಗ್ಗೆ ಅನುಮಾನ ಮೂಡಿದೆ. ಮಧ್ಯಪ್ರದೇಶ ಸರ್ಕಾರವು ಅರಣ್ಯ ಇಲಾಖೆ ಹಾಗೂ ಪೊಲೀಸರನ್ನೊಳಗೊಂಡ ವಿಶೇಷ ಕಾರ್ಯಪಡೆ (ಎಸ್ಐಟಿ) ರಚಿಸಿದ್ದು, ಕೇಂದ್ರ ತನಿಖಾ ತಂಡವು ರಾಜ್ಯ ತಂಡದೊಂದಿಗೆ ಜಂಟಿಯಾಗಿ ಅರಣ್ಯ ಗಡಿ ಪ್ರದೇಶದಲ್ಲಿ ಕೂಂಬಿಂಗ್ ನಡೆಸಲಿದೆ.
