ಕೋಲ್ಕತ್ತಾ / ಗೌಹಾಟಿ, ಅ.30- ಭೂತಾನ್ನ ಗಾಸಾ ಜಿಲ್ಲೆಯ ವಕಿಲಾ ಪರ್ವತದ ಕೆಳಗಿರುವ ಶಿಂತಾಫು (ಶಿಂತಾಫು ತ್ಶೊ) ಹಿಮನದಿ ಸರೋವರದಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಹಠಾತ್ ಪ್ರವಾಹ ಉಂಟಾಗಿದೆ. ಈ ಘಟನೆಯಿಂದಾಗಿ ಭಾರತದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಗಡಿ ಭಾಗಗಳಲ್ಲಿ ತೀವ್ರ ಪ್ರವಾಹದ ಭೀತಿ ಎದುರಾಗಿದೆ.
ಮೋ ಚು ನದಿ ಜಲಾನಯನ ಪ್ರದೇಶದ ಮೇಲ್ಭಾಗದಲ್ಲಿರುವ ಅಪಾಯಕಾರಿ ಶಿಂತಾಫು ಸರೋವರ ಸ್ಫೋಟಗೊಂಡಿದೆ. ಪರಿಣಾಮವಾಗಿ ಪುನಾಖಾದಲ್ಲಿರುವ ಸೌರಶಕ್ತಿ ಚಾಲಿತ ನೀರಾವರಿ ಯೋಜನೆ ಭಾಗಶಃ ಹಾನಿಗೊಳಗಾಗಿದ್ದು, ಕಾರ್ಯಾಚರಣೆ ಸ್ಥಗಿತಗೊಂಡಿದೆ. ಪುನಾಖಾ-ಗಾಸಾ ಹೆದ್ದಾರಿಯ ಒಂದು ಭಾಗವು ಅವಶೇಷಗಳಿಂದ ಮುಚ್ಚಿಹೋಗಿದೆ. ದೇಶದಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂತಾನ್ನಿಂದ ಹರಿದುಬರುವ ಪುನತ್ಸಂಗ್ಚು ನದಿಯು ಭಾರತವನ್ನು ಪ್ರವೇಶಿಸುತ್ತಿದ್ದಂತೆ ಸಂಕೋಶ್ ನದಿ ಎಂದು ಕರೆಯಲ್ಪಡುತ್ತದೆ. ಈ ನದಿಯಲ್ಲಿ ನೀರಿನ ಮಟ್ಟ ಹಠಾತ್ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಕೇಂದ್ರ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ತುರ್ತು ಎಚ್ಚರಿಕೆ ನೀಡಿವೆ. ಪಶ್ಚಿಮ ಬಂಗಾಳದ ಅಲಿಪುರ್ದೂರ್, ಜಲಪೈಗುರಿ, ಕೂಚ್ ಬೆಹಾರ್, ಡಾರ್ಜಿಲಿಂಗ್ ಹಾಗೂ ಅಸ್ಸಾಂನ ಧುಬ್ರಿ ಜಿಲ್ಲೆಗಳಲ್ಲಿ ವಿಶೇಷ ಪ್ರವಾಹ ಎಚ್ಚರಿಕೆ ನೀಡಲಾಗಿದೆ.
ಅಲಿಪುರ್ದೂರ್ ಜಿಲ್ಲೆಯೊಂದರಲ್ಲೇ ಸುಮಾರು 4,000ರಿಂದ 5,000 ಜನರನ್ನು ಶಾಲಾ ಕಟ್ಟಡಗಳು, ಸಮುದಾಯ ಭವನಗಳು ಸೇರಿದಂತೆ 18 ಸುರಕ್ಷಿತ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಒಟ್ಟಾರೆಯಾಗಿ 6,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.
ಕೂಚ್ ಬೆಹಾರ್ನ ತುಫಂಗಂಜ್ ಮತ್ತು ಬಾಕ್ಸಿರ್ಹತ್ ಹಾಗೂ ಅಸ್ಸಾಂ ಗಡಿ ಭಾಗಗಳಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಸಿವಿಲ್ ಡಿಫೆನ್ಸ್ ತಂಡಗಳನ್ನು ನಿಯೋಜಿಸಲಾಗಿದೆ.
ಪಶ್ಚಿಮ ಬಂಗಾಳದ ಅರಣ್ಯ ಸಚಿವ ಮನೋಜ್ ಕುಮಾರ್ ಒರಾನ್ ಮತ್ತು ಡಾರ್ಜಿಲಿಂಗ್ ಸಂಸದ ರಾಜು ಬಿಸ್ತಾ ಅವರು ಸಂಕೋಶ್ ನದಿ ತೀರದ ನಿವಾಸಿಗಳು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮತ್ತು ಆಡಳಿತಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಅಲಿಪುರ್ದೂರ್ ಜಿಲ್ಲೆಯ ಸಂಕೋಶ್ ನದಿ ತೀರದ ಜನರು ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಪಶ್ಚಿಮ ಬಂಗಾಳದ ಅರಣ್ಯ ಸಚಿವ ಮನೋಜ್ ಕುಮಾರ್ ಒರಾನ್ ಮನವಿ ಮಾಡಿದ್ದಾರೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಡಾರ್ಜಿಲಿಂಗ್ ಸಂಸದ ರಾಜು ಬಿಸ್ತಾ ಕೂಡ ಸೂಚಿಸಿದ್ದಾರೆ.
ಈ ನಡುವೆ, ಸುಮಾರು 4,000ರಿಂದ 5,000 ಜನರನ್ನು ಶಾಲಾ ಕಟ್ಟಡಗಳು ಸೇರಿದಂತೆ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದ್ದು, ಹೆಚ್ಚುವರಿಯಾಗಿ 6,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಲಾಗಿದೆ ಎಂದು ಅಲಿಪುರ್ದೂರ್ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಶಾ ತಿಳಿಸಿದ್ದಾರೆ.
ಭೂತಾನ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನೀರಿನ ಹರಿವಿನ ತೀವ್ರತೆ ಸ್ವಲ್ಪ ಕಡಿಮೆಯಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೂ ಸಂಕೋಶ್ ನದಿ ವ್ಯವಸ್ಥೆಯಲ್ಲಿ ರೆಡ್ ಅಲರ್ಟ್ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನದಿಯಲ್ಲಿ ನೀರಿನೊಂದಿಗೆ ಮರದ ದಿಮ್ಮಿಗಳು, ಸತ್ತ ಮೀನುಗಳು ಮತ್ತು ಕಾಂಕ್ರೀಟ್ ಅವಶೇಷಗಳು ಹರಿದುಬರುವ ಸಾಧ್ಯತೆ ಇರುವುದರಿಂದ ನದಿ ತೀರದ ಜನರು ದೂರವಿರುವಂತೆ ಸೂಚಿಸಲಾಗಿದೆ. ಪರಿಸ್ಥಿತಿಯನ್ನು ಆಡಳಿತ ಮತ್ತು ವಿಪತ್ತು ನಿರ್ವಹಣಾ ತಂಡಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿವೆ.
ಪ್ರಸ್ತುತ ನೀರಿನ ಹರಿವಿನ ತೀವ್ರತೆ ಕೊಂಚ ತಗ್ಗಿದ್ದು, ಭಾರತೀಯ ಪ್ರದೇಶಗಳಲ್ಲಿ ಎಲ್ಲಾ ನಿವಾಸಿಗಳು ಸುರಕ್ಷಿತವಾಗಿದ್ದಾರೆ ಎಂದು ಅಲಿಪುರ್ದೂರ್ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಶಾ ತಿಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಂಕೋಶ್ ನದಿ ವ್ಯವಸ್ಥೆಗೆ ರೆಡ್ ಅಲರ್ಟ್ ಜಾರಿಯಲ್ಲಿದೆ. ಸಂತ್ರಸ್ತರಿಗೆ ಒಣ ಆಹಾರ, ಕುಡಿಯುವ ನೀರು ಮತ್ತು ಅಗತ್ಯ ಸೌಕರ್ಯಗಳನ್ನು ಆಡಳಿತ ಮಂಡಳಿ ಒದಗಿಸುತ್ತಿದ್ದು, ಭೂತಾನ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ.
