ಮ್ಯಾಡ್ರಿಡ್, ಅ. 28- ಸ್ಪೇನ್ನ ಮಧ್ಯಭಾಗದ ಟೊಲೆಡೊ ಪ್ರಾಂತ್ಯದಲ್ಲಿ ಬುಧವಾರ ಎರಡು ಅತಿ ವೇಗದ ರೈಲುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 46 ಮಂದಿ ಮೃತಪಟ್ಟಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಮ್ಯಾಡ್ರಿಡ್ನಿಂದ ಸಿಯುಡಾಡ್ ರಿಯಲ್ ಮತ್ತು ಆಂಡಲೂಸಿಯಾ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.ಸ್ಪೇನ್ನ ರೈಲ್ವೆ ಮೂಲಸೌಕರ್ಯ ನಿರ್ವಹಣಾ ಸಂಸ್ಥೆ ಎಡಿಐಎಫ್ (ADIF) ಅಪಘಾತವನ್ನು ದೃಢಪಡಿಸಿದೆ. ಆದರೆ ಅಪಘಾತಕ್ಕೆ ನಿಖರವಾದ ಕಾರಣವೇನು ಎಂಬ ಬಗ್ಗೆ ತಕ್ಷಣಕ್ಕೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಸ್ಪೇನ್ನ ಸಾರ್ವಜನಿಕ ಪ್ರಸಾರ ಸಂಸ್ಥೆ ಟಿವಿಇ (TVE) ವರದಿ ಪ್ರಕಾರ, ಎರಡೂ ರೈಲುಗಳು ಒಂದೇ ದಿಕ್ಕಿನಲ್ಲಿ ಸಂಚರಿಸುತ್ತಿದ್ದವು. ಈ ವೇಳೆ ಒಂದು ರೈಲು ಮತ್ತೊಂದು ರೈಲಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡು ಬೋಗಿಗಳು ಹಳಿ ತಪ್ಪಿವೆ ಎಂದು ವರದಿಯಾಗಿದೆ.
ಮುಂದಿನ ತಿಂಗಳು ಮರುಚುನಾವಣೆಯನ್ನು ಎದುರಿಸಲಿರುವ ಸ್ಪೇನ್ ಪ್ರಧಾನಿ ಪೆಡ್ರೊ ಸಾಂಚೆಜ್ ಅವರು ಈ ದುರಂತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ಟೊಲೆಡೊದಲ್ಲಿ ಸಂಭವಿಸಿದ ಗಂಭೀರ ರೈಲು ಅಪಘಾತದಿಂದ ಆಘಾತಕ್ಕೊಳಗಾಗಿದ್ದೇನೆ. ಸಾರಿಗೆ ಸಚಿವರು ಮತ್ತು ಕ್ಯಾಸ್ಟಿಲಾ-ಲಾ ಮಂಚಾ ಪ್ರಾಂತ್ಯದ ಅಧ್ಯಕ್ಷರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.
ಅಪಘಾತದಲ್ಲಿ ಸಿಲುಕಿದವರಿಗೆ ನೆರವು ನೀಡಲು ಹಾಗೂ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಸೇವೆಗಳ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಂಬಂಧಪಟ್ಟ ಎಲ್ಲ ಆಡಳಿತ ಸಂಸ್ಥೆಗಳ ಸಮನ್ವಯದೊಂದಿಗೆ ಪರಿಹಾರ ಕಾರ್ಯಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.
ಅಪಘಾತದ ಭೀಕರತೆಯನ್ನು ಬಿಂಬಿಸುವ ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಪಘಾತದ ಸಮೀಪದ ಉರ್ಡಾ ಪಟ್ಟಣದ ಮೇಯರ್ ಮ್ಯಾನುಯೆಲ್ ಗಲಾನ್ ಮಾತನಾಡಿ, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಅಪಘಾತದಿಂದ ತೊಂದರೆಗೊಳಗಾದವರಿಗೆ ಆಶ್ರಯ ಕಲ್ಪಿಸಲು ಕ್ರೀಡಾ ಪೆವಿಲಿಯನ್ ಸಿದ್ಧಪಡಿಸುವಂತೆ ನಾಗರಿಕ ರಕ್ಷಣಾ ಅಧಿಕಾರಿಗಳು ಸ್ಥಳೀಯ ಆಡಳಿತಕ್ಕೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.
ನೆರೆಯ ಲೋಸ್ ಯೆಬೆನೆಸ್ ಗ್ರಾಮದ ಮೇಯರ್ ಜೀಸಸ್ ಪೆರೆಜ್ ಅವರು ಘಟನೆಯ ಗಂಭೀರತೆಯನ್ನು ಉಲ್ಲೇಖಿಸಿದ್ದಾರೆ. ಕ್ಯಾಸ್ಟಿಲಾ-ಲಾ ಮಂಚಾ ಪ್ರಾಂತ್ಯದ ಅಧ್ಯಕ್ಷ ಎಮಿಲಿಯಾನೊ ಗಾರ್ಸಿಯಾ-ಪೇಜ್ ಅವರು ಅಪಘಾತದ ಸ್ಥಳಕ್ಕೆ ತೆರಳುತ್ತಿರುವುದಾಗಿ ಎಕ್ಸ್ನಲ್ಲಿ ತಿಳಿಸಿದ್ದಾರೆ.ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಕೂಡ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ಇಟಲಿ ಸರ್ಕಾರವು ಸ್ಪೇನ್ ಮತ್ತು ಅಲ್ಲಿನ ಜನರೊಂದಿಗೆ ನಿಂತಿದೆ ಎಂದು ಅವರು ಹೇಳಿದ್ದಾರೆ.
ಹಿಂದೆಯೂ ಸಂಭವಿಸಿತ್ತು ಭೀಕರ ದುರಂತ
ಸ್ಪೇನ್ನಲ್ಲಿ ಜನವರಿಯಲ್ಲಿ ಸಂಭವಿಸಿದ್ದ ಮತ್ತೊಂದು ಭೀಕರ ರೈಲು ಅಪಘಾತದ ಕೆಲವೇ ತಿಂಗಳ ಬಳಿಕ ಈ ದುರಂತ ನಡೆದಿದೆ. ದಕ್ಷಿಣ ಸ್ಪೇನ್ನಲ್ಲಿ ರೈಲೊಂದು ಹಳಿ ತಪ್ಪಿ ಎದುರಿನಿಂದ ಬರುತ್ತಿದ್ದ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 45 ಮಂದಿ ಮೃತಪಟ್ಟಿದ್ದರು.
2013ರಲ್ಲಿ ಸಂಭವಿಸಿದ್ದ ರೈಲು ಅಪಘಾತದಲ್ಲಿ 80 ಮಂದಿ ಮೃತಪಟ್ಟ ಬಳಿಕ, ಜನವರಿಯ ದುರಂತವು ಸ್ಪೇನ್ನ ಅತ್ಯಂತ ಭೀಕರ ರೈಲು ಅಪಘಾತಗಳಲ್ಲಿ ಒಂದಾಗಿತ್ತು. ಇದೀಗ ಮತ್ತೊಮ್ಮೆ ಸಂಭವಿಸಿರುವ ಅಪಘಾತವು ದೇಶದ ವಿಶಾಲ ಅತಿ ವೇಗದ ರೈಲು ಜಾಲದ ಸುರಕ್ಷತೆ ಕುರಿತು ಕಳವಳವನ್ನು ಹೆಚ್ಚಿಸಿದೆ.
