ಮುಂಬೈ, ನ.3- ನಟಿ ದಿಯಾ ಮಿರ್ಜಾ ಅಭಿನಯಿಸಿದ್ದ ಮಾಲಿನ್ಯ ಮುಕ್ತ ದೀಪಾವಳಿ ಜಾಗೃತಿ ಜಾಹೀರಾತನ್ನು ರಾಜಕೀಯ ವಿರೋಧದ ಹಿನ್ನೆಲೆಯಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ತೆಗೆದುಹಾಕಿರುವ ಕ್ರಮಕ್ಕೆ ಬಾಂಬೆ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು, ಇಂತಹ ವಿಚಾರಗಳಲ್ಲಿ ಒಗ್ಗಟ್ಟಿನ ಮನೋಭಾವಕ್ಕೆ ಧಕ್ಕೆಯಾಗಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳಿಂದ ಉಂಟಾಗುವ ವಾಯು ಮತ್ತು ಶಬ್ದ ಮಾಲಿನ್ಯದ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಿಎಂಸಿ, ನಟಿ ದಿಯಾ ಮಿರ್ಜಾ ಅವರನ್ನು ಒಳಗೊಂಡ ವಿಡಿಯೋ ಅಭಿಯಾನ ರೂಪಿಸಿತ್ತು. ಆದರೆ, ಈ ಅಭಿಯಾನದಲ್ಲಿ ದಿಯಾ ಮಿರ್ಜಾ ಅವರನ್ನು ಸೇರಿಸಿರುವುದಕ್ಕೆ ಮುಂಬೈ ಮೇಯರ್ ರಿತು ತಾವ್ಡೆ ಹಾಗೂ ಬಿಜೆಪಿ ಮುಂಬೈ ಘಟಕದ ಅಧ್ಯಕ್ಷ ಅಮಿತ್ ಸತಮ್ ಆಕ್ಷೇಪ ವ್ಯಕ್ತಪಡಿಸಿದ್ದರು. ಜಾಹೀರಾತಿಗೆ ಬೇರೆ ಬಣ್ಣ ನೀಡಲಾಗಿದೆ ಹಾಗೂ ಇಂತಹ ವ್ಯಕ್ತಿಯನ್ನು ಅಭಿಯಾನದಲ್ಲಿ ಸೇರಿಸಿರುವುದು ದುರದೃಷ್ಟಕರ ಎಂದು ಅವರು ಟೀಕಿಸಿದ್ದರು.
ಈ ರಾಜಕೀಯ ವಿರೋಧದ ಬೆನ್ನಲ್ಲೇ ಬಿಎಂಸಿ ಯಾವುದೇ ಸ್ಪಷ್ಟ ಕಾರಣ ಅಥವಾ ವಿವರಣೆ ನೀಡದೆ ಜಾಹೀರಾತಿನ ವಿಡಿಯೋವನ್ನು ತನ್ನ ವೇದಿಕೆಯಿಂದ ತೆಗೆದುಹಾಕಿತ್ತು. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಾಂಬೆ ಹೈಕೋರ್ಟ್, ಬಿಎಂಸಿಯ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ನ್ಯಾಯಾಲಯ, ಮುಂಬೈ ನಗರದ ಅಸ್ತಿತ್ವವೇ ಒಗ್ಗಟ್ಟು ಮತ್ತು ಸಹಬಾಳ್ವೆಯ ಭಾವನೆಯ ಮೇಲೆ ನಿಂತಿದೆ. ಕೆಲವು ಸಡಿಲವಾದ ಅಥವಾ ಪ್ರಚೋದನಾತ್ಮಕ ಹೇಳಿಕೆಗಳಿಂದ ಸಮಾಜದ ಸಾಮರಸ್ಯಕ್ಕೆ ಧಕ್ಕೆಯಾಗಬಾರದು ಎಂದು ಹೇಳಿದೆ.
ಸೆಲೆಬ್ರಿಟಿಗಳ ವಿರುದ್ಧದ ಟೀಕೆಗೆ ಅಸಮಾಧಾನ
ಮಾಲಿನ್ಯ ನಿಯಂತ್ರಣದಂತಹ ಸಾರ್ವಜನಿಕ ಹಿತಾಸಕ್ತಿಯ ಅಭಿಯಾನಕ್ಕೆ ಬೆಂಬಲ ನೀಡಿದ ಸೆಲೆಬ್ರಿಟಿಗಳ ವಿರುದ್ಧ ಕೆಲವರು ಮಾಡಿರುವ ಟೀಕೆಗಳು ನ್ಯಾಯಾಲಯಕ್ಕೆ ಅಸಮಾಧಾನ ತಂದಿವೆ. ಯಾವುದೇ ರಾಜಕೀಯ ನಾಯಕರ ಹೆಸರನ್ನು ಉಲ್ಲೇಖಿಸದ ನ್ಯಾಯಪೀಠ, ಬಿಎಂಸಿ ಪರಿಣಾಮಕಾರಿಯಾದ ಜಾಗೃತಿ ಅಭಿಯಾನ ಕೈಗೊಂಡಿತ್ತು. ಸೆಲೆಬ್ರಿಟಿಗಳು ಕೂಡ ಒಗ್ಗಟ್ಟಿನ ಸಂದೇಶ ಸಾರಿದ್ದರು. ಇಂತಹ ಉತ್ತಮ ಉದ್ದೇಶದ ಕಾರ್ಯವನ್ನು ವಿವಾದದ ಮೂಲಕ ಗುಂಪುಗಾರಿಕೆಗೆ ಎಡೆಮಾಡಿಕೊಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಜನರಲ್ಲಿ ಸಂವಿಧಾನದ ಮೇಲಿನ ವಿಶ್ವಾಸವನ್ನು ಪುನಃಸ್ಥಾಪಿಸುವ ನಿಟ್ಟಿನಲ್ಲಿ ಈ ಅಭಿಯಾನದ ಸಂದೇಶವನ್ನು ಮತ್ತೆ ಸಾರ್ವಜನಿಕರ ಮುಂದಿಡುವುದು ಸೂಕ್ತ ಎಂದು ನ್ಯಾಯಾಲಯ ಸೂಚಿಸಿದೆ.
ವಿಡಿಯೋ ಮರುಸ್ಥಾಪನೆಗೆ ಸೂಚನೆ
ತೆಗೆದುಹಾಕಲಾಗಿರುವ ದಿಯಾ ಮಿರ್ಜಾ ಅವರ ಜಾಗೃತಿ ವಿಡಿಯೋವನ್ನು ಮತ್ತೆ ಮರುಸ್ಥಾಪಿಸುವುದು ಬಿಎಂಸಿಗೆ ಆದರ್ಶಪ್ರಾಯ ಕ್ರಮವಾಗಲಿದೆ ಎಂದು ಹೈಕೋರ್ಟ್ ಹೇಳಿದೆ. ಆದರೆ, ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನು ಬಿಎಂಸಿಗೇ ಬಿಟ್ಟಿದೆ.
ಒಟ್ಟಿನಲ್ಲಿ, ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಜಾಗೃತಿಯಂತಹ ವಿಷಯಗಳಿಗೂ ರಾಜಕೀಯ ಅಥವಾ ಧಾರ್ಮಿಕ ಬಣ್ಣ ನೀಡುವ ಪ್ರವೃತ್ತಿಯ ಬಗ್ಗೆ ಬಾಂಬೆ ಹೈಕೋರ್ಟ್ ವ್ಯಕ್ತಪಡಿಸಿರುವ ಕಳವಳ ಮಹತ್ವ ಪಡೆದುಕೊಂಡಿದೆ. ಸಾರ್ವಜನಿಕ ಹಿತಾಸಕ್ತಿಯ ಅಭಿಯಾನಗಳಲ್ಲಿ ವ್ಯಕ್ತಿಗಳ ಧರ್ಮ ಅಥವಾ ಹಿನ್ನೆಲೆಗಿಂತ ಅದರ ಉದ್ದೇಶ ಮತ್ತು ಸಂದೇಶಕ್ಕೆ ಆದ್ಯತೆ ನೀಡಬೇಕು ಎಂಬ ಚರ್ಚೆಗೆ ಈ ಪ್ರಕರಣ ಮತ್ತೊಮ್ಮೆ ವೇದಿಕೆ ಕಲ್ಪಿಸಿದೆ.
