ಬೆಂಗಳೂರು,ಅ.30- ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಬೆನ್ನಲ್ಲೇ ತರಕಾರಿ ಬೆಲೆಯೂ ಸಹ ಸದ್ದಿಲ್ಲದೆ ಏರಿಕೆಯಾಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ.ದಿನಸಿ ಪದಾರ್ಥಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರು ನ.1 ರಿಂದ ಹಾಲಿನ ಬೆಲೆ ಹೆಚ್ಚಾಗಲಿರುವ ಬೆನ್ನಲ್ಲೇ ತರಕಾರಿಗಳ ಬೆಲೆಯೂ ಸಹ ಏರುತ್ತಿದ್ದು, ಶ್ರೀಸಾಮಾನ್ಯರ ಜೀವನ ಭಾರೀ ಸಂಕಷ್ಟಕ್ಕೆ ಸಿಲುಕಲಿದೆ.
ರಾಜ್ಯಾದ್ಯಂತ ದೀಪಾವಳಿಗೆ ಸಿದ್ಧತೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಜನರನ್ನು ಹೈರಾಣಾಗಿಸುತ್ತಿದೆ. ರಾಜ್ಯದಲ್ಲಿ ಮಳೆ ಕೈಕೊಟ್ಟ ಪರಿಣಾಮ ದಿನಸಿ ವಸ್ತುಗಳು ಸೇರಿದಂತೆ ತರಕಾರಿ ಬೆಳೆಗಳ ಮೇಲೆ ಭಾರೀ ಪರಿಣಾಮ ಬೀರಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ.
ಎಲ್ಲಾ ತರಕಾರಿಗಳ ಬೆಲೆ ದುಪ್ಪಟ್ಟಾಗಿದ್ದು, ಮತ್ತಷ್ಟು ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಯಿದ್ದು, ಮುಂದಿನ ಜೀವನ ಹೇಗೆ ಎಂಬ ಆತಂಕ ಹೆಚ್ಚಿಸಿದೆ. ಬೀನ್ಸ್ ಶತಕ ಭಾರಿಸಿದ್ದು, ಈರುಳ್ಳಿಯೂ ಕೂಡಾ ಸೆಂಚುರಿ ಆಜುಬಾಜಿನಲ್ಲಿದೆ. ಸೊಪ್ಪುಗಳ ಬೆಲೆಯೂ ಸಹ ಡಬ್ಬಲ್ ಆಗಿದ್ದು, ಕೊತ್ತಂಬರಿ ಕೆಜಿಗೆ 110 ರಿಂದ 120 ರೂ. ದಾಟಿದೆ.
ತರಕಾರಿಗಳ ಬೆಲೆ :
ದಪ್ಪ ಈರುಳ್ಳಿ – ಕೆಜಿಗೆ 60 ರಿಂದ 70 ರೂ., ಹುರಳಿಕಾಯಿ – 100 ರಿಂದ 110 ರೂ., ನುಗ್ಗೆಕಾಯಿ – 140ರಿಂದ 150 ರೂ., ಕ್ಯಾರೆಟ್ – 60 ರಿಂದ 70 ರೂ., ಹಸಿನಮೆಣಸಿನಕಾಯಿ – 90 ರಿಂದ 100 ರೂ., ಕ್ಯಾಪ್ಸಿಕಂ – 90 ರಿಂದ 100 ರೂ., ಆಲೂಗಡ್ಡೆ – 50 ರಿಂದ 60 ರೂ., ಬೆಂಡೆಕಾಯಿ- 50 ರಿಂದ 60 ರೂ., ಬದನೆಕಾಯಿ – 50 ರೂ., ಎಲೆಕೋಸು – 60 ರೂ., ನವಿಲುಕೋಸು – 60 ರೂ., ಟೊಮ್ಯಾಟೊ – 50 ರೂ. ನಂತೆ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಸೊಪ್ಪುಗಳ ಬೆಲೆಯಂತೂ ಭಾರೀ ಏರಿಕೆಯಾಗಿದ್ದು, ಕೆಜಿ ಲೆಕ್ಕದಲ್ಲಿ ಕೊತ್ತಂಬರಿ 110 ರಿಂದ 120 ರೂ., ಸಬ್ಬಕ್ಕಿ 150 ರೂ., ಪುದೀನ 100 ರೂ., ಪಾಲಾಕ್ 100 ರೂ., ದಂಟು 80 ರೂ., ಮೆಂತ್ಯೆ 150 ರೂ., ಕರಿಬೇವು 100 ರೂ.ಗೆ ಏರಿಕೆಯಾಗಿದ್ದು, ಬೆಲೆ ನೋಡಿ ಗ್ರಾಹಕರು ಖರೀದಿಗೆ ಹಿಂದುಮುಂದು ನೋಡುವಂತಾಗಿದೆ.
ಒಂದು ಕೆಜಿ ತೆಗೆದುಕೊಳ್ಳುತ್ತಿದ್ದವರು ಅರ್ಧ ಕೆಜಿ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯಗಳು ತರಕಾರಿ ಅಂಗಡಿಗಳಲ್ಲಿ ಕಂಡುಬಂದವು. ದಿನದಿಂದ ದಿನಕ್ಕೆ ಬಿಸಲು ಏರಿಕೆಯಾಗುತ್ತಿದ್ದು, ಜೊತೆಗೆ ಮಳೆಯ ಕೊರತೆಯಿಂದ ಬೋರ್ವೆಲ್ಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವುದರಿಂದ ಉತ್ಪಾದನೆ ಕುಂಠಿತವಾಗಿ ಬೆಲೆ ಏರಿಕೆಗೆ ಕಾರಣವಾಗಿದೆ. ದೀಪಾವಳಿ ವೇಳೆಗೆ ಮಳೆ ಬಂದರೆ ಸ್ವಲ್ಪ ಸಮಸ್ಯೆ ತಗ್ಗಬಹುದು. ಇಲ್ಲವಾದರೆ ಎಲ್ಲಾ ವಸ್ತುಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಕೊಬ್ಬರಿ ವ್ಯಾಪಾರಿ ರವೀಶ್ ಎಂಬುವವರು ತಿಳಿಸಿದ್ದಾರೆ.
