Homeರಾಜ್ಯದೀಪಾವಳಿ ಹಬ್ಬದಲ್ಲಿ ರಾತ್ರಿ 8 ರಿಂದ 10 ಗಂಟೆವರೆಗೆ ಪಟಾಕಿ ಸಿಡಿಸಲು ಅನುಮತಿ

ದೀಪಾವಳಿ ಹಬ್ಬದಲ್ಲಿ ರಾತ್ರಿ 8 ರಿಂದ 10 ಗಂಟೆವರೆಗೆ ಪಟಾಕಿ ಸಿಡಿಸಲು ಅನುಮತಿ

ಬೆಂಗಳೂರು, ಅ. 30- ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳಿಂದ ಉಂಟಾಗುವ ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯ ನಿಯಂತ್ರಣದ ಉದ್ದೇಶದಿಂದ ರಾತ್ರಿ 8ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಹೊಡೆಯಲು ಅವಕಾಶ ನೀಡಲಾಗಿದೆ.

ನವೆಂಬರ್‌ 8ರಿಂದ 10ರವರೆಗೆ ದೀಪಾವಳಿ ಆಚರಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ನಿಗದಿತ ಸಮಯ ಮೀರಿ ಪಟಾಕಿ ಸಿಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪರಿಸರ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿಗಳಿಂದ ಉಂಟಾಗುವ ಪರಿಸರ ಮಾಲಿನ್ಯದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ಆದೇಶಗಳ ಅನ್ವಯ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಜಿಲ್ಲಾಧಿಕಾರಿಗಳು, ಪೊಲೀಸ್‌‍ ವರಿಷ್ಠಾಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ನ್ಯಾಯಾಲಯದ ಆದೇಶಗಳನ್ನು ಚಾಚೂತಪ್ಪದೆ ಪಾಲಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ಹಸಿರು ಪಟಾಕಿ ಬಳಕೆಗೆ ಒತ್ತು:ಪಟಾಕಿಗಳ ತಯಾರಿಕೆಯಲ್ಲಿ ಸೋಡಿಯಂ, ಬೇರಿಯಂ, ತಾಮ್ರ ಮತ್ತು ಅಲ್ಯೂಮಿನಿಯಂನಂತಹ ಲೋಹಗಳನ್ನು ಬಳಸಲಾಗುತ್ತದೆ. ಇವುಗಳಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ, ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಹಸಿರು ಪಟಾಕಿಗಳ ಬಳಕೆಗೆ ಆದ್ಯತೆ ನೀಡಲಾಗಿದೆ. ಹಸಿರು ಪಟಾಕಿಗಳಲ್ಲಿ ಲೋಹದ ಅಂಶವನ್ನು ಸುಮಾರು ಶೇ.30ರಷ್ಟು ಕಡಿಮೆ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.

ಸಾರ್ವಜನಿಕರು ಹಸಿರು ಪಟಾಕಿಗಳನ್ನೇ ಬಳಸಬೇಕು. ನಿಷೇಧಿತ ಪಟಾಕಿಗಳನ್ನು ಮಾರಾಟ ಮಾಡುವುದು ಅಥವಾ ದಾಸ್ತಾನು ಮಾಡುವುದು ಕಂಡುಬಂದರೆ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಇಂತಹ ಪಟಾಕಿಗಳನ್ನು ಸಂಗ್ರಹಿಸಿಟ್ಟಿರುವ ಗೋದಾಮುಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಗಳಲ್ಲಿ ಕಾರ್ಯಪಡೆ ರಚನೆ:ಪಟಾಕಿಗಳ ಮಾರಾಟ, ಬಳಕೆ ಮತ್ತು ಮಾಲಿನ್ಯ ನಿಯಂತ್ರಣದ ಮೇಲ್ವಿಚಾರಣೆಗಾಗಿ ಪ್ರತಿ ಜಿಲ್ಲೆಯಲ್ಲಿ ಕಾರ್ಯಪಡೆ ರಚಿಸಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳು, ಅಗ್ನಿಶಾಮಕ ದಳದ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು, ತಹಶೀಲ್ದಾರರು, ಜಿಲ್ಲಾ ಪರಿಸರ ಅಧಿಕಾರಿಗಳು ಮತ್ತು ಪೊಲೀಸ್‌‍ ಅಧಿಕಾರಿಗಳು ಕಾರ್ಯಪಡೆಯಲ್ಲಿರಲಿದ್ದಾರೆ. ಪೊಲೀಸ್‌‍ ಇಲಾಖೆ ನಿಯಮಗಳ ಉಲ್ಲಂಘನೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಪಟಾಕಿಗಳಿಂದ ಸಂಭವಿಸುವ ಅಪಘಾತಗಳಲ್ಲಿ ಅನೇಕರು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳುತ್ತಾರೆ. ಹೀಗಾಗಿ, ಸಾರ್ವಜನಿಕರು ಪಟಾಕಿ ಸಿಡಿಸುವಾಗ ಅತ್ಯಂತ ಜಾಗರೂಕರಾಗಿರಬೇಕು. ಬಸ್‌‍ಗಳಲ್ಲಿ ಪಟಾಕಿಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿಲ್ಲ ಎಂದು ಸಚಿವರು ಎಚ್ಚರಿಕೆ ನೀಡಿದರು. ನಿಯಮಗಳ ಕುರಿತು ಸಾರ್ವಜನಿಕರಿಗೆ ಜಾಹೀರಾತುಗಳ ಮೂಲಕ ಮಾಹಿತಿ ನೀಡುವಂತೆಯೂ ಸೂಚಿಸಲಾಗಿದೆ.

ಪ್ರಾಣಿಪಕ್ಷಿಗಳಿಗೂ ತೊಂದರೆಯಾಗದಿರಲಿ; ದೀಪಾವಳಿ ದೀಪಗಳ ಹಬ್ಬವಾಗಿದ್ದು, ಪಟಾಕಿಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಹೆಚ್ಚಿನ ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯ ಉಂಟುಮಾಡುವ ಮೂಲಕ ಪ್ರಾಣಿಪಕ್ಷಿಗಳಿಗೆ ತೊಂದರೆ ನೀಡಬಾರದು ಎಂದು ರಾಮಲಿಂಗ ರೆಡ್ಡಿ ಮನವಿ ಮಾಡಿದರು. ಪಟಾಕಿಗಳ ಬಳಕೆ ಕುರಿತು ನಟಿ ರಮ್ಯಾ ಕೂಡ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.

ಗಣೇಶ ಚತುರ್ಥಿಯ ಸಂದರ್ಭದಲ್ಲಿಯೂ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌‍ (ಪಿಒಪಿ) ಮೂರ್ತಿಗಳ ಬಳಕೆಯನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಪಿಒಪಿ ಮೂರ್ತಿಗಳಿಂದ ಪರಿಸರಕ್ಕೆ ಹಾನಿಯಾಗುವುದರಿಂದ ಮುಂದಿನ ವರ್ಷದಿಂದ ಇಲಾಖೆಯ ವತಿಯಿಂದಲೇ ಗಣೇಶನ ಮೂರ್ತಿಗಳನ್ನು ಒದಗಿಸುವ ಚಿಂತನೆ ಇದೆ ಎಂದು ಸಚಿವರು ತಿಳಿಸಿದರು. ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ದೀಪಗಳನ್ನು ಬೆಳಗಿಸುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸೋಣ, ಪಟಾಕಿಗಳ ಬಳಕೆಯನ್ನು ಕಡಿಮೆ ಮಾಡೋಣ ಎಂಬ ಸಂದೇಶವನ್ನು ಸಚಿವರು ನೀಡಿದ್ದಾರೆ.

RELATED ARTICLES

Latest News