ಹಾಸನ,ಅ.30- ವರ್ಷಕ್ಕೊಮೆ ಭಕ್ತರಿಗೆ ದರ್ಶನ ನೀಡುವ ಶಕ್ತಿದೇವತೆ ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನದ ಮೊದಲ ದಿನವಾದ ಇಂದು ಭಕ್ತರ ದಂಡೇ ಹರಿದುಬಂದಿತ್ತು.ಮುಂಜಾನೆ 2 ಗಂಟೆಯಿಂದಲೇ ದೇವಿಯ ದರ್ಶನಕ್ಕೆ ಸಹಸ್ರಾರು ಭಕ್ತರು ಚಳಿಯನ್ನು ಲೆಕ್ಕಿಸದೆ ಸುಮಾರು 2 ಕಿ.ಮೀ.ಗಟ್ಟಲೆ ಸಾಲುಗಟ್ಟಿ ನಿಂತು ದೇವಿಯನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದ ದೃಶ್ಯ ಕಂಡುಬಂದಿತು.
ನಿನ್ನೆ 12.28ಕ್ಕೆ ಸರಿಯಾಗಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಾಲಯದ ಗರ್ಭಗುಡಿ ಬಾಗಿಲನ್ನು ತೆರೆಯಲಾಗಿದ್ದು, ಸಾರ್ವಜನಿಕ ದರ್ಶನಕ್ಕೆ ಅವಕಾಶವಿರಲಿಲ್ಲ. ಇಂದಿನಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ರಾಜ್ಯದ ವಿವಿಧ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ತಂಡೋಪತಂಡವಾಗಿ ಹಾಸನದತ್ತ ಬರುತ್ತಿದ್ದಾರೆ.
1,000 ರೂ. ವಿಶೇಷ ದರ್ಶನದ ಸಾಲು ಸಂಪೂರ್ಣವಾಗಿ ಭರ್ತಿಯಾಗಿದ್ದು, ಬೆಳಗ್ಗೆ 8 ರಿಂದ 10 ಗಂಟೆವರೆಗೂ ಗೋಲ್ಡನ್ ಪಾಸ್ ಪಡೆದವರಿಗೆ ಅವಕಾಶ ನೀಡಲಾಗಿತ್ತು. ಬೆಳಿಗ್ಗೆ 10.30ರಿಂದ 12.30ರವರೆಗೆ ಪ್ರೋಟೋಕಾಲ್ನಲ್ಲಿ ಬರುವ ವಿಐಪಿಗಳಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಎಸ್ಪಿ ಶುಭನ್ವಿತ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, 1,000 ರೂ. ಹಾಗೂ 300 ರೂ.ಗಳ ವಿಶೇಷ ದರ್ಶನದ ಸಾಲುಗಳಿಗೆ ಭೇಟಿ ನೀಡಿ ಭಕ್ತರಿಗೆ ತಾಳೆಯಿಂದ ದೇವಿಯ ದರ್ಶನ ಮಾಡಿ, ಎಲ್ಲರಿಗೂ ಅವಕಾಶವಿದೆ, ಗೊಂದಲ ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರಲ್ಲದೆ, ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಪೊಲೀಸರಿಗೂ ಸಹ ಕೆಲವು ಸೂಚನೆಗಳನ್ನು ನೀಡಿದರು.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ರಾಮನಗರ, ಚಿತ್ರದುರ್ಗ ಮಾತ್ರವಷ್ಟೇ ಅಲ್ಲದೆ ಉತ್ತರ ಕರ್ನಾಟಕ ಭಾಗದಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಜಿಲ್ಲಾಡಳಿತ ಯಾವುದೇ ತೊಂದರೆಯಾಗದಂತೆ ಸುಗಮ ದರ್ಶನಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
60 ರೂ.ಗೆ ಲಾಡು ನೀಡಿ :
ಧರ್ಮದರ್ಶನದಲ್ಲಿ ಆಗಮಿಸುವ ಭಕ್ತರಿಗೆ 60 ರೂ.ಗೆ ಲಾಡು ಪ್ರಸಾದ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರು ಸೂಚಿಸಿದ್ದಾರೆ.ಲಾಡು ಪ್ರಸಾದದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವರು, ಧರ್ಮ ದರ್ಶನದಲ್ಲಿ ಬರುವ ಭಕ್ತರು ಬಡವರಿರುತ್ತಾರೆ. ಅವರಿಗೆ 100 ರೂ. ಹೊರೆಯಾಗುತ್ತದೆ. ಹಾಗಾಗಿ ಎಲ್ಲರಿಗೂ ಸಮಾನವಾಗಿ 60 ರೂ.ಗೆ ಲಾಡು ವಿತರಿಸಬೇಕು ಎಂದು ನಿರ್ದೇಶನ ನೀಡಿದರು.
