Homeರಾಷ್ಟ್ರೀಯದೆಹಲಿಯಲ್ಲಿ ಪಾದರಕ್ಷೆ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ: ನಾಲ್ವರ ದುರ್ಮರಣ

ದೆಹಲಿಯಲ್ಲಿ ಪಾದರಕ್ಷೆ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ: ನಾಲ್ವರ ದುರ್ಮರಣ


ನವದೆಹಲಿ, ಅ.31- ದೆಹಲಿಯ ಮಂಗೋಲ್‌ಪುರಿ ಕೈಗಾರಿಕಾ ಪ್ರದೇಶದ ಫೇಸ್‌-1ರಲ್ಲಿರುವ ಪಾದರಕ್ಷೆ ಕಾರ್ಖಾನೆಯೊಂದರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಮಾಹಿತಿ ತಿಳಿದ ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಬೆಂಕಿಯನ್ನು ಹತೋಟಿಗೆ ತರಲು ಅಗ್ನಿಶಾಮಕ ದಳದ ಹಲವು ತಂಡಗಳು ಗಂಟೆಗಟ್ಟಲೆ ಶ್ರಮಿಸಿದವು. ಕಾರ್ಖಾನೆಯ ಒಳಗಡೆ ಅಸ್ವಸ್ಥ ಸ್ಥಿತಿಯಲ್ಲಿದ್ದ ಒಟ್ಟು ಆರು ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಆರು ಮಂದಿಯನ್ನು ತಕ್ಷಣವೇ ಮಂಗೋಲ್‌ಪುರಿಯಲ್ಲಿರುವ ಸಂಜಯ್‌ ಗಾಂಧಿ ಸ್ಮಾರಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಆಸ್ಪತ್ರೆ ತಲುಪಿದಾಗ ಆರು ಮಂದಿ ಸಂತ್ರಸ್ತರ ಪೈಕಿ ನಾಲ್ವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಉಳಿದ ಇಬ್ಬರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾತ್ರಿ 9.32ರ ಸುಮಾರಿಗೆ ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಕರೆ ಬಂದ ಕೂಡಲೇ ದೆಹಲಿ ಅಗ್ನಿಶಾಮಕ ದಳವು 20 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅಗ್ನಿಶಾಮಕ ಅಧಿಕಾರಿ ಎಡಿಒ ಪರಸ್‌ ಕುಮಾರ್‌ ಅವರು, ಬೆಂಕಿ ಮೊದಲು ಕಟ್ಟಡದ ನೆಲಮಹಡಿಯಲ್ಲಿ (ಬೇಸ್‌ಮೆಂಟ್‌) ಕಾಣಿಸಿಕೊಂಡಿತ್ತು ಎಂದು ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನೆಲಮಹಡಿಯಲ್ಲೇ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಬೆಂಕಿ ಕಟ್ಟಡದ ಇತರ ಭಾಗಗಳಿಗೆ ಹರಡುವುದು ತಪ್ಪಿತು.

“ಮಂಗೋಲ್‌ಪುರಿಯ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ರಾತ್ರಿ 9.31ರಿಂದ 9.32ರ ಸುಮಾರಿಗೆ ಅಗ್ನಿಶಾಮಕ ದಳಕ್ಕೆ ಕರೆ ಬಂದಿತ್ತು. ಆರು ಮಂದಿಯನ್ನು ರಕ್ಷಿಸಿ ಸಂಜಯ್‌ ಗಾಂಧಿ ಆಸ್ಪತ್ರೆಗೆ ಸಾಗಿಸಲಾಯಿತು. ಇದೊಂದು ಪಾದರಕ್ಷೆ ತಯಾರಿಕಾ ಘಟಕವಾಗಿದ್ದು, ಇಲ್ಲಿ ಪಾದರಕ್ಷೆಗಳನ್ನು ತಯಾರಿಸಿ ಸಂಗ್ರಹಿಸಿಡಲಾಗುತ್ತದೆ.

ಬೆಂಕಿ ಮೊದಲು ನೆಲಮಹಡಿಯಲ್ಲಿ ಕಾಣಿಸಿಕೊಂಡಿತ್ತು. ನಾವು ಅದನ್ನು ಅಲ್ಲಿಯೇ ನಿಯಂತ್ರಿಸಿ, ಇತರ ಭಾಗಗಳಿಗೆ ಹರಡದಂತೆ ತಡೆದೆವು. ದಟ್ಟವಾದ ಹೊಗೆ ಆವರಿಸಿದ್ದರಿಂದ ಮೂರನೇ ಮಹಡಿಯ ಮೆಟ್ಟಿಲುಗಳ ಬಳಿಯಿಂದ ಒಬ್ಬರನ್ನು ಮತ್ತು ನಾಲ್ಕನೇ ಮಹಡಿಯಿಂದ ಐವರನ್ನು ರಕ್ಷಿಸಲಾಯಿತು. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದ್ದು, ಸದ್ಯ ತಂಪಾಗಿಸುವ ಪ್ರಕ್ರಿಯೆ ನಡೆಯುತ್ತಿದೆ” ಎಂದು ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

RELATED ARTICLES

Latest News