Homeರಾಜ್ಯಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆಯ ಅಕ್ರಮ ಬಯಲಿಗೆ : ಅತ್ಯಧಿಕ ಅಂಕ ಪಡೆದಿದ್ದ ಶಂಕರ್‌ ಬನ್ನೂರ್‌...

ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆಯ ಅಕ್ರಮ ಬಯಲಿಗೆ : ಅತ್ಯಧಿಕ ಅಂಕ ಪಡೆದಿದ್ದ ಶಂಕರ್‌ ಬನ್ನೂರ್‌ ಅರೆಸ್ಟ್

ಬೆಂಗಳೂರು, ನ.1- ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗಿದ್ದ ಪರೀಕ್ಷೆಯಲ್ಲಿ ಅಕ್ರಮ ಬಯಲಿಗೆ ಬಂದಿದ್ದು, ಅತ್ಯಧಿಕ ಅಂಕ ಪಡೆದಿದ್ದ ಅಭ್ಯರ್ಥಿ ಶಂಕರ್‌ ಬನ್ನೂರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಗಳಲ್ಲೂ ಅಕ್ರಮದ ವಾಸನೆ ಆರಂಭವಾಗಿದೆ. ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ವ್ಯಾಪಕ ಭ್ರಷ್ಟಚಾರ ಮತ್ತು ಅವ್ಯವಹಾರಗಳು ನಡೆದಿರುವ ಆರೋಪಗಳು ಕೇಳಿ ಬರುತ್ತಿದ್ದವು. ಪರ್ಯಾಯ ಕ್ರಮವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಲು ರಾಜ್ಯ ಸರ್ಕಾರ ಒತ್ತು ನೀಡುತ್ತಿತ್ತು.

ಕೆಲವು ಪರೀಕ್ಷೆಗಳನ್ನು ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ನಡೆಸಲಾಗಿದೆ ಎಂಬ ಮೆಚ್ಚುಗೆಗಳಿದ್ದವು. ಆದರೆ, ಗ್ರಾಮ ಲೆಕ್ಕಾಧಿಕಾರಿಗಳ ಪರೀಕ್ಷೆಯಲ್ಲಿ ಆರೋಪಿ ಶಂಕರ್‌ ಬನ್ನೂರು ಪರೀಕ್ಷಾ ಕೇಂದ್ರಕ್ಕೆ ಮೊಬೈಲ್‌ ತೆಗೆದುಕೊಂಡು ಹೋಗಿ ಪರೀಕ್ಷೆ ಬರೆದು, ಅಕ್ರಮ ಮಾರ್ಗದ ಮೂಲಕ ಹೆಚ್ಚು ಅಂಕ ಪಡೆದಿರುವುದು ಬೆಳಕಿಗೆ ಬಂದಿದೆ.

ಅಕ್ಟೋಬರ್‌ 4ರಂದು ಕೆಇಎ ನಡೆಸಿದ್ದ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಯ ನೇಮಕಾತಿ ಪರೀಕ್ಷೆಯಲ್ಲಿ ಶಂಕರ್‌ ಬನ್ನೂರು 151.25 ಅಂಕ ಪಡೆದ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ್ದ. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ ಬೆಂಗಳೂರಿನ ಮಲ್ಲೇಶ್ವರಂ ಸೇರಿದಂತೆ ಕೆಲವು ಕಡೆ ದೂರು ನೀಡಿದ್ದು ತನಿಖೆಗೆ ಒತ್ತಾಯಿಸಿತ್ತು. ಕೆಲವು ಸಂಘಟನೆಗಳು ಇದಕ್ಕೆ ಬೆಂಬಲ ನೀಡಿದ್ದವು.

ಎತ್ತೆಚ್ಚುಕೊಂಡ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾವೇರಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ತನಿಖೆ ನಡೆಸಲು ಸೂಚನೆ ನೀಡಿತ್ತು. ಜಿಲ್ಲಾಧಿಕಾರಿಗಳು ಶಂಕರ್‌ ಬನ್ನೂರು ಪರೀಕ್ಷೆ ಬರೆದಿದ್ದ ಶಿಗ್ಗಾಂವಿಯಲ್ಲಿನ ಕೇಂದ್ರದ ಸಿಸಿಟಿವಿಗಳನ್ನು ಪರಿಶೀಲಿಸಿದರು.ಈ ವೇಳೆ ಶಂಕರ್‌ ಬನ್ನೂರು ಮೊಬೈಲ್‌ ಬಳಸಿ ಪರೀಕ್ಷಾ ಕೇಂದ್ರದ ಕೊನೆಯ ಬೆಂಚ್‌ನಲ್ಲಿ ಕುಳಿತು ಪರೀಕ್ಷೆ ಬರೆದಿರುವುದು ಕಂಡು ಬಂದಿದೆ.

ಹಾನಗಲ್‌ ಪೊಲೀಸರು ನಿನ್ನೆ ರಾತ್ರಿಯೇ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಶಿಗ್ಗಾಂವಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ವಿಚಾರಣೆ ನಡೆಸಿದಾಗ ಆರೋಪಿ, ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್‌ ಬಳಸಿದ್ದನ್ನು ಒಪ್ಪಿಕೊಂಡಿದ್ದಾನೆ. ಭದ್ರತಾ ಸಿಬ್ಬಂಧಿಗಳು ತಮ ಆಧಾರ್‌ ಕಾರ್ಡ್‌ ಮಾತ್ರ ಪರಿಶೀಲನೆ ನಡೆಸಿದ್ದರು. ಮೊಬೈಲ್‌ ಪರಿಶೀಲನೆ ನಡೆಸಿಲ್ಲ ಎಂದು ಹೇಳಿಕೆ ನೀಡಿದ್ದಾನೆ. ಮೊಬೈಲ್‌ನಲ್ಲಿ ಗೂಗಲ್‌ ಲೆನ್‌್ಸ ಮೂಲಕ ಪ್ರಶ್ನಾಪತ್ರಿಕೆಯನ್ನು ಸ್ಕ್ಯಾನ್‌ ಮಾಡಿ, ಉತ್ತರ ಹುಡುಕಿ ಓಎಂಆರ್‌ ಸೀಟ್‌ನಲ್ಲಿ ಮಾರ್ಕ್‌ ಮಾಡಿದ್ದಾಗಿ ತಿಳಿಸಿದ್ದಾನೆ.

ಈ ಅಕ್ರಮ ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಚರ್ಚೆಗೆ ವೇದಿಕೆ ಒದಗಿಸಿದೆ. ಪರೀಕ್ಷಾ ಪ್ರಾಧಿಕಾರದ ವ್ಯವಸ್ಥೆಗಳ ಮೇಲೆಯೂ ಅಪನಂಬಿಕೆಗಳು ಆರಂಭವಾಗಿವೆ. ಕೆಪಿಎಸ್‌‍ಸಿ ನೇಮಕಾತಿಯಲ್ಲಿ ಬ್ರಹಾಂಡ ಭ್ರಷ್ಟಚಾರಗಳೇ ಹೊರ ಬರುತ್ತಿರುವಾಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿಗಳ ಮೇಲೆ ಒಂದಿಷ್ಟು ವಿಶ್ವಾಸವಿತ್ತು. ಶಿಗ್ಗಾಂವಿಯ ಕೇಂದ್ರದಲ್ಲಿ ಅಭ್ಯರ್ಥಿ ಮೊಬೈಲ್‌ ಅನ್ನು ಪರೀಕ್ಷಾ ಕೇಂದ್ರದೊಳಗೆ ಕೊಂಡುಯ್ಯುವಷ್ಟು ಸುಲಭ ಅವಕಾಶಗಳು ಸೃಷ್ಟಿಯಾಗಿದ್ದಾದರೂ ಹೇಗೆ? ಎಂಬ ಪ್ರಶ್ನೆ ಉದ್ಭವಿಸಿದೆ.

ಒಬ್ಬ ಅಭ್ಯರ್ಥಿಗೆ ಮಾತ್ರ ಈ ಅವಕಾಶವಿತ್ತೇ? ಅಥವಾ ಇದೇ ರೀತಿಯ ಎಷ್ಟು ಜನರಿಗೆ ಅಕ್ರಮಕ್ಕೆ ಅವಕಾಶ ಸಿಕ್ಕಿವೆ ಎಂಬ ಪ್ರಶ್ನೆ ಕಾಡಲಾರಂಭಿದೆೆ.ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ, ಶಂಕರ್‌ ಬನ್ನೂರು ಗಳಿಸಿದ ಅಂಕಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ಪರೀಕ್ಷಾ ಪ್ರಾಧೀಕಾರ ಸ್ಪಷ್ಟನೆ ನೀಡಿ ಹಗಲು-ರಾತ್ರಿ ಕಷ್ಟಪಟ್ಟು ಕಳಂಕರಹಿತ ಪರೀಕ್ಷೆ ನಡೆಸುತ್ತಿದ್ದೇವೆ. ಈ ರೀತಿಯ ಅಪಪ್ರಚಾರದಿಂದ ವ್ಯವಸ್ಥೆಯ ಮೇಲೆ ಅಪನಂಬಿಕೆಯ ವಾತಾವರಣ ಸೃಷ್ಟಿಮಾಡಬಾರದು ಎಂದು ಆಗ್ರಹಿಸಿತ್ತು.

ಶಂಕರ್‌ ಬನ್ನೂರು ಸ್ಪಷ್ಟನೆ ನೀಡಿ ತಾವು ಹಗಲು-ರಾತ್ರಿ ಕಷ್ಟಪಟ್ಟು ಓದಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ರ್ಯಾಂಕ್‌ ಪಡೆದಿದ್ದೇನೆ. ಹಣ ಕೊಟ್ಟು ಪಾಸ್‌‍ ಆಗಲು ನಮದು ಬಡ ಕುಟುಂಬ. ಆರ್ಥಿಕ ವ್ಯವಸ್ಥೆಗಳಿಲ್ಲ. ಈ ವರೆಗೂ 45 ಪರೀಕ್ಷೆ ಬರೆದಿದ್ದೇನೆ. ಈ ಹಿಂದೆ ಕೆಎಸ್‌‍ಆರ್‌ಪಿ ಪರೀಕ್ಷೆಯಲ್ಲಿ ಕೇವಲ 35 ಅಂಕ ಪಡೆದಿದ್ದು ನಿಜ. ಆ ಸಮಯದಲ್ಲಿ ತಮನಿಗೆ ಅಪಘಾತವಾಗಿತ್ತು. ಅದರ ನೋವಿನಿಂದಲೇ ಏಕಾಗ್ರತೆಯಿಂದ ಸರಿಯಾಗಿ ಪರೀಕ್ಷೆ ಬರೆಯಲಾಗಿರಲಿಲ್ಲ ಎಂದು ಹೇಳಿಕೊಂಡಿದ್ದರು.

ಆದರೆ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ, ಶಂಕರ್‌ ಬನ್ನೂರು ಈ ಹಿಂದೆ ವಿವಿಧ ಪರೀಕ್ಷೆಗಳಲ್ಲಿ ಅಂಕಗಳ ಸಹಿತ ಎಲ್ಲಾ ಮಾಹಿತಿಯನ್ನು ಬಹಿರಂಗಗೊಳಿಸಿ ಆತನ ಪ್ರತಿಭೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿತ್ತು. ಈಗ ತನಿಖೆಯ ವೇಳೆ ಶಂಕರ್‌ ಬನ್ನೂರು ಅಕ್ರಮವೆಸಗಿರುವುದು ಖಚಿತವಾಗಿದೆ. ಇದಷ್ಟೇ ಅಲ್ಲದೇ ಪರೀಕ್ಷಾ ಪ್ರಾಧಿಕಾರದ ವ್ಯವಸ್ಥೆಗಳ ಮೇಲೆಯೂ ಅಪನಂಬಿಕೆಗಳು ಶುರುವಾಗಿವೆ.

RELATED ARTICLES

Latest News