ಬೆಂಗಳೂರು, ಅ.30- ಹಾಲು ಮತ್ತು ಮೊಸರಿನ ದರ ಪ್ರತಿ ಲೀ.ಗೆ 8 ರೂ. ಹೆಚ್ಚಿಸಿರುವುದಕ್ಕೆ ಕೆಲ ಜನ ಸಾಮಾನ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸರ್ಕಾರ ನಡೆಸಲಾಗದಿದ್ದ ಮೇಲೆ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗಿ ಎಂದು ಸವಾಲು ಎಸೆಯುತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ಹಾಲಿನ ದರ ಏರಿಕೆಗೆ ತೀವ್ರ ಅಸಮಾಧಾನಗಳು ಕೇಳಿ ಬರುತ್ತಿವೆ.
ಇದರ ನಡುವೆ ನವೆಂಬರ್ 4ರಿಂದ ಬಸ್ ಪ್ರಯಾಣ ದರ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಪಶು ಆಹಾರ, ನಿರ್ವಹಣಾ ವೆಚ್ಚ ದುಬಾರಿಯಾಗಿರುವ ಕಾರಣಕ್ಕಾಗಿ ಹಾಲಿನ ಬೆಲೆ ಹೆಚ್ಚಳ ಅನಿವಾರ್ಯ ಎಂದು ರಾಜ್ಯ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ ಮತ್ತು ನೆರೆ ರಾಜ್ಯಗಳ ಹಾಲಿನ ದರವನ್ನು ಹೋಲಿಕೆ ಮಾಡಲಾಗುತ್ತಿದೆ.ಉತ್ಪಾದನಾ ವೆಚ್ಚವನ್ನು ತಗ್ಗಿಸಲು ಸಮಗ್ರವಾದ ವಿಶ್ಲೇಷಣಾತಕ ಅವಕಾಶಗಳಿದ್ದಾಗಿಯೂ ಸರ್ಕಾರ ಅದರ ಬಗ್ಗೆ ಆಲೋಚಿಸದೆ, ದರ ಏರಿಕೆಯ ಬರೆಯನ್ನು ಗ್ರಾಹಕರಿಗೆ ಹಾಕಿರುವುದು ಟೀಕೆಗೆ ಗುರಿಯಾಗಿದೆ.
ಗ್ಯಾರಂಟಿ ಯೋಜನೆಗಳನ್ನು ಜನ ಕೇಳಿರಲಿಲ್ಲ, ಮತ ಪಡೆದು ಅಧಿಕಾರ ಗಿಟ್ಟಿಸುವ ಸಲುವಾಗಿ ಕಾಂಗ್ರೆಸ್ ತನ್ನಷ್ಟಕ್ಕೆ ತಾನೇ ಗ್ಯಾರಂಟಿಗಳ ಭರವಸೆಯನ್ನು ಚುನಾವಣಾ ಕಾಲದಲ್ಲಿ ನೀಡಿತ್ತು. ಅಧಿಕಾರ ಸಿಕ್ಕ ಬಳಿಕ ಅದನ್ನು ನಿರ್ವಹಿಸಲಾಗದೇ ಪರದಾಡುತ್ತಿದೆ. ಸಿದ್ದರಾಮಯ್ಯ ತಮ ಅನುಭವದ ಮೂಲಕ ಪರಿಸ್ಥಿತಿಯನ್ನು ಹಾಗೂ-ಹೀಗೂ ನಿಭಾಹಿಸುತ್ತಿದ್ದರು. ನಾಯಕತ್ವ ಬದಲಾಗುತ್ತಿದ್ದಂತೆ ಅಯೋಮಯದ ಪರಿಸ್ಥಿತಿ ಎದುರಾಗಿದೆ.
ಬೊಕ್ಕಸ ಖಾಲಿಯಿದೆ, ಜೇಬಿನಲ್ಲಿ ದುಡ್ಡಿದ್ದರೇ ತಾನೆ ಕೊಡುವುದು ಎಂದು ಮುಖ್ಯಮಂತ್ರಿಯವರು ಕಬ್ಬು ಬೇಳೆಗಾರರ ಸಭೆಯಲ್ಲಿ ಮಾತನಾಡುವ ಮೂಲಕ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಬಯಲಿಗಿಟ್ಟಿದ್ದಾರೆ. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಮೇಲೆ ಹೊಣೆಗಾರಿಕೆ ಹೊರಿಸಿ, ಅಸ್ಸಹಾಯಕತೆ ವ್ಯಕ್ತಪಡಿಸುವುದನ್ನು ಕೇಳಿ ಜನ ಬೇಸತ್ತಿದ್ದಾರೆ.
ಗ್ಯಾರಂಟಿಗಳನ್ನು ಕೊಡಿ ಎಂದು ನಾವ್ಯಾರು ಕೇಳಲಿಲ್ಲ. ನಿಮ ಸ್ವಾರ್ಥಕ್ಕಾಗಿ ಘೋಷಣೆ ಮಾಡಿ, ಈಗ ಅದರ ನೆಪದಲ್ಲಿ ಮದ್ಯ, ನೀರು, ಹಾಲು, ಮೊಸರು, ಕಂದಾಯ ಸೇವೆಗಳ ಶುಲ್ಕ, ಶಾಲಾ ಶಿಕ್ಷಣ ಶುಲ್ಕ, ಸಾರಿಗೆ ಸೇವೆಗಳ ಶುಲ್ಕ, ಆಸ್ತಿ ತೆರಿಗೆ, ಬಸ್ ಪ್ರಯಾಣ ದರ ಸೇರಿದಂತೆ ಎಲ್ಲವನ್ನೂ ಒಂದಾದ ಮೇಲೊಂದರಂತೆ ಹೆಚ್ಚಿಸಿ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಎಂಬ ಟೀಕೆಗಳಿವೆ. ಖರ್ಚು ಹೆಚ್ಚಾಗುತ್ತಿದೆ. ಆದಾಯ ಕಡಿಮೆ ಇದೆ, ಜನರು ಬದುಕಲಾಗುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಅವರು ಹಲವು ಬಾರಿ ಮಾತನಾಡುತ್ತಿದ್ದರು. ಅವರಿಗೆ ಅಧಿಕಾರ ಸಿಕ್ಕ ತಕ್ಷಣ ಇದೆಲ್ಲವನ್ನೂ ಮರೆತಂತೆ ನಟಿಸುತ್ತಿದ್ದಾರೆ.
ಕೆಲವೇ ಮಂದಿಗೆ ನೀಡಲಾಗುವ ಗ್ಯಾರಂಟಿ ಯೋಜನೆಗಳ ನೆಪದಲ್ಲಿ ರಾಜ್ಯದ ಸರ್ವರಿಗೂ ಶುಲ್ಕದ ಬರೆ ಹಾಕಲಾಗುತ್ತಿದೆ. ಈ ರೀತಿಯ ಸಂಗ್ರಹಿಸಲಾದ ಹಣ ಕೂಡ ಎಲ್ಲಿ ಹೋಗುತ್ತಿದೆ? ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಗೃಹಲಕ್ಷ್ಮಿ ಯೋಜನೆಯ ಮಾಸಾಶನ ನಿಯಮಿತವಾಗಿ ಪಾವತಿಯಾಗುತ್ತಿಲ್ಲ. ಕಳೆದ ವರ್ಷ ಎರಡು ತಿಂಗಳ ಹಣ ನೀಡದೆ ವಂಚಿಸಿರುವುದು ವಿಧಾನಮಂಡಳದ ಅಧಿವೇಶನದಲ್ಲಿ ಸಾಬೀತಾಗಿದ್ದು, ಇತೀಚಿನ ದಿನಗಳಲ್ಲಿ ಕೆಲ ತಿಂಗಳುಗಳ ಹಣ ಕೂಡ ಬಿಡುಗಡೆಯಾಗಿಲ್ಲ, ಇಂದು ಅಥವಾ ನಾಳೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಫಲಾನುಭವಿಗಳಿದ್ದಾರೆ.
ಗ್ಯಾರಂಟಿಗಳನ್ನು ನೆಪಮಾಡಿಕೊಂಡು ದುಬಾರಿ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಸರ್ಕಾರದ ಯೋಜನೆಗಳಿಗೂ ಹಣ ಇಲ್ಲ, ರೈತರಿಗೆ ಪಾವತಿಸಲು ಬೊಕ್ಕಸ ಖಾಲಿ. ಕೇಂದ್ರ ಸರ್ಕಾರದ ಪ್ರಾಯೋಜಕತ್ವ ಇರುವ ವೃದ್ಧಾಪ್ಯ, ವಿಶೇಷ ಚೇತನರ ಪಿಂಚಣಿಗಳು ಬಾಕಿ ಉಳಿದಿವೆ. ಈಗ ಹಿಂದೆಂದೂ ಕಂಡರಿಯದಷ್ಟು ಬೃಹತ್ ಮೊತ್ತದ ಹಾಲಿನ ದರವನ್ನು ಏಕಾಏಕಿ ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ಮಧ್ಯಮ ವರ್ಗದ ಬದುಕಿನ ಮೇಲೆ ಚಪ್ಪಡಿ ಎಳೆದಿದೆ ಎಂಬ ಅಸಮಾಧಾನಗಳಿವೆ.
ಪಶು ಆಹಾರದ ಬೆಲೆ ಹೆಚ್ಚಾಗಿದೆ. ಹಾಲು ಉತ್ಪಾದಕರಿಗೆ ನಷ್ಟವಾಗುತ್ತಿದೆ ಎಂಬುದು ಒಕ್ಕೂಟಗಳ ವಾದ. ಪಶು ಆಹಾರ ಉತ್ಪಾದನಾ ವೆಚ್ಚ ತಗ್ಗಿಸಲು ಸಮಗ್ರವಾದ ಆಲೋಚನೆಗಳ ಜೊತೆ ರಾಜ್ಯ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ಸುಲಭಕ್ಕೆ ಸಿಗುವ ಜನರ ಮೇಲೆ ತೆರಿಗೆ ಹಾಕಿ ಕೈ ತೊಳೆದುಕೊಳ್ಳುತ್ತಿದೆ ಎಂಬ ಆರೋಪಗಳಿವೆ.
ಪಶು ಆಹಾರದ ಉತ್ಪಾದನೆಗಾಗಿ ಬಳಸುವ ಕಚ್ಚಾ ಸರಕುಗಳ ಸಗಟು ಖರೀದಿ ಹಾಗೂ ಪರ್ಯಾಯ ಕಚ್ಚಾವಸ್ತುಗಳ ಬಳಕೆಯಂತಹ ಮಾರ್ಗಗಗಳ ಬಗ್ಗೆ ಆಲೋಚಿಸುತ್ತಿಲ್ಲ, ವಿಶ್ವವಿದ್ಯಾಲಯಗಳ ದುಂದುವೆಚ್ಚದ ಸಂಶೋಧನೆಗಳು ಪ್ರಯೋಜನಕ್ಕೆ ಬರುತ್ತಿಲ್ಲ. ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಕ್ರಮ ಕೈಗೊಂಡರೆ ಕಮೀಷನ್ ಆದಾಯಗಳಿಗೆ ಕೊರತೆಯಾಗಲಿದೆ ಎಂಬ ಕಾರಣಕ್ಕೆ ಆಡಳಿತ ವರ್ಗ ಜಾಣಮೌನ ಅನುಸರಿಸಲಾಗುತ್ತಿದೆ ಎಂಬ ಆರೋಪಗಳಿವೆ.
ಡೀಸೆಲ್ ಬೆಲೆ ಹೆಚ್ಚಳವನ್ನು ನೆಪ ಮಾಡಿಕೊಂಡು ಬಸ್ಪ್ರಯಾಣ ದರವನ್ನು ಪರಿಷ್ಕರಿಸಲಾಗುತ್ತಿದೆ. ಜಾಹಿರಾತು ರೂಪದಲ್ಲೇ ಸಾರಿಗೆ ಸಂಸ್ಥೆಗಳು ನೂರಾರು ಕೋಟಿ ರೂ.ಗಳ ಲಾಭ ಪಡೆಯಲು ಅವಕಾಶವಿದೆ. ಆದರೆ ಇದನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಸದರಿ ಸಂಸ್ಥೆಗಳು ಲಾಭ ಮಾಡಿಕೊಳ್ಳುತ್ತಿವೆ.
ಅದರ ಮೂಲಕ ಅಧಿಕಾರಸ್ತರಿಗೆ ಋಣ ಸಂದಾಯವಾಗುತ್ತಿದೆ. ಜಾಹಿರಾತಿನ ನಿಯಮಾವಳಿಗಳನ್ನು ಸಡಿಲಗೊಳಿಸಿ ಸಾರಿಗೆ ಸಂಸ್ಥೆಯೇ ನೇರ ನಿರ್ವಹಣೆ ಮಾಡಿದರೆ, ನಷ್ಟದ ಅಂದಾಜನ್ನು ಭರಿಸಲು ಅವಕಾಶಗಳಿವೆ. ಆದರೆ ಈ ರೀತಿಯ ಸಮಗ್ರ ಆಲೋಚನೆಗಳ ಕೊರತೆ ರಾಜ್ಯ ಸರ್ಕಾರದಲ್ಲಿ ಎದ್ದು ಕಾಣುತ್ತಿದೆ. ಪರಿಣಾಮ ಜನ ಸಾಮಾನ್ಯರು ತೆರಿಗೆ ಏರಿಕೆಯ ಶಿಕ್ಷೆ ಅನುಭವಿಸುವಂತಾಗಿದೆ.
