ಮುಂಬೈ (ಮಹಾರಾಷ್ಟ್ರ), ನ.3- ಆಹಾರ ಕಲಬೆರಕೆ ಹಾಗೂ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ತಡೆಗಟ್ಟಲು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಅಕ್ರಮಗಳು ಬೆಳಕಿಗೆ ಬಂದಿವೆ.ರಾಜ್ಯದ ಏಳು ವಿಭಾಗಗಳಲ್ಲಿ ಏಕಕಾಲಕ್ಕೆ ನಡೆಸಿದ ತಪಾಸಣೆಯಲ್ಲಿ ಬರೋಬ್ಬರಿ 9.01 ಕೋಟಿ ರೂ. ಮೌಲ್ಯದ 3.53 ಲಕ್ಷ ಕೆ.ಜಿ. ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.
ಕಾರ್ಯಾಚರಣೆಯಲ್ಲಿ ಪತಂಜಲಿ ಆಯುರ್ವೇದದ ಸೂಪರ್ ಡಿಸ್ಟ್ರಿಬ್ಯೂಟರ್ ಸಂಸ್ಥೆಯಲ್ಲಿದ್ದ ಸಾವಿರಾರು ಲೀಟರ್ ಹಸುವಿನ ತುಪ್ಪವನ್ನೂ ಅಧಿಕಾರಿಗಳು ವಶಪಡಿಸಿಕೊಂಡಿರುವುದು ಗಮನಾರ್ಹವಾಗಿದೆ.
ಪತಂಜಲಿ ತುಪ್ಪದ ವಿರುದ್ಧ ಕ್ರಮ:
ಛತ್ರಪತಿ ಸಂಭಾಜಿನಗರದಲ್ಲಿರುವ ಪತಂಜಲಿ ಆಯುರ್ವೇದದ ಸೂಪರ್ ಡಿಸ್ಟ್ರಿಬ್ಯೂಟರ್ ಮೆಸರ್ಸ್ ದಿವ್ಯ ಮಹಾವಿತರಕ್ ಸಂಸ್ಥೆಯಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು, 20.20 ಲಕ್ಷ ರೂ. ಮೌಲ್ಯದ ಒಟ್ಟು 2,279.7 ಲೀಟರ್ ಪತಂಜಲಿ ಹಸುವಿನ ತುಪ್ಪವನ್ನು ಜಪ್ತಿ ಮಾಡಿದ್ದಾರೆ.
ತಪ್ಪು ಬ್ರ್ಯಾಂಡಿಂಗ್ ಮತ್ತು ಕಲಬೆರಕೆಯ ಶಂಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಒಟ್ಟು 4,032 ಪ್ಯಾಕ್ಗಳ ತುಪ್ಪವನ್ನು ವಶಪಡಿಸಿಕೊಳ್ಳಲಾಗಿದೆ.
ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ನಡೆದ ತಪಾಸಣೆಯಲ್ಲಿ ಆಹಾರ ಪದಾರ್ಥಗಳ ಸಂಗ್ರಹಣೆ ಮತ್ತು ವಿತರಣೆಯಲ್ಲಿನ ಲೋಪಗಳು ಪತ್ತೆಯಾಗಿವೆ.ಥಾಣೆ ಜಿಲ್ಲೆಯ ಭಿವಂಡಿಯಲ್ಲಿರುವ ಅವೆನ್ಯೂ ಸೂಪರ್ಮಾರ್ಟ್ಸ್ ಲಿಮಿಟೆಡ್ನಿಂದ 1,44,218 ಕೆ.ಜಿ. ಅಡುಗೆ ಎಣ್ಣೆ ಜಪ್ತಿ ಮಾಡಲಾಗಿದೆ.
ಸತಾರಾದ ಅಮೀನ್ ಟ್ರೇಡರ್ಸ್ನಿಂದ 20,560 ಕೆ.ಜಿ. ಅಕ್ಕಿ, ಬೇಳೆಕಾಳು, ಬೆಲ್ಲ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.ಸ್ವಾತಿ ಆಯಿಲ್ ಮಿಲ್ಸ್ ಮತ್ತು ಸೋಲಾಪುರದ ಎಸ್.ಜಿ. ಟ್ರೇಡರ್ಸ್ನಿಂದ ಅಡುಗೆ ಎಣ್ಣೆ ಜಪ್ತಿ ಮಾಡಲಾಗಿದೆ. ಮುಂಬೈ, ಅಮರಾವತಿ ಮತ್ತು ಛತ್ರಪತಿ ಸಂಭಾಜಿನಗರ ವಿಭಾಗಗಳಲ್ಲಿನ ನಮ್ಕೀನ್, ಸಿಹಿತಿಂಡಿ ಮತ್ತು ಮಸಾಲೆ ಪದಾರ್ಥಗಳ ಉತ್ಪಾದನಾ ಘಟಕಗಳ ವಿರುದ್ಧವೂ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
19 ಸಂಸ್ಥೆಗಳ ಪರವಾನಗಿ ಅಮಾನತು
ತಪಾಸಣೆಯಲ್ಲಿ ಹಲವು ಆಹಾರ ಉತ್ಪಾದನಾ ಘಟಕಗಳು ಮೂಲಭೂತ ನೈರ್ಮಲ್ಯ ನಿಯಮಗಳನ್ನೇ ಪಾಲಿಸದಿರುವುದು ಪತ್ತೆಯಾಗಿದೆ. ಆಹಾರ ಪದಾರ್ಥಗಳನ್ನು ಅಸಮರ್ಪಕವಾಗಿ ಸಂಗ್ರಹಿಸುವುದು, ಕೀಟ ನಿಯಂತ್ರಣ ವ್ಯವಸ್ಥೆ ಇಲ್ಲದಿರುವುದು, ಸ್ವಚ್ಛತಾ ದಾಖಲೆಗಳನ್ನು ನಿರ್ವಹಿಸದಿರುವುದು ಹಾಗೂ ಕಡ್ಡಾಯ ಸುರಕ್ಷತಾ ದಾಖಲೆಗಳನ್ನು ಹೊಂದಿರದಿರುವುದು ಪ್ರಮುಖ ಉಲ್ಲಂಘನೆಗಳಾಗಿವೆ. ಈ ಹಿನ್ನೆಲೆಯಲ್ಲಿ ಒಟ್ಟು 19 ಸಂಸ್ಥೆಗಳ ಪರವಾನಗಿ ಮತ್ತು ನೋಂದಣಿಗಳನ್ನು ಅಮಾನತುಗೊಳಿಸಲಾಗಿದೆ.
13 ಎಫ್ಐಆರ್, 16 ಬಂಧನ; ಏಳು ಘಟಕಗಳಿಗೆ ಬೀಗ
ಅಕ್ಟೋಬರ್ 28ರಿಂದ 31ರವರೆಗೆ ನಡೆದ ಮತ್ತೊಂದು ಹಂತದ ವಿಶೇಷ ಕಾರ್ಯಾಚರಣೆಯಲ್ಲಿ 17 ಸಂಸ್ಥೆಗಳಿಂದ 79.40 ಲಕ್ಷ ರೂ. ಮೌಲ್ಯದ ನಿಷೇಧಿತ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಅವಧಿಯಲ್ಲಿ 13 ಎಫ್ಐಆರ್ಗಳು ದಾಖಲಾಗಿದ್ದು, 16 ವ್ಯಕ್ತಿಗಳನ್ನು ಬಂಧಿಸಲಾಗಿದೆ. ಏಳು ಸಂಸ್ಥೆಗಳಿಗೆ ಬೀಗಮುದ್ರೆ ಹಾಕಲಾಗಿದ್ದು, ಆರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ನಾಸಿಕ್, ಛತ್ರಪತಿ ಸಂಭಾಜಿನಗರ ಮತ್ತು ನಾಗ್ಪುರ ವಿಭಾಗಗಳಲ್ಲಿನ 34 ಹೋಟೆಲ್, ರೆಸ್ಟೋರೆಂಟ್ ಮತ್ತು ಧಾಬಾಗಳನ್ನು ಪರಿಶೀಲಿಸಲಾಗಿದೆ.ಆಹಾರ ಸುರಕ್ಷತೆ ಹಾಗೂ ನೈರ್ಮಲ್ಯ ನಿಯಮಗಳಲ್ಲಿನ ಲೋಪಗಳ ಹಿನ್ನೆಲೆಯಲ್ಲಿ 29 ಸಂಸ್ಥೆಗಳಿಗೆ ಸುಧಾರಣಾ ನೋಟಿಸ್ಗಳನ್ನು ನೀಡಲಾಗಿದೆ.
ಟಾಟಾ 1ಎಂಜಿ, ಅಮೆಜಾನ್-ಫ್ಲಿಪ್ಕಾರ್ಟ್ಗೂ ನೋಟಿಸ್
ಟಾಟಾ 1ಎಂಜಿ ಮೆರೈನ್ ಕಾಲಜನ್ ಪೌಡರ್ನ ಲೇಬಲಿಂಗ್ ಮತ್ತು ಜಾಹೀರಾತಿನಲ್ಲಿ ನಿಯಮ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ ಎಫ್ಎಸ್ಎಸ್ಎಐ, ಟಾಟಾ 1ಎಂಜಿ ಹೆಲ್ತ್ಕೇರ್ ಸೊಲ್ಯೂಷನ್ಸ್, ಎಸಿಎಫ್ಸಿ ಫಾರ್ಮಾಸ್ಯುಟಿಕಲ್ಸ್, ಅಮೆಜಾನ್ ಸೆಲ್ಲರ್ ಸರ್ವೀಸಸ್ ಮತ್ತು ಫ್ಲಿಪ್ಕಾರ್ಟ್ ಇಂಡಿಯಾಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಸಂಬಂಧಿತ ಸಂಸ್ಥೆಗಳು 30 ದಿನಗಳೊಳಗೆ ತಮ್ಮ ವಿವರಣೆ ಸಲ್ಲಿಸುವಂತೆ ಸೂಚಿಸಲಾಗಿದೆ.
