ಬೆಂಗಳೂರು,ನ.3-ಹಾಡಹಗಲೇ ಕಚೇರಿಯೊಂದಕ್ಕೆ ನುಗ್ಗಿ ಯುವತಿಗೆ ಚಾಕುವಿನಿಂದ ಬೆದರಿಸಿ ಸರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ ವ್ಯಕ್ತಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಸೂರ್ಯಸಿಟಿ ನಗರದ ನಿವಾಸಿ ಪ್ರಭುರಾಜ್ ಅಲಿಯಾಸ್ ರಾಜ್ (40) ಬಂಧಿತ ಆರೋಪಿ. ಈತ ವೃತ್ತಿಯಲ್ಲಿ ಡೆಲಿವರಿ ಬಾಯ್.
ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ 100 ಅಡಿ ರಸ್ತೆಯ ಪ್ರಿಮಿಯಂ ಶ್ಯೂ ಮತ್ತು ಬ್ಯಾಗ್ ರಿಪೇರಿ ಅಂಗಡಿಯ ಮಾಲೀಕರಾದ ರಂಜಿತ್‌ಕುಮಾರ್ ಅವರ ಬಳಿ ರಿಶಪ್ಷನ್‌ನಿಸ್ಟ್ ಆಗಿ ಕಳೆದ 3 ವರ್ಷಗಳಿಂದ ಜಯಶ್ರೀ (23) ಎಂಬ ಯುವತಿ ಕೆಲಸ ಮಾಡಿಕೊಂಡಿದ್ದಾರೆ.
ಅ.31 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಜಯಶ್ರೀ ಅವರು ಎಂದಿನಂತೆ ಅಂಗಡಿಗೆ ಬಂದು ಬಾಗಿಲು ತೆಗೆದು ಕೆಲಸದಲ್ಲಿ ನಿರತರಾಗಿದ್ದಾಗ 11.45 ರ ಸುಮಾರಿನಲ್ಲಿ ವ್ಯಕ್ತಿಯೊಬ್ಬ ಹೆಲೆಟ್ ಹಾಗೂ ಹ್ಯಾಂಡ್ ಗ್ಲೌಸ್ ಧರಿಸಿಕೊಂಡು ಏಕಾಏಕಿ ಇವರ ಅಂಗಡಿಗೆ ನುಗ್ಗಿದ್ದಾನೆ.
ತಕ್ಷಣ ಜಯಶ್ರೀ ಅವರು ಗಾಬರಿಯಾಗಿ ಕಿರುಚಿಕೊಂಡಾಗ ಯಾರೋ ನನ್ನನ್ನು ಸಾಯಿಸಲು ಬರುತ್ತಿದ್ದಾರೆ. ಕೂಗಾಡಬೇಡಿ ಎಂದು ಹೇಳಿದ್ದಾನೆ.ವ್ಯಕ್ತಿಯ ನಡವಳಿಕೆಯಿಂದ ಆತಂಕಗೊಂಡ ಯುವತಿ ಅಂಗಡಿ ಮಾಲೀಕರಿಗೆ ಕರೆ ಮಾಡಲು ಮೊಬೈಲ್ ತೆಗೆದುಕೊಳ್ಳುತ್ತಿದ್ದಂತೆ ಆ ವ್ಯಕ್ತಿ ಆಕೆಯನ್ನು ಬಲವಂತದಿಂದ ಕೆಳಗೆ ಕೂರಿಸಿ,ಬ್ಯಾಗಿನಲ್ಲಿದ್ದ ಚಾಕುವನ್ನು ಕುತ್ತಿಗೆ ಬಳಿ ಇಟ್ಟು ಕೂಗಾಡಿದರೆ ನಿನ್ನನ್ನು ಸಾಯಿಸುತ್ತೇನೆಂದು ಹೆದರಿಸಿದ್ದಾನೆ.
ನಂತರ ಆಕೆಯ ಕೈಗಳಿಗೆ ಪೆವಿಕ್ವಿಕ್ ಹಾಕಿ ಎರಡು ಕೈಗಳನ್ನು ಟೇಬಲ್‌ಗೆ ಅಂಟಿಸಿ ಅಲ್ಲೇ ಇದ್ದ ಬಟ್ಟೆಯನ್ನು ಆಕೆಯ ಬಾಯಿಗೆ ತುರುಕಿ ಹಲ್ಲೆ ನಡೆಸಿ ಆಕೆ ಧರಿಸಿದ್ದ 35 ಗ್ರಾಂ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೊರಗೆ ಓಡಿದ್ದಾನೆ.ತಕ್ಷಣ ಜಯಶ್ರೀ ಅವರು ಕೈಯನ್ನು ಬಿಡಿಸಿಕೊಂಡು ಸಹಾಯಕ್ಕಾಗಿ ಹೊರಗೆ ಬಂದು ಕಿರುಚಾಡುತ್ತಿದ್ದಂತೆ ಸಾರ್ವಜನಿಕರು ಅಂಗಡಿ ಬಳಿ ಆಗಮಿಸಿದ್ದಾರೆ.
ತಾನು ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಆರೋಪಿ ಪುನಃ ಯುವತಿ ಬಳಿ ಬಂದು ಆಕೆಯ ಕೂದಲನ್ನು ಹಿಡಿದುಕೊಂಡು ಕುತ್ತಿಗೆಗೆ ಚಾಕು ಇರಿಸಿ ನನ್ನನ್ನು ಯಾರಾದರೂ ತಡೆದರೆ ಸಾಯಿಸುವುದಾಗಿ ಹೆದರಿಸಿದ್ದಾನೆ.ಅಷ್ಟರಲ್ಲಿ ಅಂಗಡಿ ಮಾಲೀಕರು ಬಂದು ಆರೋಪಿಯನ್ನು ಹಿಡಿಯಲು ಮುಂದಾದಾಗ ಅವರ ಮೇಲೆ ಚಾಕುವನ್ನು ಬೀಸಿದ್ದರಿಂದ ಅವರು ಕೂಡ ಗಾಯಗೊಂಡಿದ್ದಾರೆ.
ಆ ಸಂದರ್ಭದಲ್ಲಿ ಆರೋಪಿ ಪರಾರಿಯಾಗಲು ಯತ್ನಿಸಿದಾಗ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ವಿಷಯ ತಿಳಿಸಿ ಅವರಿಗೆ ಒಪ್ಪಿಸಿದ್ದಾರೆ.ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ನನ್ನ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ಹಣದ ಅವಶ್ಯಕತೆ ಇದ್ದುದ್ದರಿಂದ ಈ ರೀತಿ ಮಾಡಬೇಕಾಯಿತು ಎಂದು ಹೇಳಿದ್ದಾನೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
