Homeರಾಷ್ಟ್ರೀಯರಾಹುಲ್‌ ಗಾಂಧಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿರುಗೇಟು

ರಾಹುಲ್‌ ಗಾಂಧಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿರುಗೇಟು

ನವದೆಹಲಿ, ಅ.30- ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಕಾಂಗ್ರೆಸ್‌‍ ತನ್ನ ವೈಯಕ್ತಿಕ ಸಂಸ್ಥೆಗಳಂತೆ ಬಳಸಿಕೊಂಡಿತ್ತು. ರಾಜಕೀಯ ಪ್ರಭಾವ ಬೀರಿ, ಸಾಲ ನೀಡುವ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಬೇಕಾದವರಿಗೆ ಸಾಲ ನೀಡುವಂತೆ ಬ್ಯಾಂಕ್‌ ಉದ್ಯೋಗಿಗಳ ಮೇಲೆ ಒತ್ತಡ ಹೇರಲಾಗುತ್ತಿತ್ತು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಆರೋಪಿಸಿದ್ದಾರೆ.

ರಾಹುಲ್‌ ಗಾಂಧಿ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಬರಹ ಪ್ರಕಟಿಸಿರುವ ಅವರು, ಕಾಂಗ್ರೆಸ್‌‍ ಆಡಳಿತದ ಅವಧಿಯಲ್ಲಿ ನಡೆದ ಹಲವು ಘಟನೆಗಳನ್ನು ಉಲ್ಲೇಖಿಸಿದ್ದಾರೆ.
1957ರಲ್ಲಿ ಕಾಂಗ್ರೆಸ್‌‍ ನಾಯಕರ ಪ್ರಭಾವದಿಂದ ಹರಿದಾಸ್‌‍ ಮುಂದ್ರಾ ಅವರು ಭಾರತೀಯ ಜೀವ ವಿಮಾ ನಿಗಮದಿಂದ ಹಣ ಪಡೆದಿದ್ದರು. 1976ರಲ್ಲಿ ಸಂಜಯ್‌ ಗಾಂಧಿ ಅವರ ಆಪ್ತ ವಲಯಕ್ಕೆ ಸಂಬಂಧಿಸಿದ ಕಂಪನಿಯೊಂದಕ್ಕೆ ಸಾಲ ನೀಡುವ ನಿಯಮಗಳನ್ನು ಸಡಿಲಿಸಲು ರಾಜಕೀಯ ಒತ್ತಡ ಹೇರಲಾಗಿತ್ತು. ಇದಕ್ಕೆ ಒಪ್ಪದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಅಧ್ಯಕ್ಷ ಆರ್‌.ಕೆ. ತಲ್ವಾರ್‌ ಅವರನ್ನು ಇಂದಿರಾ ಗಾಂಧಿ ಸರ್ಕಾರ ಹುದ್ದೆಯಿಂದ ತೆಗೆದುಹಾಕಿತ್ತು ಎಂದು ಅವರು ಆರೋಪಿಸಿದ್ದಾರೆ.

ಅಲ್ಲದೆ, ಮಾರುತಿ ಕಂಪನಿಗೆ ಸಾಲ ನೀಡುವಂತೆ ಸಂಜಯ್‌ ಗಾಂಧಿ ಅವರು ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಮೇಲೆ ಒತ್ತಡ ಹೇರಿದ್ದರು. ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಸರ್ಕಾರಗಳಲ್ಲಿ ಹಣಕಾಸು ಖಾತೆಯ ರಾಜ್ಯ ಸಚಿವರಾಗಿದ್ದ ಬಿ. ಜನಾರ್ದನ ಪೂಜಾರಿ ಅವರು 1980ರ ದಶಕದಲ್ಲಿ ಬ್ಯಾಂಕ್‌ ಉದ್ಯೋಗಿಗಳ ಮೇಲೆ ಸಾಲ ನೀಡುವಂತೆ ಒತ್ತಡ ಹೇರಿದ್ದರು ಎಂದು ದೂರಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಪವನ್‌ ಕುಮಾರ್‌ ಬನ್ಸಾಲ್‌ ಅವರು ತಮ ಕುಟುಂಬಕ್ಕೆ ಸಂಬಂಧಿಸಿದ ಉದ್ಯಮಗಳಿಗೆ ಸಾಲ ನೀಡುವಂತೆ ಕೆನರಾ ಬ್ಯಾಂಕ್‌ ಮೇಲೆ ಒತ್ತಡ ಹೇರಿದ್ದರು ಎಂಬ ಆರೋಪವನ್ನೂ ನಿರ್ಮಲಾ ಸೀತಾರಾಮನ್‌ ಮಾಡಿದ್ದಾರೆ.

ಐಡಿಬಿಐ ಬ್ಯಾಂಕ್‌ ಅನ್ನು ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ದುರ್ಬಲ ಸ್ಥಿತಿಯಲ್ಲಿ ಹಸ್ತಾಂತರಿಸಲಾಗಿತ್ತು. ವಿಡಿಯೋಕಾನ್‌, ವಿನ್‌ ಸಮ್‌‍, ಎಬಿಜಿ ಶಿಪ್‌ ಯಾರ್ಡ್‌ ಮತ್ತು ಕಿಂಗ್‌ ಫಿಷರ್‌ ಸೇರಿದಂತೆ ಕಾಂಗ್ರೆಸ್‌‍ ನಾಯಕರ ನಿಕಟ ಸಂಪರ್ಕ ಹೊಂದಿದ್ದ ದೊಡ್ಡ ಉದ್ಯಮ ಸಮೂಹಗಳಿಗೆ ಬ್ಯಾಂಕ್‌ ಸಾಲ ನೀಡುವಂತೆ ಒತ್ತಾಯಿಸಲಾಗಿತ್ತು. ಈ ಸಾಲಗಳು ಅನುತ್ಪಾದಕ ಆಸ್ತಿಗಳಾಗಿ ಪರಿವರ್ತನೆಯಾಗಿ ಬ್ಯಾಂಕಿಗೆ ಭಾರೀ ನಷ್ಟ ಉಂಟುಮಾಡಿದ್ದವು ಎಂದು ಅವರು ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ವೃತ್ತಿಪರ ನಿರ್ವಹಣೆ, ಎಚ್ಚರಿಕೆಯ ಸಾಲ ನೀತಿ ಮತ್ತು 25,000 ಕೋಟಿ ರೂ.ಗೂ ಅಧಿಕ ಬಂಡವಾಳ ಮರುಪೂರಣದ ಮೂಲಕ ಐಡಿಬಿಐ ಬ್ಯಾಂಕ್‌ ಅನ್ನು ಪುನಶ್ಚೇತನಗೊಳಿಸಿದೆ. ಇದೀಗ ಬ್ಯಾಂಕ್‌ ಮುಂದಿನ ಹಂತದ ಬೆಳವಣಿಗೆಗೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ಐಡಿಬಿಐ ಬ್ಯಾಂಕ್‌ನ ಕಾರ್ಯತಂತ್ರದ ಪುನರ್‌ ರಚನೆ ಪ್ರಕ್ರಿಯೆಯಲ್ಲಿ ಎಲ್ಲ ನಿಯಮಗಳನ್ನು ಪಾಲಿಸಲಾಗಿದೆ. ಈ ಕುರಿತು ಸರ್ಕಾರ ಈಗಾಗಲೇ ಸ್ಪಷ್ಟನೆ ನೀಡಿದೆ ಎಂದು ಅವರು ಹೇಳಿದ್ದಾರೆ.
2024ರ ಫೆಬ್ರವರಿಯಲ್ಲಿ ಬಿಡುಗಡೆಯಾದ ಭಾರತೀಯ ಆರ್ಥಿಕತೆಯ ಕುರಿತ ಶ್ವೇತಪತ್ರದಲ್ಲಿಯೂ ಕಾಂಗ್ರೆಸ್‌‍ ಆಡಳಿತದ ಅವಧಿಯ ಹಲವು ಹಗರಣಗಳು ಮತ್ತು ಆರ್ಥಿಕ ನಿರ್ವಹಣೆಯ ವೈಫಲ್ಯಗಳನ್ನು ದಾಖಲಿಸಲಾಗಿದೆ. ಆ ದಾಖಲೆಗಳು ಈಗಲೂ ಪ್ರಸ್ತುತವಾಗಿವೆ ಎಂದು ನಿರ್ಮಲಾ ಸೀತಾರಾಮನ್‌ ಉಲ್ಲೇಖಿಸಿದ್ದಾರೆ.

ರಫೇಲ್‌ ಒಪ್ಪಂದದ ವಿಚಾರದಲ್ಲಿ ಕಾಂಗ್ರೆಸ್‌‍ ಮಾಡಿದ ಆರೋಪಗಳು ಸುಳ್ಳೆಂದು ಸಾಬೀತಾಗಿದ್ದು, ಕ್ಷಮೆಯಾಚಿಸುವ ಪರಿಸ್ಥಿತಿ ಎದುರಾಗಿತ್ತು. ಇದೇ ರೀತಿ ಈಗಿನ ಆರೋಪಗಳ ವಿಚಾರದಲ್ಲಿಯೂ ಆಗಲಿದೆ ಎಂದು ಕಾಂಗ್ರೆಸ್‌‍ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌‍ ಆಡಳಿತದ ಅವಧಿಯಲ್ಲಿ ಪ್ರಭಾವಿಗಳಿಗೆ ಒಂದು ರೀತಿಯ ನಿಯಮಗಳು ಮತ್ತು ಸಾಮಾನ್ಯ ಜನರಿಗೆ ಮತ್ತೊಂದು ರೀತಿಯ ನಿಯಮಗಳು ಎಂಬಂತೆ ಬ್ಯಾಂಕಿಂಗ್‌ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿತ್ತು.

ರಾಜಕೀಯ ಸಂಪರ್ಕ ಮತ್ತು ಪ್ರಭಾವದ ಮೂಲಕ ಸಾಲ ಪಡೆಯುವ ಪದ್ಧತಿಗೆ ಈಗ ಅಂತ್ಯ ಹಾಡಲಾಗಿದೆ. ಸಾಮಾನ್ಯ ಜನರಿಗೆ ಸುಲಭವಾಗಿ ಸಾಲ ಸಿಗುವ ವ್ಯವಸ್ಥೆ ರೂಪಿಸಲಾಗಿದ್ದು, ರಾಜಕಾರಣಿಗಳ ದೂರವಾಣಿ ಕರೆಗಳ ಒತ್ತಡಕ್ಕೆ ಮಣಿದು ಸಾಲ ನೀಡುವ ಪರಿಸ್ಥಿತಿ ಬ್ಯಾಂಕ್‌ ಉದ್ಯೋಗಿಗಳಿಗೆ ಈಗ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರತಿಪಾದಿಸಿದ್ದಾರೆ.

RELATED ARTICLES

Latest News