ಟೆಲ್ ಅವೀವ್,ಅ.30- ಇಸ್ರೇಲ್ ಸಂಸತ್ ಚುನಾವಣೆಯ ಶೇ.100ರಷ್ಟು ಮತ ಎಣಿಕೆ ಪೂರ್ಣಗೊಂಡಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಅಗತ್ಯವಿರುವ ಬಹುಮತ ದೊರೆತಿಲ್ಲ. 120 ಸದಸ್ಯ ಬಲದ ನೆಸ್ಸೆಟ್ನಲ್ಲಿ ಬಹುಮತಕ್ಕೆ 61 ಸ್ಥಾನಗಳ ಅಗತ್ಯವಿದ್ದು, ನೆತನ್ಯಾಹು ಬಣ 53 ಸ್ಥಾನಗಳನ್ನು ಮಾತ್ರ ಪಡೆದುಕೊಂಡಿದೆ.
ನೆತನ್ಯಾಹು ಅವರ ಲಿಕುಡ್ ಪಕ್ಷ 27 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮಿದೆ. ವಿರೋಧ ಪಕ್ಷಗಳ ಬಣ 48 ಸ್ಥಾನಗಳನ್ನು ಹಾಗೂ ಅರಬ್ ಪಕ್ಷಗಳು ಒಟ್ಟು 19 ಸ್ಥಾನಗಳನ್ನು ಗಳಿಸಿವೆ. ಹೀಗಾಗಿ ಯಾವುದೇ ಬಣಕ್ಕೂ ಸ್ಪಷ್ಟ ಬಹುಮತ ಸಿಗದಿರುವುದರಿಂದ ಸರ್ಕಾರ ರಚನೆಗೆ ಮೈತ್ರಿ ಮಾತುಕತೆ ಅನಿವಾರ್ಯವಾಗಿದೆ.
ಸೈನಿಕರು, ಕೈದಿಗಳು, ವಿದೇಶದಲ್ಲಿರುವ ರಾಜತಾಂತ್ರಿಕರು ಹಾಗೂ ಆಸ್ಪತ್ರೆಯಲ್ಲಿರುವ ಮತದಾರರ ವಿಶೇಷ ಮತಪತ್ರಗಳ ಎಣಿಕೆಯ ಬಳಿಕ ಅಂತಿಮ ಸ್ಥಾನಗಳ ಹಂಚಿಕೆ ದೃಢಪಟ್ಟಿದೆ. ಆದರೂ ಅಧಿಕೃತ ಫಲಿತಾಂಶವನ್ನು ಚುನಾವಣಾ ಸಮಿತಿ ಇನ್ನಷ್ಟೇ ಪ್ರಕಟಿಸಬೇಕಿದೆ.
ಇನ್ನೊಂದೆಡೆ, ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪ ಹಾಗೂ ಮತ ಖರೀದಿ ನಡೆದಿದೆ ಎಂಬ ಆರೋಪಗಳು ವಿವಾದಕ್ಕೆ ಕಾರಣವಾಗಿವೆ. ಅರಬ್ ಮತದಾರರ ಮೇಲೆ ಕತಾರ್ ಮತ್ತು ಟರ್ಕಿಯಿಂದ ಅಕ್ರಮ ಪ್ರಭಾವ ಬೀರಲಾಗಿದೆ ಎಂಬ ಆರೋಪಗಳ ಕುರಿತು ಇಸ್ರೇಲ್ನ ಭದ್ರತಾ ಸಂಸ್ಥೆ ಶಿನ್ ಬೆಟ್ ತನಿಖೆ ನಡೆಸುತ್ತಿದೆ. ಆದರೆ ಈ ಆರೋಪಗಳು ಇನ್ನೂ ಸಾಬೀತಾಗಿಲ್ಲ. ಕತಾರ್ ಕೂಡ ಹಸ್ತಕ್ಷೇಪದ ಆರೋಪವನ್ನು ನಿರಾಕರಿಸಿದೆ.
ಮುಂದೇನು?
ಚುನಾವಣಾ ಫಲಿತಾಂಶ ಅಧಿಕೃತವಾಗಿ ಪ್ರಕಟವಾದ ಬಳಿಕ ಸರ್ಕಾರ ರಚನೆಗೆ ಅಗತ್ಯವಾದ ಪ್ರಕ್ರಿಯೆಯನ್ನು ಇಸ್ರೇಲ್ ಅಧ್ಯಕ್ಷರು ಆರಂಭಿಸಲಿದ್ದಾರೆ. ನೆತನ್ಯಾಹು ಬಣವಾಗಲಿ ಅಥವಾ ವಿರೋಧ ಪಕ್ಷಗಳಾಗಲಿ 61 ಸ್ಥಾನಗಳ ಬೆಂಬಲವನ್ನು ಪಡೆಯಬೇಕಿದೆ. ಅರಬ್ ಪಕ್ಷಗಳ ಬೆಂಬಲವೂ ಸರ್ಕಾರ ರಚನೆಯಲ್ಲಿ ನಿರ್ಣಾಯಕವಾಗುವ ಸಾಧ್ಯತೆಯಿದೆ. ಒಂದು ವೇಳೆ ಯಾವುದೇ ಬಣಕ್ಕೂ ಬಹುಮತ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಇಸ್ರೇಲ್ ಮತ್ತೊಂದು ಚುನಾವಣೆಯನ್ನು ಎದುರಿಸಬೇಕಾಗಬಹುದು.
