ಬೆಂಗಳೂರು, ನ.3- ಕರ್ನಾಟಕದ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಏರಿಕೆ ಕುರಿತು ಇಂದು ಮಹತ್ವದ ಚರ್ಚೆಗಳು ನಡೆಯಲಿವೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಬಹುತೇಕ ನ.5ರಿಂದ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಕುರಿತು ಇಂದು ಮತ್ತು ನಾಳೆ ಸರಣಿ ಸಭೆಗಳು ನಡೆಯಲಿದೆ.
ಇಂದು ಸಾರಿಗೆ ಸಂಸ್ಥೆಗಳ ಮಟ್ಟದಲ್ಲಿನ ಉನ್ನತಾಧಿಕಾರಿಗಳು ಸಭೆ ನಡೆಸಲಿ, ದರ ಹೆಚ್ಚಳ ಪ್ರಸ್ತಾವನೆ ಸಿದ್ದ ಪಡಿಸಲಿದ್ದಾರೆ. ನಾಳೆ ಸಾರಿಗೆ ಸಚಿವ ಬೈರತಿ ಸುರೇಶ್ ಜೊತೆಗೆ ಸಮಾಲೋಚನೆ ನಡೆಯಲಿದ್ದು, ಪ್ರಯಾಣ ದರ ಹೆಚ್ಚಳಕ್ಕೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸಾರಿಗೆ ಸಂಸ್ಥೆಗಳು ಎದುರಿಸುತ್ತಿರುವ ಆರ್ಥಿಕ ಒತ್ತಡ, ಇಂಧನ ಬೆಲೆ ಏರಿಕೆ, ಸಿಬ್ಬಂದಿ ವೇತನ ಹಾಗೂ ನಿರ್ವಹಣಾ ವೆಚ್ಚದ ಹೆಚ್ಚಳದ ಹಿನ್ನೆಲೆಯಲ್ಲಿ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯ ಎಂದು ಪ್ರತಿಪಾದಿಸಲಾಗಿದೆ.
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ತಾತ್ವಿಕ ಅನುಮೋದನೆ ನೀಡಲಾಗಿದೆ. ಆದರೆ ಯಾವ ಪ್ರಮಾಣದಲ್ಲಿ ದರ ಹೆಚ್ಚಿಸಬೇಕು ಎಂಬ ಬಗ್ಗೆ ಚರ್ಚಿಸಿ ನಿರ್ಧರಿಸಲು ಸಾರಿಗೆ ಸಚಿವರಿಗೆ ಅಧಿಕಾರ ನೀಡಲಾಗಿದೆ. ಅದರ ಪ್ರಯುಕ್ತ ಸಭೆಗಳು ನಡೆಯುತ್ತಿವೆ.ರಾಜ್ಯದ ನಾಲ್ಕು ಸಾರಿಗೆ ನಿಗಮಳಲ್ಲಿ ಬಸ್ ಪ್ರಯಾಣ ದರ ಏರಿಕೆಯಾಗುವುದಂತೂ ಖಚಿತವಾಗಿದೆ.
ಸಾರ್ವಜನಿಕ ಸಾರಿಗೆ ಪ್ರಯಾಣ ದರ ನಿಯಂತ್ರಣ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರವನ್ನು ಶೇ.40ರಿಂದ 45ರಷ್ಟು ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. ಉಳಿದ ಮೂರು ಸಾರಿಗೆ ನಿಗಮಗಳಾದ ಕೆಎಸ್ಆರ್ಟಿಸಿ, ವಾಯವ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ಪ್ರಯಾಣ ದರವನ್ನು ಶೇ.25ರಿಂದ 28ರಷ್ಟು ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. ಆದರೆ, ಈ ಪ್ರಮಾಣದ ಏರಿಕೆಗೆ ಸರ್ಕಾರ ನಿರಾಕರಿಸಿದೆ ಎನ್ನಲಾಗಿದೆ.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಒಟ್ಟಾರೆ ಸುಮಾರು 9 ಸಾವಿರ ಕೋಟಿ ರೂ.ಗಳಷ್ಟು ಸಂಚಿತ ನಷ್ಟವನ್ನು ಎದುರಿಸುತ್ತಿವೆ. ಅಲ್ಲದೆ, ನೌಕರರ ಉಪಧನ, ಭವಿಷ್ಯ ನಿಧಿ ಹಾಗೂ ಬಾಕಿ ಪಾವತಿಗಳು ಸೇರಿದಂತೆ ಸುಮಾರು 6,600 ಕೋಟಿ ರೂ.ಗಳ ಹೊಣೆಗಾರಿಕೆಯೂ ನಿಗಮಗಳ ಮೇಲಿದೆ. ಡೀಸೆಲ್ ಬೆಲೆ ಏರಿಕೆಯಿಂದಾಗಿ ಸಾರಿಗೆ ನಿಗಮಗಳಿಗೆ ವಾರ್ಷಿಕವಾಗಿ ಸುಮಾರು 2 ಸಾವಿರ ಕೋಟಿ ರೂ.ಗಳ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ.
ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಿರುವುದರಿಂದ ಟಿಕೆಟ್ ಖರೀದಿಸಿ ಪ್ರಯಾಣಿಸುವ ಪುರುಷ ಪ್ರಯಾಣಿಕರ ಪ್ರಮಾಣ ಶೇ.48ರಿಂದ ಶೇ.36ಕ್ಕೆ ಇಳಿಕೆಯಾಗಿದೆ. ಇದರಿಂದ ಸಾರಿಗೆ ನಿಗಮಗಳ ಆದಾಯದ ಮೇಲೂ ಪರಿಣಾಮ ಬೀರಿದೆ. ಸರ್ಕಾರದಿಂದ ಶಕ್ತಿ ಯೋಜನೆಯ ಹಣ ಮರುಪಾವತಿಯಾಗುವಲ್ಲಿ ವಿಳಂಬವಾಗುತ್ತಿರುವುದೂ ಆರ್ಥಿಕ ಒತ್ತಡಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ 2025ರ ಜನವರಿ 5ರಂದು ರಾಜ್ಯದ ಸಾರಿಗೆ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಲಾಗಿತ್ತು. ಈಗಲೂ ಶೇ.15ರಿಂದ 20ರಷ್ಟು ದರ ಏರಿಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ.ಮತ್ತೊಮೆ ದರ ಏರಿಕೆಗೆ ಸರ್ಕಾರ ಮುಂದಾಗಿರುವುದರಿಂದ ನಿತ್ಯ ಬಸ್ಗಳಲ್ಲಿ ಸಂಚರಿಸುವ ಲಕ್ಷಾಂತರ ಪ್ರಯಾಣಿಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆಯಿದೆ ಎಂಬ ಆಕ್ರೋಶಗಳು ಕೇಳಿ ಬಂದಿವೆ.
