Homeರಾಜ್ಯದೀಪಾವಳಿ ಪಟಾಕಿ ಅವಘಡಗಳಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಮಿಂಟೋ ಆಸ್ಪತ್ರೆ ಸನ್ನದ್ಧ

ದೀಪಾವಳಿ ಪಟಾಕಿ ಅವಘಡಗಳಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಮಿಂಟೋ ಆಸ್ಪತ್ರೆ ಸನ್ನದ್ಧ

ಬೆಂಗಳೂರು, ನ. 3- ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಸಂಭವಿಸಬಹುದಾದ ಅವಘಡಗಳಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ನಗರದ ಮಿಂಟೋ ಕಣ್ಣಿನ ಆಸ್ಪತ್ರೆ ಸನ್ನದ್ಧವಾಗಿದ್ದು, ದಿನದ 24 ಗಂಟೆಯೂ ತುರ್ತು ಚಿಕಿತ್ಸೆ ಒದಗಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸುರೇಶ್‌ ಬಾಬು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ಕಾರ್ಯನಿರ್ವಹಣೆ ಮಾಡಲಾಗುವುದು. ಪಟಾಕಿಯಿಂದ ಕಣ್ಣಿಗೆ ಗಂಭೀರ ಹಾನಿಯಾಗುವ ಸಾಧ್ಯತೆ ಇರುವುದರಿಂದ ಅಗತ್ಯ ಔಷಧಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಯಾವುದೇ ಅವಘಡ ಸಂಭವಿಸಿದರೂ ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

2024ರಲ್ಲಿ ಪಟಾಕಿ ಅವಘಡಗಳಿಗೆ ಸಂಬಂಧಿಸಿದಂತೆ 71 ಪ್ರಕರಣಗಳು ದಾಖಲಾಗಿದ್ದರೆ, 2025ರಲ್ಲಿ 56 ಮಂದಿ ಗಾಯಾಳುಗಳು ಆಸ್ಪತ್ರೆಗೆ ಬಂದಿದ್ದರು. ಕಳೆದ ವರ್ಷ ದಾಖಲಾದ 56 ಪ್ರಕರಣಗಳ ಪೈಕಿ 42 ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದು, 14 ಮಂದಿಯನ್ನು ಒಳರೋಗಿಗಳಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು ಎಂದು ತಿಳಿಸಿದರು.2025ರಲ್ಲಿ ಪಟಾಕಿ ಅವಘಡಗಳಿಂದ ಗಾಯಗೊಂಡವರಲ್ಲಿ 21 ಪುರುಷರು ಮತ್ತು ನಾಲ್ವರು ಮಹಿಳೆಯರು ಸೇರಿದ್ದಾರೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆರು ಬಾಲಕಿಯರಿಗೂ ಚಿಕಿತ್ಸೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಪಟಾಕಿ ಅವಘಡಗಳಲ್ಲಿ ಸುಮಾರು ಶೇ.38ರಷ್ಟು ಮಂದಿ ಕೈಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಸುಟ್ಟ ಗಾಯಗಳಿಗೆ ಒಳಗಾಗುತ್ತಿದ್ದರೆ, ಶೇ.19ರಷ್ಟು ಮಂದಿ ಕಣ್ಣಿನ ಗಾಯಗಳಿಗೆ ತುತ್ತಾಗುತ್ತಿದ್ದಾರೆ. ವಿಶೇಷವಾಗಿ 10ರಿಂದ 40 ವರ್ಷ ವಯೋಮಾನದವರಲ್ಲಿ ಹೆಚ್ಚಿನ ಗಾಯಗಳು ಕಂಡುಬರುತ್ತಿದ್ದು, ಯುವಕರ ಕಣ್ಣಿನ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ಎಚ್ಚರಿಸಿದರು.

ಬಿಜಿಲಿ ಪಟಾಕಿಯಿಂದ ಹೆಚ್ಚು ಅವಘಡ:ಕಳೆದ ವರ್ಷದ ಅಂಕಿಅಂಶಗಳ ಪ್ರಕಾರ, ಬಿಜಿಲಿ ಪಟಾಕಿಯಿಂದ 18 ಅವಘಡಗಳು ಸಂಭವಿಸಿದ್ದರೆ, ಲಕ್ಷೀ ಪಟಾಕಿಯಿಂದ ಏಳು ಹಾಗೂ ಆಟಂ ಬಾಂಬ್‌ನಿಂದ ಆರು ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಪಟಾಕಿ ಸಿಡಿಸುವಾಗ ನಿರ್ಲಕ್ಷ್ಯ ವಹಿಸದೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯ ಎಂದು ಹೇಳಿದರು.

ದೀಪಾವಳಿ ಸಂಭ್ರಮದ ನಡುವೆ ಕಣ್ಣಿನ ಅಮೂಲ್ಯ ದೃಷ್ಟಿಗೆ ಹಾನಿಯಾಗದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಯಾವುದೇ ಪಟಾಕಿ ಅವಘಡ ಸಂಭವಿಸಿದರೆ ವಿಳಂಬ ಮಾಡದೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು ಎಂದು ಅವರು ಮನವಿ ಮಾಡಿದರು.

RELATED ARTICLES

Latest News