Homeರಾಜ್ಯಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರಕುಸಿತ, ರಾಜ್ಯದಲ್ಲಿ 5 ದಿನಗಳು ಮಳೆ ಸಾಧ್ಯತೆ

ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರಕುಸಿತ, ರಾಜ್ಯದಲ್ಲಿ 5 ದಿನಗಳು ಮಳೆ ಸಾಧ್ಯತೆ

ಬೆಂಗಳೂರು, ನ.1- ಅರ್ನಾಬ್‌ ಚಂಡಮಾರುತದ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ರಾಜ್ಯದಲ್ಲಿ ಮತ್ತೆ ಮತ್ತೊಂದು ಸುತ್ತಿನ ಮಳೆಯಾಗುವ ಮುನ್ಸೂಚನೆಗಳಿವೆ. ಇಂದಿನಿಂದ ಐದು ದಿನಗಳ ಕಾಲ ರಾಜ್ಯದಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.

ಹವಾಮಾನ ಇಲಾಖೆ ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಗಳನ್ನು ನೀಡಿದೆ. ಈ ವಾಯುಭಾರ ಕುಸಿತವೂ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಗಳಿವೆ. ಇದರಿಂದ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ರಾಜ್ಯದ ಪೂರ್ವ ಭಾಗದ ಜಿಲ್ಲೆಗಳ ಹಲವೆಡೆ ಹೆಚ್ಚಿನ ಮಳೆಯಾಗುವ ಮುನ್ಸೂಚನೆಗಳಿವೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಪರಿಣಾಮ ಇತ್ತೀಚೆಗೆ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಉತ್ತಮ ಮಳೆಯಾಗಿತ್ತು. ಅಲ್ಲದೆ, ಅದು ತೀವ್ರ ಚಂಡ ಮಾರುತವಾಗಿ ಪರಿವರ್ತನೆಯಾದ ಹಿನ್ನೆಲೆಯಲ್ಲಿ ವಾತಾವರಣದಲ್ಲಿದ್ದ ತೇವಾಂಶವನ್ನು ಸೆಳೆದುಕೊಂಡಿತ್ತು. ಇದರಿಂದ ರಾಜ್ಯದಲ್ಲಿ ಒಂದು ವಾರದಿಂದ ಮಳೆ ಪ್ರಮಾಣ ಕ್ಷೀಣಿಸಿತ್ತು. ಒಣಹವೆ ಮುಂದುವರೆದು ಚಳಿಯ ವಾತಾವರಣ ಕಂಡುಬಂದಿತ್ತು.

ತೀವ್ರ ಬರದಿಂದ ಒಣಗುತ್ತಿದ್ದ ಮುಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ಇತ್ತೀಚೆಗೆ ಬಿದ್ದ ಮಳೆಯು ಜೀವಕಳೆ ತಂದಿತ್ತು. ಅಲ್ಲದೆ, ಕಳೆದ ಒಂದು ವಾರದಿಂದ ಮಳೆ ಇಲ್ಲದೆ, ಮತ್ತೆ ಬೆಳೆಗಳು ಒಣಗುವ ಪರಿಸ್ಥಿತಿ ಇತ್ತು. ಈಗ ಮತ್ತೆ ಮಳೆಯಾಗುವ ಮುನ್ಸೂಚನೆ ಇರುವುದು ರೈತರಲ್ಲಿ ಆಶಾಭಾವನೆ ಮೂಡಿದಂತಾಗಿದೆ.

RELATED ARTICLES

Latest News