ಬೆಂಗಳೂರು, ನ.3- ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರ ಸ್ವಾಮಿಯವರ ವಿರುದ್ಧ ಸಾಕ್ಷ್ಯ ಸಂಗ್ರಹಿಸಲು ಒತ್ತಡಗಳು ಹೆಚ್ಚುತ್ತಿದ್ದು, ತನಿಖಾಧಿಕಾರಿಗಳು ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ಸ್ಟಿಂಗ್ ಆಪರೇಷನ್ಗೆ ಸಂಬಂಧಿಸಿದೆ ಎಂದು ಹೇಳಲಾಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿದ್ದರಿಂದ ಆರಂಭಿಸಿ ನಂತರದ ಬೆಳವಣಿಗೆಗಳನ್ನು ಇಂಚಿಂಚೂ ಕಲೆ ಹಾಕುತ್ತಿರುವ ಪೊಲೀಸರು ತಾಂತ್ರಿಕ ಸಾಕ್ಷ್ಯಗಳ ಮೂಲಕ ನಿರ್ದಿಷ್ಟವಾದ ದೋಷರೋಪಣಾ ಪಟ್ಟಿ ಸಲ್ಲಿಸಲು ತಯಾರಿ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ದೂರು ಆಧರಿಸಿ ನಡೆಯುತ್ತಿರುವ ತನಿಖೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲೇ ಬೇಕಿದೆ. ಪ್ರಕರಣದಲ್ಲಿ ಈವರೆಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಕಚೇರಿ ಮತ್ತು ಪಕ್ಷದ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಗಳ ಪಾತ್ರ ಕಂಡು ಬರುತ್ತಿದೆ. ಆದರೆ ಕುಮಾರಸ್ವಾಮಿಯವರ ವಿರುದ್ಧವಾಗಿ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.
ಬಂಧನಕ್ಕೊಳಗಾಗಿ ಜಾಮೀನು ಪಡೆದಿರುವ ರಿತೇಶ್ ಪಾಂಡೆ ನೀಡಿರುವ ಹೇಳಿಕೆಯನ್ನಾಧರಿಸಿ ಪೊಲೀಸರು ಷಡ್ಯಂತ್ರದ ಬೆನ್ನು ಬಿದ್ದಿದ್ದಾರೆ. ಕುಮಾರಸ್ವಾಮಿಯವರ ಮನೆಯಲ್ಲಿ ಮೊಬೈಲ್ ಹಸ್ತಾಂತರವಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಹೇಳುವ ಮೂಲಕ ಪ್ರಕರಣಕ್ಕೆ ಸ್ಫೋಟಕ ತಿರುವು ನೀಡಿದ್ದಾರೆ.
ಈವರೆಗೂ ಕುಮಾರಸ್ವಾಮಿಯವರ ಕುರಿತಂತೆ ನಿಖರ ಅಭಿಪ್ರಾಯಗಳಿಲ್ಲದೇ ಅಲುಗಾಡುತ್ತಿದ್ದ ಅನುಮಾನದ ಮುಳ್ಳು ಆಯುಕ್ತರ ಹೇಳಿಕೆ ಬಳಿಕ ಒಂದೆಡೆ ಗಟ್ಟಿಯಾಗಿ ನಿಂತಂತಾಗಿದೆ. ರಾಜ್ಯ ಸರ್ಕಾರವು ಇದನ್ನೇ ಬಯಸಿದಂತೆ ಕಂಡು ಬರುತ್ತಿದ್ದು, ಕುಮಾರಸ್ವಾಮಿಯವರ ವಿರುದ್ಧ ಮತ್ತಷ್ಟು ದೃಢವಾದ ಸಾಕ್ಷ್ಯಗಳನ್ನು ಪತ್ತೆ ಹಚ್ಚುವಂತೆ ಪೊಲೀಸರ ಮೇಲೆ ಒತ್ತಡ ಹೆಚ್ಚುತ್ತಿವೆ ಎನ್ನಲಾಗಿದೆ.
ಸಮರ್ಥನೀಯ ಪುರಾವೆಗಳಿಲ್ಲದೇ ಕೇಂದ್ರ ಸಚಿವರನ್ನು ವಿಚಾರಣೆಗೆ ಕರೆಸುವುದರಿಂದ ನ್ಯಾಯಾಲಯದಲ್ಲಿ ಮುಖಭಂಗವಾಗಲಿದೆ ಮತ್ತು ರಾಜಕಾರಣದಲ್ಲಿ ಪ್ರತಿರೋಧಗಳನ್ನು ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಪ್ರತಿ ಹಂತದಲ್ಲೂ ಎಚ್ಚರಿಕೆ ಹೆಜ್ಜೆ ಇಡಲಾಗುತ್ತಿದೆ.
ಕುಮಾರಸ್ವಾಮಿ ದಿನನಿತ್ಯ ಹೇಳಿಕೆ ನೀಡಿ ಸ್ಟಿಂಗ್ ಆಪರೇಷನ್ ಕುರಿತಂತೆ ನಡೆಸುತ್ತಿದ್ದ ವಾಗ್ದಾಳಿಗಳಿಗೆ ಕಡಿವಾಣ ಹಾಕಲು ಆಯುಕ್ತರ ಹೇಳಿಕೆಯನ್ನು ಕಾಂಗ್ರೆಸ್ ಅಸ್ತ್ರವಾಗಿ ಬಳಸಿಕೊಂಡಿದೆ. ಆದರೆ ಇದನ್ನು ರಾಜಕೀಯವಾಗಿ ಮಾತ್ರ ಉಪಯೋಗಿಸಬಹುದೇ ಹೊರತು ನ್ಯಾಯಾಲಯದಲ್ಲಿ ಕಾನೂನಾತಕವಾಗಿ ಸಾಬೀತು ಪಡಿಸಲು ಕಷ್ಟಸಾಧ್ಯ ಎನ್ನಲಾಗಿದೆ.
ಮೇಲಾಗಿ ಸ್ಟಿಂಗ್ ಆಪರೇಷನ್ ಎಂಬುದು ನೈತಿಕ ಮೌಲ್ಯಗಳಿಗೆ ಸಂಬಂಧಪಟ್ಟಿದ್ದಾಗಿದ್ದು, ಕಾನೂನಿನಲ್ಲಿ ತೀವ್ರವಾದ ಅಪರಾಧ ಎನಿಸಿಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅವರ ಪ್ರಕರಣದಲ್ಲಿ ಸ್ಟಿಂಗ್ನ ಮೂಲ ವಿಡಿಯೋ ಈವರೆಗೂ ಬಹಿರಂಗವಾಗಿಲ್ಲ. ಯಾವುದೇ ಸ್ಟಿಂಗ್ ನಡೆದಿಲ್ಲ. ಎಲ್ಲವೂ ಕಟ್ಟುಕತೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈವರೆಗೂ ತನಿಖೆ ನಡೆಸಿದ ಪೊಲೀಸರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲೂ ಅದು ಪುನರುಚ್ಚಾರವಾಗಿದೆ.
ಪ್ರಕರಣದಲ್ಲಿ 2023ರ ಫೆಬ್ರವರಿ 25ರಂದು ವಿಡಿಯೋ ರೆಕಾರ್ಡ್ ಮಾಡಿರುವ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗಿದೆ, ಬಂಧಿಸಲಾಗಿಲ್ಲ. ಇದು ತನಿಖೆಯ ಉದ್ದೇಶಗಳ ಬಗ್ಗೆಯೂ ಅನುಮಾನ ಮೂಡಿಸುವಂತೆ ಮಾಡಿದೆ. ಕೆಲವರನ್ನು ರಕ್ಷಿಸಬೇಕು, ಇನ್ನೂ ಕೆಲವರನ್ನು ಶಿಕ್ಷಿಸಬೇಕೆಂಬ ಧೋರಣೆ ಪ್ರಕರಣದಲ್ಲಿ ಕಂಡು ಬರುತ್ತಿರುವುದರಿಂದ ಪೊಲೀಸರಿಗೆ ಕೈ ಕಟ್ಟಿ ಹಾಕುವಂತಾಗಿದ್ದು, ಸಾಕ್ಷ್ಯ ಸಂಗ್ರಹ ಸವಾಲಿನ ಕೆಲಸವಾಗಿದೆ.
ಮೂಲಗಳ ಪ್ರಕಾರ ಪ್ರಕರಣದಲ್ಲಿ ಕೇಂದ್ರ ಸಚಿವರನ್ನು ವಿಚಾರಣೆಗೊಳಪಡಿಸಬೇಕೆಂಬ ಒತ್ತಡಗಳು ತೀವ್ರವಾಗಿವೆ. ಆದರೆ ವಿಚಾರಣೆಗೆ ನೋಟೀಸ್ ನೀಡುವುದಾದರೆ ಸಮರ್ಪಕ ಸಾಕ್ಷ್ಯಗಳ ಅಗತ್ಯವಿದೆ. ಈ ಸಾಕ್ಷ್ಯಗಳನ್ನು ಬೆನ್ನತ್ತಿರುವ ಪೊಲೀಸರಿಗೆ ಪ್ರಜ್ವಲ್ ಪ್ರಸಾದ್-ರಿತೇಶ್ ಪಾಂಡೆ ನಡುವೆ ಹಣಕಾಸಿನ ವ್ಯವಹಾರ ನಡೆದಿರುವುದೇ ಪ್ರಮುಖ ಆಧಾರವಾಗಿದೆ. ಅದನ್ನು ಕುಮಾರಸ್ವಾಮಿಯವರೊಂದಿಗೆ ಜೋಡಿಸಲು ನಾನಾ ರೀತಿಯ ಕಸರತ್ತುಗಳು ನಡೆಯುತ್ತಿವೆ ಎಂದು ಹೇಳಲಾಗಿವೆ.
