ರೋಮ್, ನ.3- ಧಂಗೆ, ಹಿಂಸಾಚಾರ ಹಾಗೂ ಹಿಂಸಾತ್ಮಕ ರ್ಯಾಲಿಗಳನ್ನು ತಡೆಯಲು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನೇತೃತ್ವದ ಸರ್ಕಾರ ಕೈಗೊಂಡಿರುವ ಕಠಿಣ ನಿರ್ಧಾರ ಐರೋಪ್ಯ ದೇಶಗಳಲ್ಲಿ ಸಂಚಲನ ಸೃಷ್ಟಿಸಿದೆ. ದೇಶದ ಉತ್ತರ ಭಾಗದ ಮಿಲಾನ್ ಸೇರಿದಂತೆ ಹಲವು ನಗರಗಳಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ಕಠಿಣ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಪ್ರತಿಭಟನೆ ವೇಳೆ ಐವರು ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪಿನಲ್ಲಿ ಪಾಲ್ಗೊಂಡು, ಕಲ್ಲು, ಪಟಾಕಿ ಅಥವಾ ದೊಣ್ಣೆಗಳನ್ನು ಬಳಸಿ ಸಾರ್ವಜನಿಕರ ಸುರಕ್ಷತೆಗೆ ಅಪಾಯ ಉಂಟುಮಾಡುವವರಿಗೆ ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ 20 ಸಾವಿರ ಯೂರೊವರೆಗೆ ದಂಡ ವಿಧಿಸುವ ಹೊಸ ಅಪರಾಧ ವಿಧಿಸಲಾಗಿದೆ.
ಮುಖ ಮುಚ್ಚಿಕೊಂಡು ಹಿಂಸಾಚಾರ ನಡೆಸಿದರೆ ಅಥವಾ ಇತರರನ್ನು ಗಾಯಗೊಳಿಸಿದರೆ ಶಿಕ್ಷೆ ಹೆಚ್ಚಾಗಲಿದೆ. ಅಪ್ರಾಪ್ತರು ಪ್ರತಿಭಟನೆ ವೇಳೆ ಆಸ್ತಿ ಹಾನಿ ಮಾಡಿದರೆ ಅವರ ಪೋಷಕರನ್ನೂ ಪರಿಹಾರ ಪಾವತಿಗೆ ಹೊಣೆಗಾರರನ್ನಾಗಿ ಮಾಡುವ ನಿಯಮವಿದೆ.
ಸಾರ್ವಜನಿಕ ಆಸ್ತಿಗೆ ಹಾನಿಯಾದರೆ ಅಧಿಕಾರಿಗಳು ಪರಿಹಾರ ಪಾವತಿಸುವಂತೆ ಆದೇಶಿಸಬಹುದು. ಖಾಸಗಿ ಆಸ್ತಿಗೆ ಹಾನಿಯಾದರೆ ನ್ಯಾಯಾಲಯದ ಮೂಲಕ ಪರಿಹಾರ ಪಡೆಯುವ ವ್ಯವಸ್ಥೆಯನ್ನೂ ರೂಪಿಸಲಾಗಿದೆ. ಮಿಲಾನ್ನಲ್ಲಿ ಭದ್ರತೆ ಬಲಪಡಿಸಲು ಹೆಚ್ಚುವರಿಯಾಗಿ 500 ಸೈನಿಕರನ್ನು ನಿಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಆದರೆ, ಪೋಷಕರ ಬ್ಯಾಂಕ್ ಖಾತೆಗಳನ್ನು ನೇರವಾಗಿ ಖಾಲಿ ಮಾಡಲಾಗುತ್ತದೆ ಅಥವಾ ವಿದೇಶಿ ಹಣಕಾಸಿನಿಂದ ಪ್ರತಿಭಟನೆಗಳು ನಡೆಯುತ್ತಿವೆ ಎಂಬುದಕ್ಕೆ ವಿಶ್ವಾಸಾರ್ಹ ವರದಿಗಳಲ್ಲಿ ದೃಢೀಕರಣವಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬರಹದಲ್ಲಿನ ಕೆಲವು ಅಂಶಗಳು ಅತಿರಂಜಿತವಾಗಿವೆ.
ಈ ಕ್ರಮಗಳು ಶಾಂತಿಯುತ ಪ್ರತಿಭಟನೆಗಳಿಗೆ ಅನ್ವಯಿಸುವುದಿಲ್ಲ. ಆದರೆ, ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದು ಸೇರಿದಂತೆ ನಿರ್ದಿಷ್ಟ ಹಿಂಸಾತ್ಮಕ ಕೃತ್ಯಗಳಿಗೆ ಶಿಕ್ಷೆ ವಿಧಿಸುವ ಉದ್ದೇಶವನ್ನು ಹೊಸ ಕಾನೂನು ಹೊಂದಿದೆ. ದೇಶದಲ್ಲಿ ಈ ಕಾನೂನು ಈಗಾಗಲೇ ಜಾರಿಯಲ್ಲಿದೆ.
