ಬೆಂಗಳೂರು,ನ.3- ಇತ್ತೀಚೆಗೆ ನಡೆದಿರುವ ಇಬ್ಬರು ವಕೀಲರ ಕೊಲೆ ಹಾಗೂ ವೃತ್ತಿಪರ ವಕೀಲರ ಮೇಲಿನ ದೌರ್ಜನ್ಯ ಖಂಡಿಸಿ ವೃತ್ತಿನಿರತ ವಕೀಲರಿಗೆ ಸೂಕ್ತ ಭದ್ರತೆ ಹಾಗೂ ಪರಿಣಾಮಕಾರಿ ಕಾನೂನು ರಚನೆ ಒದಗಿಸಬೇಕು ಎಂದು ಆಗ್ರಹಿಸಿ ಬೆಂಗಳೂರು ವಕೀಲರ ಸಂಘದ ವತಿ ಯಿಂದ ಇಂದು ಹೈಕೋರ್ಟ್ ಎದುರು ಪ್ರತಿಭಟನೆ ನಡೆಸಲಾಯಿತು.
ಸಿಟಿ ಸಿವಿಲ್ ಕೋರ್ಟ್, ಹೈಕೋರ್ಟ್ ಸೇರಿದಂತೆ ಎಲ್ಲಾ ಕಲಾಪಗಳಿಂದ ದೂರ ಉಳಿದ ವಕೀಲರುಗಳು ಪ್ರತಿಭಟನೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.ರಾಜ್ಯಾದ್ಯಂತ ಎಲ್ಲಾ ವಕೀಲರ ಸಂಘಗಳು ಪ್ರತಿಭಟನೆಗೆ ಬೆಂಬಲ ನೀಡಿವೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರವೀಣ್‌ಗೌಡ, ಉಪಾಧ್ಯಕ್ಷ ಗಿರೀಶ್‌ಕುಮಾರ್ ತಿಳಿಸಿದ್ದಾರೆ.
ವೈಟ್‌ಫೀಲ್‌್ಡನ ವಕೀಲ ಮಂಜುನಾಥ್ ಹತ್ಯೆ, ಅನ್ನಪೂರ್ಣೇಶ್ವರಿನಗರದ ವಕೀಲ ಶ್ರೀರಾಮ್ ಕೊಲೆ, ಗೌರಿಬಿದನೂರಿನ ವಕೀಲ ವೆಂಕಟರಮಣ ಸಣ್ಣಕ್ಕಿ ಮೇಲಿನ ಕೊಲೆ ಯತ್ನ ಸೇರಿದಂತೆ ಅನೇಕ ಘಟನೆಗಳು ನಡೆದಿರುವುದು ವಕೀಲರ ಸುರಕ್ಷತೆಯ ಬಗ್ಗೆ ಅತ್ಯಂತ ಆತಂಕ ಮೂಡಿಸಿವೆ. ಅದಕ್ಕಾಗಿ ಪರಿಣಾಮಕಾರಿ ಕಾನೂನು ರಕ್ಷಣೆ ಒದಗಿಸಬೇಕು. ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಎಲ್ಲಾ ವಕೀಲರು ಇಂದು ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಿದ್ದರಿಂದ ಹೈಕೋರ್ಟ್ ಕಲಾಪವಿಲ್ಲದೆ ಖಾಲಿ ಖಾಲಿಯಾಗಿತ್ತು.
ಅಧ್ಯಕ್ಷರು ನ್ಯಾಯಾಧೀಶರಲ್ಲಿ ಮನವಿ ಮಾಡಿ ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದರಿಂದ ಯಾವುದೇ ರೀತಿಯ ವ್ಯತಿರಿಕ್ತ ಆದೇಶಗಳನ್ನು ನೀಡಬಾರದು ಎಂದು ಮನವಿ ಮಾಡಿದರು. ನ್ಯಾಯಾಧೀಶರು ಮನವಿಗೆ ಸ್ಪಂದಿಸಿ ಯಾವುದೇ ರೀತಿಯ ಆದೇಶ ನೀಡುವುದಿಲ್ಲ ಎಂಬ ಭರವಸೆ ನೀಡಿದರು. ವಕೀಲರು ನಿರ್ಭಯವಾಗಿ ಕೆಲಸ ಮಾಡುವಂತಹ ವಾತಾವರಣ ಇರಬೇಕು. ದಾಳಿಗಳನ್ನು ತಡೆಯಲು ರಕ್ಷಣಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ವಿವೇಕ್ ಸುಬ್ಬಾರೆಡ್ಡಿ ಹೇಳಿದರು.
